ಮಂಡ್ಯ: ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯತಿಯ ಆಡಳಿತ ಮಂಡಳಿ ಸಾಮಾಗ್ರಿ ಖರೀದಿಯಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ಎಸಗಿರುವ ಕುರಿತು ನಗರದಲ್ಲಿ ಲೋಕಾಯುಕ್ತಕ್ಕೆ ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸಂಚಾಲಕ ಬಿ.ಕೆ.ಸತೀಶರವರು (ಬೂಸ) ದೂರು ನೀಡಿದರು.

ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ್ ರವರು ಬೂದನೂರು ಗ್ರಾಮ ಪಂಚಾಯತಿ ಆಡಳಿತ ಮಂಡಳಿಯ ಅಧ್ಯಕ್ಷೆ ಮಾನಸ ಹಾಗೂ ಪಿಡಿಒ ವೈ.ಎಸ್.ವಿನಯ್ ಕುಮಾರ್ ಅವರು 2024-25ನೇ ಸಾಲಿನಲ್ಲಿ ಗ್ರಾಮ ಪಂಚಾಯತಿಯ ನೀರು ಸರಬರಾಜು ಸಾಮಾಗ್ರಿ ಖರೀದಿಯಲ್ಲಿ ಸರ್ಕಾರದ ಪಾರದರ್ಶಕ ನಿಯಮ ಪಾಲಿಸದೆ ಅಕ್ರಮ ಎಸಗಿರುವುದಲ್ಲದೆ ಹೆಚ್ಚಿನ ಹಣ ಪಾವತಿ ಮಾಡಿ ಸಾಮಾಗ್ರಿ ಖರೀದಿ ಮಾಡಿರುವುದು ಸ್ಪಷ್ಟವಾಗಿದೆ ಎಂದರು.
ದಿನಾಂಕ: 23-04-2024ರಂದು ಸಾಮಾಗ್ರಿ ಖರೀದಿ ಸಂಬಂಧ ಯಾವುದೇ ಪ್ರಕಟಣೆ, ಪತ್ರ ರವಾನೆ ಸಂಖ್ಯೆ ನಮೂದಿಸದೇ ದರ ಪಟ್ಟಿ ಪ್ರಕಟಣೆ ಮಾಡಿರುತ್ತಾರೆ. ಅದರಲ್ಲಿ ಮೊದಲನೇ ನಿಬಂಧನೆಯಾದ ಸರಬರಾಜುದಾರರು ತೆರಿಗೆಯನ್ನು ಒಳಗೊಂಡಂತೆ ದರ ನಮೂದಿಸಲು ಸೂಚಿಸಿದ್ದಾರೆ. ಅದರಂತೆ 2 ಜಿಎ ಪೈಪ್’ಗೆ ₹ 7600, 2 ಕಾಲರ್ ₹ 960, 4.5 ಮೀ ಕೇಬಲ್’ಗೆ ₹ 2475 ಹಾಗೂ ಟೇಪ್’ಗೆ ₹ 100 ಸೇರಿ ₹ 11, 135 ಕ್ಕೆ ದರಪಟ್ಟಿಯನ್ನು ಶ್ರೀ ತಿರುಪತಿ ಎಲೆಕ್ಟ್ರಿಕಲ್ಸ್ ಆಂಡ್ ಹಾಡ್೯ವೇರ್ ಮಂಡ್ಯ ಅವರಿಗೆ ದಿನಾಂಕ: 08-05-2024ರಂದು ಅಂಗೀಕರಿಸಲಾಗಿದೆ. ಆದರೆ ದಿನಾಂಕ: 13-05-2024ರಂದು 9% ಸಿಜಿಎಸ್’ಟಿ ಹಾಗೂ 9% ಎಸ್’ಜಿಎಸ್’ಟಿ ಎಂದು ₹ 2004, 30 ಹಣವನ್ನು ಹೆಚ್ಚುವರಿ ಪಾವತಿ ಮಾಡಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಮುಂದುವರಿದು ಸೇವಾ ಶುಲ್ಕ, ಲೇಬರ್ ಶುಲ್ಕ ಎಂದು ₹ 800 ಹಣವನ್ನು ಯಾವುದೇ ನಿರ್ದೇಶನವಿಲ್ಲದೆ ಹಣ ಪಾವತಿಸಲಾಗಿದೆ. ಹಾಗೂ ನಿಯಮಬಾಹಿರವಾಗಿ ತೆರಿಗೆ ಪ್ರತ್ಯೇಕ ಎಂದು ನಮೂದಿಸಿರುವ ಮಂಜುನಾಥ ಟ್ರೇಡರ್ಸ್, ನವೀನ್ ಹಾರ್ಡ್’ವೇರ್ ಮಂಡ್ಯ ಎಂಬ ವಾಣಿಜ್ಯ ಕೇಂದ್ರದ ಕೊಟೇಷನ್ ತಿರಸ್ಕರಿಸದೆ ಅಂಗೀಕರಿಸಲಾಗಿದೆ.
ಮುಂದುವರಿದು ತಿರುಪತಿ ಎಲೆಕ್ಟ್ರಿಕಲ್ ಮಂಡ್ಯ ಅವರ ಕೊಟೇಷನ್, ಬಿಲ್ಲು ಹೊರತುಪಡಿಸಿ ಮಂಜುನಾಥ ಟ್ರೇಡರ್ಸ್, ನವೀನ್ ಹಾರ್ಡ್’ವೇರ್ ಮಂಡ್ಯ ಅವರ ಕೊಟೇಷನ್ ಸದರಿ ಅಂಗಡಿಯ ನಕಲಿ ಕೊಟೇಷನ್ ಎಂಬ ಅಂಶ ಗಮನಿಸಬೇಕು ಎಂದು ಗಮನ ಸೆಳೆದಿದ್ದಾರೆ.
ಬಿಡ್’ದಾರರು ಗ್ರಾಮ ಪಂಚಾಯತಿಗೆ ತಮ್ಮ ಬಿಡ್ಡು ಕಳುಹಿಸಿರುವ ಯಾವುದೇ ಮಾಹಿತಿ ಇಲ್ಲ. ಕಚೇರಿಯ ಸ್ವೀಕೃತಿಯಲ್ಲಿಯೂ ಮೇಲಿನ ಮೂವರು ಬಿಡ್ ಮಾಡಿ ನೀಡಿರುವ ದಾಖಲೆ ಸಂಖ್ಯೆ ಇಲ್ಲ. ಸರಬರಾಜು ಆದೇಶ ಮಾಡಿರುವ ಬಗ್ಗೆ ರವಾನೆ ಸಂಖ್ಯೆ ನಮೂದಾಗಿಲ್ಲ. ಇದು ಒಬ್ಬನೇ ವಹಿವಾಟುದಾರ ನೇರವಾಗಿ ಬಂದು ಅಧ್ಯಕ್ಷೆ, ಪಿಡಿಒ ಅವರಿಗೆ ಅಮಿಷ, ಪ್ರಭಾವ ಬೀರಿ ಹಣ ಪಾವತಿಸಿಕೊಂಡು ಕಳಪೆ ಸಾಮಾಗ್ರಿ ಸರಬರಾಜು ಮಾಡಿರುವುದು ಕಂಡು ಬರುತ್ತಿದೆ.
ಮೇಲಿನ ಬಿಡ್ಡುದಾರರು ಸಾಮಾಗ್ರಿ ದರ ನಮೂದು ವೇಳೆ ಯಾವ ಕಂಪನಿಯ ವಸ್ತು, ತಯಾರಿಕೆ ದಿನಾಂಕ, ಬ್ಯಾಚ್ ಸಂಖ್ಯೆ ಯಾವುದು ಎಂಬುದನ್ನು ನಮೂದಿಸಿಲ್ಲ. ಕಡೆಯದಾಗಿ ಬಿಲ್ ಮಾಡಿರುವ ತಿರುಪತಿ ಎಲೆಕ್ಟ್ರಿಕಲ್ಸ್ ಎಂಬ ಅಂಗಡಿ ಈ ವಹಿವಾಟು ಕುರಿತು ಜಿಎಸ್’ಟಿ ಪಾವತಿಸಿರುವ ಕುರಿತು ಅನುಮಾನಗಳಿವೆ.
ಎರಡನೆಯದಾಗಿ ದಿನಾಂಕ: 23-04-2024ರಂದು ಶ್ರೀ ತಿರುಪತಿ ಎಲೆಕ್ಟ್ರಿಕಲ್ಸ್ ಆಂಡ್ ಹಾಡ್೯ವೇರ್ ಮಂಡ್ಯ ಅವರಿಗೆ ಹೊಸ ಮೋಟಾರ್ ಕೊರೆಸಲು ದರಪಟ್ಟಿ ಅನುಮೋದನೆ ಮಾಡಿದ್ದಾರೆ. ಸದರಿ ದಾಖಲೆ, ವಹಿವಾಟನ್ನು ತನಿಖೆಗೆ ಒಳಪಡಿಸಲು ಕೋರುತ್ತೇನೆ.
ಇದೇ ರೀತಿ ದಿನಾಂಕ: 15-04-2024 ರಂದು ಯಾವುದೇ ರವಾನೆ, ಪ್ರಕಟಣೆ ಇಲ್ಲದ ಪತ್ರದಲ್ಲಿ ದರಪಟ್ಟಿ ಆಹ್ವಾನ ಪ್ರಕಟಣೆ ಹೊರಡಿಸಲಾಗಿದೆ. ಅದರಲ್ಲಿ 10 ಸಾಮಾಗ್ರಿ ಪಟ್ಟಿ ಮಾಡಿದ ಬಳಿಕ ತುಲನಾತ್ಮಕ ದರ ಪಟ್ಟಿ ಪ್ರಕಾರ ಶ್ರೀ ತಿರುಪತಿ ಎಲೆಕ್ಟ್ರಿಕಲ್ಸ್ ಮತ್ತು ಹಾಡ್೯ವೇರ್ ಮಂಡ್ಯ ಅವರು, ₹ 46,870, ಮಂಜುನಾಥ ಟ್ರೇಡರ್ಸ್ ₹ 50,151 ಹಾಗೂ ನವೀನ್ ಹಾಡ್೯ವೇರ್ ಮಂಡ್ಯದವರಿಂದ ₹ 53,432 ದರಪಟ್ಟಿ ಸ್ವೀಕರಿಸಿ ನಿಯಮಬಾಹಿರವಾಗಿ ತೆರಿಗೆ ಹಣ ಪಾವತಿ ಮಾಡಿದ್ದಾರೆ.

ಪಿಡಿಓ ವಿನಯ್ ಕುಮಾರ್
ಮೂರನೇಯದಾಗಿ ದಿನಾಂಕ: ₹ 28-09-2023 ರಂದು ಶ್ರೀತಿರುಪತಿ ಎಲೆಕ್ಟ್ರಿಕಲ್ಸ್ ಆಂಡ್ ಹಾರ್ಡ್’ವೇರ್ ಮಂಡ್ಯ ಅವರಿಗೆ ₹ 8,830 ರ ದರಪಟ್ಟಿ ಅನುಮೋದಿಸಿ ದಿನಾಂಕ: 29-09-2024ರಲ್ಲಿನ ಬಿಲ್ಲಿಗೆ ಸದರಿ ಅಂಗಡಿಗೆ ₹ 11,219 ಪಾವತಿಸಿ ಭ್ರಷ್ಟಾಚಾರ ಎಸಗಲಾಗಿದೆ. ಅಂದರೆ ₹ 2,389 ರಷ್ಟು ಹಣವನ್ನು ಹೆಚ್ಚು ಪಾವತಿಸಿ ಭ್ರಷ್ಟಾಚಾರ ಎಸಗಲಾಗಿದೆ.
ದಿನಾಂಕ: 19-02-2024ರಂದು 3 ವಿವಿಧ ನೀರು ಸಾಮಾಗ್ರಿ ಖರೀದಿ ಸಂಬಂಧ ಆದೇಶ ಮಾಡಿಕೊಂಡು ದಿನಾಂಕ: 02-03-2024ರಂದು ನವೀನ್ ಹಾಡ್೯ವೇರ್ ₹ 62,878, ಮಂಜುನಾಥ ಟ್ರೇಡರ್ಸ್ ₹ 59,017 ಹಾಗೂ ಶ್ರೀ ತಿರುಪತಿ ಎಲೆಕ್ಟ್ರಿಕಲ್ಸ್ ಆಂಡ್ ಹಾಡ್೯ವೇರ್ ಮಂಡ್ಯದ ₹ 55,156 ಮೊತ್ತದ ಕೊಟೇಷನ್ ಅಂಗೀಕಾರ ಮಾಡಿ ಆದೇಶ ಮಾಡಲಾಗಿದೆ. ಆದರೆ ಯಾವುದೇ ಕಚೇರಿ ರವಾನೆ ಸಂಖ್ಯೆ, ಕೊಟೇಷನ್ ಸ್ವೀಕೃತಿ ಸಂಖ್ಯೆ ದಾಖಲೆ ಇಲ್ಲ. ಅಲ್ಲದೆ ಸದರಿ ಬಿಲ್ ಅನುಮೋದನೆ ಮೊತ್ತ ₹ 55,156ರ ಬದಲು ತೆರಿಗೆ, ಸಾರಿಗೆ ವೆಚ್ಚ ಎಂದು ₹ 66,084 ಮೊತ್ತದ ಹಣ ಪಾವತಿಸಿ ₹ 10,928 ರಷ್ಟು ಹಣವನ್ನು ಭ್ರಷ್ಟಾಚಾರ ಮಾಡಲಾಗಿದೆ.
ಶ್ರೀ ನಂದಿ ಎಲೆಕ್ಟ್ರಿಕಲ್ ಮತ್ತು ಹಾಡ್೯ವೇರ್ ಮಂಡ್ಯ ಎಂಬುವವರಿಗೆ ಪಿಡಿಒ ಗೆಜ್ಜಲಗೆರೆ ಎಂಬ ದಿನಾಂಕ ನಮೂದಾಗಿರದ ಬಿಲ್’ಗೆ ₹ 9841ಹಣ ಪಾವತಿಸಿ ಭ್ರಷ್ಟಾಚಾರ ಎಸಗಲಾಗಿದೆ.

ದಿನಾಂಕ: 21-05-2024ರಂದಯ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾನಸ ಹಾಗೂ ಪಿಡಿಒ ವೈ.ಎಸ್.ವಿನಯ್ ಕುಮಾರ್ 6 ಹೆಚ್.ಪಿ 10 ಸ್ಟೇಜ್ ಮೋಟಾರ್ ಪಂಪ್ ಗೆ ಶ್ರೀ ತಿರುಪತಿ ಎಲೆಕ್ಟ್ರಿಕಲ್ ಮತ್ತು ಹಾಡ್೯ವೇರ್ ಮಂಡ್ಯ ಅವರಿಗೆ ತೆರಿಗೆ ಒಳಗೊಂಡಂತೆ ₹ 28,500 ನಮೂದಿಸಿ ಆದೇಶ ಮಾಡಿ ಜಿಎಸ್ಟಿ ತೆರಿಗೆ, ಸೇವಾ ಶುಲ್ಕ ಸೇರಿ ₹ 36,630 ಹಣ ಪಾವತಿಸಿ ₹ 8130 ಹಣ ದುರುಪಯೋಗ ಮಾಡಲಾಗಿದೆ.
ಇದಲ್ಲದೆ ವಾರ್ಷಿಕ ಸಾಮಾಗ್ರಿಪಟ್ಟಿ ಮಾಡಿ ಪಾರದರ್ಶಕ ನಿಯಮಾನುಸಾರ ಸಾಮಾಗ್ರಿ ಖರೀದಿ ಮಾಡುವ ನಿಯಮ ಉಲ್ಲಂಘಿಸಲಾಗಿದೆ. ಕನಿಷ್ಠ ಕಚೇರಿ ಪ್ರಕಟಣಾ ಫಲಕದಲ್ಲೂ ಯಾವುದೇ ವಿಚಾರ, ಮಾಹಿತಿ ನೀಡಿಲ್ಲ. ಸಾಮಾಗ್ರಿ ಖರೀದಿಗೆ ಮುನ್ನಾ ಮತ್ತು ಹಣ ಪಾವತಿಗೆ ಮೊದಲು ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯ ಅನುಮೋದನೆ ಕೂಡ ಮಾಡಿಕೊಂಡಿಲ್ಲ. ಈ ಅಕ್ರಮದಲ್ಲಿ ಗ್ರಾಮ ಪಂಚಾಯತಿಯ ಆಡಳಿತ ಮಂಡಳಿ ಸದಸ್ಯರು, ಕೆಲ ಸಿಬ್ಬಂದಿ ಭಾಗಿಯಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಇದಲ್ಲದೆ ಇನ್ನೂ ಹೆಚ್ಚಿನ ಬಿಲ್ ಗಳನ್ನು 2021-22 ನೇ ಸಾಲಿನಿಂದ ಮಾಡಿರುವ ಶಂಕೆಯಿದ್ದು ಪೂರ್ಣ ತನಿಖೆ ಮಾಡಲು ಲೋಕಾಯುಕ್ತಕ್ಕೆ ಒತ್ತಾಯಿಸಿದರು.


