Headlines

ಪರಪ್ಪನ‌ ಅಗ್ರಹಾರ ಸೇರೊ‌ ಮುನ್ನ ಲುಕ್ ಬದಲಾಯಿಸಿದ ದರ್ಶನ್!

ಬೆಂಗಳೂರು, ಆಗಸ್ಟ್ 16: ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ ತೂಗುದೀಪ್, ಪವಿತ್ರಾಗೌಡ ಹಾಗೂ ಇನ್ನೂ ಕೆಲವರು ಮತ್ತೆ ಬಂಧನಕ್ಕೆ ಒಳಗಾಗಿದ್ದು ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಎಲ್ಲರನ್ನೂ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದಾರೆ. ಹೀಗೆ ನ್ಯಾಯಾಂಗ ಬಂಧನಕ್ಕೆ ಕಳಿಸುವ ಮುಂಚೆ ಎಲ್ಲ ಆರೋಪಿಗಳ ಚಿತ್ರಗಳು, ಬೆರಳಚ್ಚು ತೆಗೆದುಕೊಂಡು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಕೊಂಡಿದ್ದರು.

ನ್ಯಾಯಾಂಗ ಬಂಧನಕ್ಕೆ ಕಳಿಸುವ ಮುಂಚೆ ತೆಗೆದುಕೊಂಡಿದ್ದ ಕೆಲ ಆರೋಪಿಗಳ ಚಿತ್ರಗಳು ಇದೀಗ ವೈರಲ್ ಆಗಿವೆ. ನಟ ದರ್ಶನ್, ಪವಿತ್ರಾ ಸೇರಿದಂತೆ ಒಟ್ಟು 5 ಮಂದಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಶರಣಾಗಿ ಅಲ್ಲಿಂದ ನ್ಯಾಯಾಂಗ ಬಂಧನಕ್ಕೆ ಹೋಗಿದ್ದರು. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಶರಣಾದ ಆರೋಪಿಗಳ ಚಿತ್ರಗಳನ್ನು ನಿಯಮದಂತೆ ಪೊಲೀಸರು ತೆಗೆದಿದ್ದರು.

ಜೈಲಿಗೆ ಹೋಗುವ ಮುನ್ನ ತೆಗೆದಿರುವ ಚಿತ್ರದಲ್ಲಿ ದರ್ಶನ್ ಲುಕ್ ಸಂಪೂರ್ಣವಾಗಿ ಬದಲಾಗಿದೆ. ದರ್ಶನ್ ತಲೆಗೂದಲು ಸಂಪೂರ್ಣವಾಗಿ ಬೋಳಿಸಿಕೊಂಡು ಬೋಳು ತಲೆ ಮಾಡಿಕೊಂಡಿದ್ದಾರೆ. ದರ್ಶನ್ ಅವರು ದೇವಾಲಯವೊಂದಕ್ಕೆ ಮುಡಿಕೊಟ್ಟಿದ್ದಾರೆ ಎನ್ನಲಾಗಿದೆ. ಬಂಧನಕ್ಕೆ ಒಳಗಾಗುವ ದಿನದಂದು ದರ್ಶನ್ ಮಾದೇಶ್ವರ ಬೆಟ್ಟಕ್ಕೆ ತೆರಳಿ ದೇವರಿಗೆ ಮುಡಿ ಕೊಟ್ಟು ಬಂದಿದ್ದರು. ಅಲ್ಲಿಂದ ಬೆಂಗಳೂರಿಗೆ ಬಂದ ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದರು.

ಇನ್ನು ಪವಿತ್ರಾ ಗೌಡ ಅವರ ಫೋಟೊವನ್ನು ಸಹ ಕ್ಲಿಕ್ಕಿಸಲಾಗಿದ್ದು, ಇನ್​ಸ್ಟಾಗ್ರಾಂ ಫೋಟೊ, ರೀಲ್ಸ್​ಗಳ ರೀತಿ ಅಲ್ಲದೆ ಸಾಮಾನ್ಯವಾಗಿ ಫೋಟೊ ತೆಗೆಸಿಕೊಂಡಿದ್ದಾರೆ. ಈಗ ವೈರಲ್ ಆಗಿರುವ ಒಂದು ಫೋಟೊನಲ್ಲಿ ನಗುತ್ತಿದ್ದಾರೆ ಪವಿತ್ರಾ ಗೌಡ. ಫೋಟೊನಲ್ಲಿ ಅವರು ತುಟಿಗೆ ಹಚ್ಚಿರುವ ಲಿಪ್​ಸ್ಟಿಕ್ ಎದ್ದು ಕಾಣುತ್ತಿದೆ. ಕಳೆದ ಬಾರಿ ಪವಿತ್ರಾಗೌಡ ಬಂಧನವಾದಾಗ ಇದೇ ಲಿಪ್​ಸ್ಟಿಕ್ ಕಾರಣಕ್ಕೆ ಮಹಿಳಾ ಕಾನ್ಸ್​ಟ್ರೇಬಲ್ ಒಬ್ಬರು ಅಮಾನತ್ತಾಗಿದ್ದರು.

ಜಾಮೀನಿನ ಮೇಲೆ ಹೊರಬಂದು ಆರಾಮದ ಜೀವನ ನಡೆಸುತ್ತಿದ್ದ ದರ್ಶನ್, ಪವಿತ್ರಾ ಹಾಗೂ ಇನ್ನಿತರೆ ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ಹೈಕೋರ್ಟ್, ಜಾಮೀನು ನೀಡುವ ಸಮಯದಲ್ಲಿ ಸೂಕ್ತ ನಿಯಮಗಳನ್ನು ಅನುಸರಿಸಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಒಟ್ಟು 7 ಮಂದಿ ಆರೋಪಿಗಳ ಜಾಮೀನು ರದ್ದಾಗಿದೆ.

Leave a Reply

Your email address will not be published. Required fields are marked *

error: Content is protected !!