ಬಳ್ಳಾರಿ,ಜುಲೈ 11: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾನೂ ಕೂಡ ಆಕಾಂಕ್ಷಿ ಎಂದು ಹೇಳುವ ಮೂಲಕ ಹಾಲಿ ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಪೈಪೋಟಿ ನೀಡಲಾರಂಭಿಸಿದ್ದಾರೆ.
ಈಗಾಗಲೇ ಒಂದು ಅವಧಿಗೆ ಕೆಎಂಎಫ್ ಅಧ್ಯಕ್ಷರಾಗಿ ಅಧಿಕಾರ ಪೂರ್ಣಗೊಳಿಸಿರುವ ಭೀಮಾನಾಯಕ್ 2ನೇ ಅವಧಿಗೂ ಮತ್ತೊಮೆ ಅಧ್ಯಕ್ಷ ಸ್ಥಾನ ಗಿಟ್ಟಿಸಲು ಪ್ರಯತ್ನ ನಡೆಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಹಗರಿಬೊಮನಹಳ್ಳಿ ಕ್ಷೇತ್ರದ ಮಾಜಿ ಶಾಸಕರಾಗಿರುವ ಭೀಮಾನಾಯಕ್ ಕಳೆದ ಬಾರಿ ಕೆಎಂಎಫ್ ಅಧ್ಯಕ್ಷರಾಗಿ ತಮ್ಮ ರಾಜಕೀಯ ಭವಿಷ್ಯ ಕಂಡುಕೊಂಡಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹೋದರರೂ ಆಗಿರುವ ಮಾಜಿ ಸಂಸದ ಡಿ.ಕೆ.ಸುರೇಶ್ ಕೆಎಂಎಫ್ ಅಧ್ಯಕ್ಷರಾಗಲು ಒಳಗೊಳಗೇ ತಯಾರಿ ನಡೆಸುತ್ತಿದ್ದಾರೆ.
ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಕಳೆದ ಬಾರಿಯಿಂದಲೂ ಶಾಸಕ ಕೆ.ವೈ.ನಂಜೇಗೌಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬಂಗಾರಪೇಟೆ ಕ್ಷೇತ್ರದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೂಡ ಪೈಪೋಟಿ ನಡೆಸಿದ್ದರು. ಡಿ.ಕೆ.ಸುರೇಶ್ ಪ್ರವೇಶದಿಂದಾಗಿ ಕೆಎಂಎಫ್‌ನ ಪೈಪೋಟಿ ತೀವ್ರಗೊಂಡಿದ್ದು, ಕೆ.ವೈ.ನಂಜೇಗೌಡ, ಭೀಮಾನಾಯಕ್ ಹಾಗೂ ಡಿ.ಕೆ.ಸುರೇಶ್ ಈ ಮೂವರ ನಡುವೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಭಾರೀ ಸೆಣೆಸಾಟ ಆರಂಭಗೊಂಡಿದೆ.
ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆಯೋ? ಅವರಿಗೆ ಅವಕಾಶ ಸಿಗಲಿದೆ ಎಂದು ಹೇಳಲಾಗಿದ್ದರೂ ಡಿ.ಕೆ.ಶಿವಕುಮಾರ್ ತಮ್ಮ ಸಹೋದರ ಮಾಜಿ ಸಂಸದ ಡಿ.ಕೆ ಸುರೇಶ್ ಅವರನ್ನು ಕೆಎಂಎಫ್‌ನಲ್ಲಿ ಪ್ರತಿಷ್ಠಾಪಿಸಲು ಭಾರೀ ಪ್ರಯತ್ನ ಮಾಡುತ್ತಿದ್ದಾರೆ.ಹೈಕಮಾಂಡ್ ಮಟ್ಟದಲ್ಲಿ ಹಲವಾರು ಹೊಂದಾಣಿಕೆಗಳ ಮೂಲಕ ಡಿ.ಕೆ.ಸುರೇಶ್‌ಗಾಗಿ ಡಿ.ಕೆ.ಶಿವಕುಮಾರ್ ತ್ಯಾಗ ಮಾಡಿದಂತೆ ಕಂಡುಬರುತ್ತಿದೆ.

