Headlines

ಚಿತ್ತಾಪುರ: ಆರೆಸ್ಸೆಸ್-ಭೀಮ್ ಆರ್ಮಿ ಪಥಸಂಚಲನ ಸಮರದ ಬೆನ್ನಲ್ಲೇ ಮತ್ತೆರಡು ಸಂಘಟನೆಗಳಿಂದಲೂ ಪಥಸಂಚಲನಕ್ಕೆ ಅರ್ಜಿ!

ಕಲಬುರಗಿ, ಅಕ್ಟೋಬರ್ 23: ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರ ಜಿಲ್ಲೆಯ ಚಿತ್ತಾಪುರ ಸದ್ಯ ರಾಜ್ಯಾದ್ಯಂತ ಸುದ್ದಿಯಲ್ಲಿದೆ. ಏಕೆಂದರೆ ಆರ್​​ಎಸ್​ಎಸ್​ ಪಥಸಂಚಲನ ಸಂಬಂಧ ಭಾರೀ ಪೈಪೋಟಿ ನಡೆದಿದ್ದು, ನವೆಂಬರ್ 2ರಂದು ಕೋರ್ಟ್ ಮೆಟ್ಟಿಲೇರಿ ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಆರ್​ಎಸ್​ಎಸ್​ ಅನುಮತಿಗಾಗಿ ಅರ್ಜಿ ಸಲ್ಲಿಸಿದೆ. ಇದಕ್ಕೆ ಪ್ರತಿಯಾಗಿ ದಲಿತ ಸಂಘಟನೆ ಭೀಮ್ ಆರ್ಮಿ ಸಹ ಅಂದೇ ಪಥಸಂಚಲನಕ್ಕೆ ಅನುಮತಿ ನೀಡಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ. ಇದೀಗ ಕುರುಬ ಸಮುದಾಯ ಸಹ ಎಸ್​​ಟಿ ಮೀಸಲಾತಿಗಾಗಿ ಪ್ರತಿಭಟನೆ ಮಾಡಲು ಮುಂದಾಗಿದೆ. ಇದರ ನಡುವೆ ಇದೀಗ ರೈತ ಸಂಘಟನೆ ಹಾಗೂ ಕ್ರಿಶ್ಚಿಯನ್‌ ಸಮುದಾಯ ಸಹ ಚಿತ್ತಾಪುರದಲ್ಲೇ ಪಥಸಂಚಲನ ಮಾಡಲು ನಿರ್ಧರಿಸಿದೆ. ಇದರಿಂದ ಎಲ್ಲರ ಚಿತ್ತ ಇದೀಗ ಚಿತ್ತಾಪುರದತ್ತ ನೆಟ್ಟಿದೆ.

ರೈತ ಪಥಸಂಚಲನಕ್ಕೂ ಅರ್ಜಿ!
ಯಾವಾಗ ಇಲ್ಲಿ ಆರೆಸ್ಸೆಸ್ ಪಥಸಂಚಲನ ಮಾಡಲು ಹೈಕೋರ್ಟ್ ಮೆಟ್ಟಿಲೆರಿತೋ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಸದ್ಯ ಆರೆಸ್ಸೆಸ್ ನವೆಂಬರ್ 2ರಂದು ಪಥಸಂಚಲನ ಮಾಡುತ್ತೇವೆ ಎಂದು ಹೇಳಿದ್ದೇ ತಡ ನಾನು ಮುಂದು ತಾ ಮುಂದು ಎನ್ನುವಂತೆ ಬೇರೆ ಬೇರೆ ಸಂಘಟನೆಗಳು ಆರ್ಜಿ ಸಲ್ಲಿಸುತ್ತಲೇ ಇವೆ. ಇವತ್ತು ರೈತಸಂಘಟನೆ ಕೂಡಾ ಎಂಟ್ರಿ ಕೊಟ್ಟಿದೆ. ಹೌದು…ನವೆಂಬರ್ 2ರಂದೇ ಕೇಂದ್ರಸರ್ಕಾರದ ವಿರುದ್ದ ಅತಿವೃಷ್ಟಿ ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಲು ಮುಂದಾಗಿದೆ. ರೈತ ಪಥಸಂಚಲನ ಸಂಬಂಧ ರಾಜ್ಯ ರೈತ ಸಂಘಟನೆ ಹಸಿರು ಸೇನೆ ಬಣ ಅನುಮತಿಗಾಗಿ ಆರ್ಜಿ ಹಾಕಿದೆ. ಆರೆಸ್ಸೆಸ್ ರೈತರ ಉದ್ದಾರಕ್ಕಾಗಿ ಮಾಡುತ್ತಿಲ್ಲ. ನಾವು ರೈತರಿಗಾಗಿ ಹಾಗೂ ಎನ್.ಡಿ.ಆರ್.ಎಫ್ ನಲ್ಲಿ ಕೇಂದ್ರಸರ್ಕಾರ ನಮಗೆ ಕಡಿಮೆ ಅನುದಾನ ನೀಡಿರುವುದನ್ನು ವಿರೋಧಿಸಿ ರೈತ ಪಥಸಂಚಲನ ಮಾಡಲಾಗುತ್ತೆ ಎಂದು ರೈತ ಸಂಘ ತಿಳಿಸಿದೆ.

ಇನ್ನು ನವೆಂಬರ್ 2ರಂದು ಚಿತ್ತಾಪುರದಲ್ಲಿ ಆರ್​​​ಎಸ್​​ಎಸ್​​ ಪಥಸಂಚಲನ ಮಾಡಲು ರಾಜ್ಯ ಕ್ರಿಶ್ಚಿಯನ್ ವೆಲ್ಪೇರ್ ಸೊಸೈಟಿ ಸಹ ಅನುಮತಿಗಾಗಿ ಆರ್ಜಿ ಸಲ್ಲಿಸಿದೆ.
ನವೆಂಬರ್ 2 ಭಾನುವಾರ ವಾರವಾಗಿರುವುದರಿಂದ ಕ್ರಿಶ್ಚಿಯನ್ ಸಮುದಾಯ ಸಹಜವಾಗೇ ಪ್ರಾರ್ಥನೆ ಮಾಡುತ್ತೆ. ಆದ್ರೆ ಅಂದು ಚರ್ಚ್​ ಬದಲಿಗೆ ಪ್ರಾರ್ಥನಾ ನಡಿಗೆ ಮಾಡುತ್ತೆವೆ ಎಂದು ಕ್ರಿಶ್ಚಿಯನ್ ಸಮುದಾಯ ಆರ್ಜಿ ಸಲ್ಲಿಕೆ ಮಾಡಿದೆ. ಆರೆಸ್ಸೆಸ್ ಗೆ ಕೌಂಟರ್ ಆಗಿ ನಾವು ಪ್ರಾರ್ಥನ ನಡಿಗೆ ಮಾಡುತ್ತಿಲ್ಲ. ಬದಲಾಗಿ ಶಾಂತಿ ಸುವ್ಯವಸ್ಥೆ ಅರಿವು ಮೂಡಿಸಲು ಮಾಡುತ್ತಿದ್ದೇವೆ. ಇದನ್ನ ಆರೆಸ್ಸೆಸ್ ಕೌಂಟರ್ ಅಂತ ತಿಳಿದುಕೊಂಡರೆ ಸ್ವಾಗತ ಮಾಡುತ್ತೇವೆ ಎಂದು ಕ್ರಿಶ್ಚಿಯನ್ ಸಮುದಾಯದ ಮುಖಂಡರು ಹೇಳುತ್ತಿದ್ದಾರೆ.

ನ.2ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ 7 ಅರ್ಜಿ
ಸದ್ಯ ಇಲ್ಲಿವರೆಗೆ ಚಿತ್ತಾಪುರದಲ್ಲಿ ನವೆಂಬರ್ 2ರಂದು ಪಥಸಂಚಲನ ಮಾಡಲು ಒಟ್ಟು 7 ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲಾ ಆರ್ಜಿಗಳನ್ನ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ಜಿಲ್ಲಾಡಳಿತ ಸಹ ಕೋಟ್೯ ವರದಿ ನೀಡಲಿದ್ದು, ಅದರ ಆದಾರದ ಮೇಲೆ ಕೋಟ್೯ ನಾಳೆ (ಅಕ್ಟೋಬರ್ 24) ವಿಚಾರಣೆ ನಡೆಸುತ್ತೆ. ಇದರಿಂದ ನಾಳೆ ನ್ಯಾಯಾಲಯದಲ್ಲಿ ಯಾರಿಗೆ ಅವಕಾಶ ಸಿಗುತ್ತೆ ಎನ್ನುವುದು ಕೂತುಹಲ ಮೂಡಿಸಿದೆ.

ಒಟ್ಟಿನಲ್ಲಿ ಆರ್ ಎಸ್ ಎಸ್ ಪಥಸಂಚಲನಕ್ಕೆ ಆರ್ಜಿ ಸಲ್ಲಿಸುತ್ತಿದ್ದಂತೆ ಉಳಿದವರು ಜಿದ್ದಿಗೆ ಬಿದ್ದವರಂತೆ ಆರ್ಜಿ ಸಲ್ಲಿಸಿದ್ದಾರೆ. ಅವೆಲ್ಲವೂ ನಾಳೆ ನ್ಯಾಯಾಲಯದ ಮುಂದೆ ಬರುತ್ತಿವೆ. ಹೀಗಾಗಿ ಎಲ್ಲರ ಚಿತ್ತ ನಾಳೆ ಕೋಟ್೯ ಕಲಾಪದತ್ತ ನೆಟ್ಟಿದೆ.

Leave a Reply

Your email address will not be published. Required fields are marked *

error: Content is protected !!