Headlines

ತಮ್ಮ ಜಾಮೀನು ರದ್ದುಗೊಳಿಸಬಾರದೆಂದು ಸುಪ್ರೀಂಕೋರ್ಟಿಗೆ ಲಿಖಿತ ಕಾರಣಗಳನ್ನು ನೀಡಿದ ದರ್ಶನ್

ನವದೆಹಲಿ, ಆಗಸ್ಟ್ 6: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರುಗಳ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಚಾಲ್ತಿಯಲ್ಲಿದೆ. ಕರ್ನಾಟಕ ಹೈಕೋರ್ಟ್, ದರ್ಶನ್ ಹಾಗೂ ಇತರರಿಗೆ ಜಾಮೀನು ನೀಡುವಾಗ ಸೂಕ್ತ ಮಾನದಂಡಗಳನ್ನು ಅನುಸರಿಸಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದ್ದು, ದರ್ಶನ್ ಮತ್ತು ಪವಿತ್ರಾ ಗೌಡಗೆ ಮತ್ತೆ ಜೈಲು ಸೇರುವ ಭೀತಿ ಶುರುವಾಗಿದೆ. ಇದೀಗ ದರ್ಶನ್ ಪರ ವಕೀಲರು ತಮ್ಮ ಜಾಮೀನು ರದ್ದು ಮಾಡದೇ ಇರಲು ಲಿಖಿತ ಕಾರಣಗಳನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ಇಬ್ಬರೂ ನೀಡಿರುವ ಕಾರಣಗಳು ಇಲ್ಲಿವೆ…

ಸರ್ಕಾರವು ಸಹ ಲಿಖಿತ ಕಾರಣಗಳನ್ನು ಸುಪ್ರೀಂಕೋರ್ಟ್​​​ಗೆ ನೀಡಿದ್ದು, ದರ್ಶನ್ ಹಾಗೂ ಪವಿತ್ರಾ ಅವರುಗಳು ರೇಣುಕಾ ಸ್ವಾಮಿಯ ಅಪಹರಣ ಮತ್ತು ಕೊಲೆಯಲ್ಲಿ ಸಕ್ರಿಯರಾಗಿ ಭಾಗಿ ಆಗಿದ್ದರು ಎಂದು ಆರೋಪಿಸಿದೆ. ಇದೀಗ ದರ್ಶನ್ ಪರ ವಕೀಲರು ನೀಡಿರುವ ಲಿಖಿತ ಕಾರಣಗಳಲ್ಲಿ, ದರ್ಶನ್ ಅವರ ಬಂಧನದ ಪ್ರಕ್ರಿಯೆ ಬಗ್ಗೆ ಪ್ರಶ್ನೆ ಮಾಡಲಾಗಿದೆ. ದರ್ಶನ್ ರನ್ನು ಮೈಸೂರಿನಲ್ಲಿ ಬಂಧಿಸಲಾಗಿತ್ತು, ಬೆಂಗಳೂರಿನಲ್ಲಿ FIR ದಾಖಲು, ಬಂಧನಕ್ಕೆ ಕಾರಣವನ್ನು ಸಂಜೆ 6:30 ರವರೆಗೂ ಲಿಖಿತವಾಗಿ ನೀಡಿರುವುದಿಲ್ಲ. ಬಂಧನಕ್ಕೆ ಕಾರಣಗಳನ್ನು ನೀಡದೆ ಇರುವುದು ಕಾನೂನು ಉಲ್ಲಂಘನೆ ಎಂದಿದ್ದಾರೆ.

ದರ್ಶನ್ ಜಾಮೀನು ರದ್ದುಪಡಿಸುವುದು ಕಠಿಣ ಕ್ರಮವಾಗಲಿದೆ, ದರ್ಶನ್ ಯಾವುದೇ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ ಅಪಹರಣದಲ್ಲಿ ದರ್ಶನ್ ಪಾತ್ರದ ಬಗ್ಗೆ ಯಾವುದೆ ಸಾಕ್ಷ್ಯವಿಲ್ಲ, ಅಪಹರಣಕ್ಕೆ ದರ್ಶನ್ ಸೂಚನೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ, ದರ್ಶನ್ ಮತ್ತು ಎ-3 ನಡುವೆ ಕರೆಗಳು ಅಥವಾ ವಾಟ್ಸಾಪ್ ಸಂದೇಶಗಳ ವಿನಿಮಯ ಆಗಿಲ್ಲ. ಸಾಕ್ಷಿಗಳಾದ ಕಿರಣ್, ಮಲ್ಲಿಕಾರ್ಜುನ್ ಮತ್ತು ನರೇಂದ್ರ ಸಿಂಗ್ ಅವರ ಹೇಳಿಕೆಗಳ ವಿಶ್ವಾಸಾರ್ಹತೆ ಬಗ್ಗೆ ಅನುಮಾನವಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ನಡೆದ 7 ದಿನಗಳ ನಂತರ ಕಿರಣ್ ಹೇಳಿಕೆ ದಾಖಲಿಸಲಾಗಿದೆ, ಸಾಕ್ಷಿಗಳಾದ ಮಲ್ಲಿಕಾರ್ಜುನ್ ಮತ್ತು ನರೇಂದ್ರ ಸಿಂಗ್ ಕೋರ್ಟ್‌ನಲ್ಲಿ ದರ್ಶನ್ ಹೆಸರನ್ನು ಉಲ್ಲೇಖಿಸಿಲ್ಲ, ಮೂರು ಸೆಕೆಂಡ್ ವೀಡಿಯೊ ಇದೆ ಎಂದು ರಾಜ್ಯ ಸರಕಾರ ಹೇಳುತ್ತಿದೆ. ಆದರೆ ರಾಜ್ಯ ಸರ್ಕಾರದ ವಾದದಲ್ಲಿ ಹುರುಳಿಲ್ಲ, ಮೂರು ಸೆಕೆಂಡ್ ಗಳ ವಿಡಿಯೋ ಅಸ್ತಿತ್ವದಲ್ಲೇ ಇಲ್ಲ. 3 ಸೆಕೆಂಡಿನ ವಿಡಿಯೋ ಬಗ್ಗೆ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಆಗಿಲ್ಲ ಅಥವಾ ಹೈಕೋರ್ಟ್‌ನಲ್ಲಿ ಸಲ್ಲಿಸಿಲ್ಲ, ಮರಣದ ಸಮಯವನ್ನು ಪ್ರಾಸಿಕ್ಯೂಷನ್ ಕಥೆಗೆ ಅನುಗುಣವಾಗಿ ನಿರ್ಧರಿಸಲಾಗಿದೆ ಎಂದು ಕಾರಣಗಳನ್ನು ನೀಡಲಾಗಿದೆ. ಇನ್ನೂ ಕೆಲವು ಕಾರಣಗಳನ್ನು ದರ್ಶನ್ ಪರ ವಕೀಲರು ನೀಡಿದ್ದು, ಈ ಎಲ್ಲ ಕಾರಣಗಳನ್ನು ಪರಿಗಣಿಸಿ ದರ್ಶನ್ ಜಾಮೀನನ್ನು ರದ್ದು ಮಾಡಬಾರದು ಎಂದು ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!