Headlines

ನಟ ಉಪೇಂದ್ರ-ಪ್ರಿಯಾಂಕಾ ಮೊಬೈಲ್ ಹ್ಯಾಕ್ ಮಾಡಿ ಹಣ ದೋಚಿದ ಖದೀಮರು

ಬೆಂಗಳೂರು, ಸೆ.15; ನಟ-ನಿರ್ದೇಶಕ ಉಪೇಂದ್ರ ಹಾಗೂ ಪತ್ನಿ- ನಟಿ ಪ್ರಿಯಾಂಕಾಗೆ ಇಂದು (ಸೆಪ್ಟೆಂಬರ್ 15) ಸೈಬರ್ ಖದೀಮರು ಶಾಕ್ ನೀಡಿದ್ದಾರೆ. ಈ ದಂಪತಿಗಳಿಬ್ಬರ ಮೊಬೈಲ್ಗಳನ್ನು ಹ್ಯಾಕ್ ಮಾಡಲಾಗಿದೆ. ಬಳಿಕ ಪರಿಚಯದವರಿಗೆ ವಾಟ್ಸಪ್ ಮೂಲಕ ಸಂದೇಶ ಕಳಿಸಿ ಹಣ ಕೊಡುವಂತೆ ಮನವಿ ಮಾಡಿದ್ದಾರೆ. ಹ್ಯಾಕರ್​​ಗಳ ಈ ಜಾಲಕ್ಕೆ ಕೆಲವರು ಹಣ ಕಳೆದುಕೊಂಡಿದ್ದಾರೆ. ಸ್ವತಃ ಉಪೇಂದ್ರ ಅವರ ಮಗ ಆಯುಷ್ ಕೂಡ 55 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ಈ ಘಟನೆ ಹೇಗೆ ನಡೆಯಿತು? ಎಂಬುದನ್ನು ಉಪೇಂದ್ರ ಅವರು ವಿವರಿಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಉಪೇಂದ್ರ ಅವರು ಈ ಬಗ್ಗೆ ಮಾಹಿತಿ ನೀಡಿದರು.

‘ಯಾರಿಗೂ ಈ ರೀತಿ ಆಗಬಾರದು. ಯಾವುದೋ ಒಂದು ನಂಬರ್​​ನಿಂದ ಪ್ರಿಯಾಂಕಾ ಅವರಿಗೆ ಕರೆ ಬಂತು. ನೀವು ಏನೋ ಐಟಂ ಆರ್ಡರ್ ಮಾಡಿದ್ದೀರಿ, ಅದಕ್ಕೆ ನಿಮ್ಮ ಅಡ್ರೆಸ್ ಹುಡುಕುತ್ತಿದ್ದಾರೆ, ಸ್ಟಾರ್ ಹಾಗೂ ಹ್ಯಾಶ್ ಇರುವ ಒಂದು ನಂಬರ್​​ಗೆ ಕರೆ ಮಾಡಿ ಎಂದು ಹ್ಯಾಕರ್​​ಗಳು ಹೇಳಿದರು. ಪ್ರಿಯಾಂಕಾ ಫೋನ್​​ನಿಂದ ಆಗಲಿಲ್ಲ. ಬಳಿಕ ನನ್ನ ಫೋನ್ ಹಾಗೂ ಮ್ಯಾನೇಜರ್ ಮಾದೇವ ಅವರ ಫೋನ್​​ನಿಂದ ಪ್ರಯತ್ನಿಸಿದೆವು. ನಮ್ಮ‌ ಮೂವರ ಮೊಬೈಲ್ ಕೂಡ ಹ್ಯಾಕ್ ಆಯಿತು’ ಎಂದು ಉಪೇಂದ್ರ ಹೇಳಿದ್ದಾರೆ.

‘ಹ್ಯಾಕ್ ಆದ ಬಳಿಕ ನಮ್ಮ ಫೋನಿಂದ ಬೇರೆಯವರಿಗೆ ಮೆಸೇಜ್ ಹೋಗುತ್ತಿದೆ. ಅರ್ಜೆಂಟಾಗಿ 55 ಸಾವಿರ ರೂಪಾಯಿ ಕಳಿಸಿ ಅಂತ ಎಲ್ಲರಿಗೂ ಕೇಳುತ್ತಿದ್ದಾರೆ. ಖಚಿತಪಡಿಸಿಕೊಳ್ಳಲು ಫೋನ್ ಮಾಡಿದರೆ ರೀಚ್ ಆಗುವುದಿಲ್ಲ. ಏನೋ ಎಮರ್ಜೆನ್ಸಿ ಇರಬಹುದು ಎಂದು ನಮಗೆ ಗೊತ್ತಿರುವ ಕೆಲವರು ದುಡ್ಡು ಕಳಿಸಿದ್ದಾರೆ. ಕೂಡಲೇ ನಾವು ಇಲ್ಲಿ ಬಂದು ದೂರು ನೀಡಿದ್ದೇನೆ. ಇಂಥ ಮೆಸೇಜ್ ಬಂದರೆ ದಯವಿಟ್ಟು ಯಾರೂ ಕೂಡ ದುಡ್ಡು ಕಳಿಸಬೇಡಿ’ ಎಂದು ಉಪೇಂದ್ರ ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

‘ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ. ನನ್ನ ಮಗನಿಗೂ ಹಾಗೆಯೇ ಆಗಿದೆ. ನಿಜ ಇರಬಹುದು ಎಂದುಕೊಂಡು ಅವರು ದುಡ್ಡು ಹಾಕಿದ್ದಾನೆ. ಕೆಲವು ಸ್ನೇಹಿತರದ್ದೂ ಸೇರಿ ಲಕ್ಷಾಂತರ ರೂಪಾಯಿ ಹೋಗಿದೆ. ಇನ್ನೂ ಯಾರೆಲ್ಲ ಮಾಡಿದ್ದಾರೋ ಗೊತ್ತಿಲ್ಲ. ಅದನ್ನೆಲ್ಲ ಚೆಕ್ ಮಾಡಬೇಕು’ ಎಂದಿದ್ದಾರೆ ಉಪೇಂದ್ರ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಅವರು ತಿಳಿಸಿದ್ದಾರೆ.

ಹ್ಯಾಕರ್​​​ಗಳ ಕೃತ್ಯದ ಬಗ್ಗೆ ತಿಳಿಯುತ್ತಿದ್ದಂತೆಯೇ ಉಪೇಂದ್ರ ಮತ್ತು ಪ್ರಿಯಾಂಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಹ್ಯಾಕರ್​​ಗಳ ಜಾಲಕ್ಕೆ ಹೆಚ್ಚಿನ ಜನರು ಸಿಕ್ಕಿಕೊಳ್ಳದಂತೆ ತಪ್ಪಿಸಲು ಪ್ರಯತ್ನಿಸಿದ್ದಾರೆ. ತನಿಖೆ ಬಳಿಕ ಹ್ಯಾಕರ್​​ಗಳ ಬಗ್ಗೆ ಮಾಹಿತಿ ಸಿಗಬೇಕಿದೆ.

Leave a Reply

Your email address will not be published. Required fields are marked *

error: Content is protected !!