Headlines

ದೆಹಲಿ: ಸಿಎಂ ಸಿದ್ದರಾಮಯ್ಯರ ಬೇಡಿಕೆಗಳಿಗೆ ರಕ್ಷಣಾ ಸಚಿವರಿಂದ ಗ್ರೀನ್ ಸಿಗ್ನಲ್!

ನವದೆಹಲಿ, ಜುಲೈ 9: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಶುರುವಾಗಿದೆ. ನಾಡಹಬ್ಬಕ್ಕೆ ಈಗಾಗಲೇ ಮುಹೂರ್ತ ನಿಗದಿಯಾಗಿದ್ದು, ಸಿದ್ಧತೆಗಳು ಸದ್ದಿಲ್ಲದೆ ಶುರುವಾಗುತ್ತಿವೆ. ಇನ್ನು ಈ ಬಾರಿ ಮೈಸೂರು ದಸರಾದಲ್ಲಿ ಏರ್​ ಶೋ ಆಯೋಜಿಸಲು ರಾಜ್ಯಸರ್ಕಾರ ಮುಂದಾಗಿದ್ದು, ಇದಕ್ಕೆ ಅನುಮತಿ ನೀಡುವಂತೆ ಖುದ್ದು ಸಿಎಂ ಸಿದ್ದರಾಮಯ್ಯ ಅವರು ಇಂದು(ಜುಲೈ 9) ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಇದಕ್ಕೆ ರಾಜನಾಥ್ ಸಿಂಗ್ ಸಹ ಸಮ್ಮತಿಸಿದ್ದಾರೆ. ಜೊತೆಗೆ ವಿವಿಧ ಯೋಜನೆಗಳಿಗಾಗಿ ರಕ್ಷಣಾ ಇಲಾಖೆಯ ಭೂಮಿ ನೀಡುವಂತೆ ಸಿಎಂ ಮಾಡಿದ ಮನವಿಗೂ ಸಹ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸ್ಪಂದಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೈಸೂರು ದಸರಾದಲ್ಲಿ ಏರ್​ಶೋಗೆ ಮನವಿ ಮಾಡಿದ್ದೇವೆ. ಇದಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮತಿಸಿದ್ದಾರೆ. ಡಿಫೆನ್ಸ್ ಕಾರಿಡಾರ್ ಮಾಡಿ ಎಂದು ಮನವಿ ಮಾಡಲಾಗಿದೆ. ಉತ್ತರ ಪ್ರದೇಶ, ತಮಿಳುನಾಡಿನಲ್ಲಿ ಡಿಫೆನ್ಸ್ ಕಾರಿಡಾರ್ ಇದೆ. ಅದೇ ರೀತಿ ಕರ್ನಾಟಕದಲ್ಲೂ ಡಿಫೆನ್ಸ್ ಕಾರಿಡಾರ್​ ಮನವಿ ಮಾಡಿದ್ದೇವೆ. ಹಾಗೇ ರಕ್ಷಣಾ ಇಲಾಖೆಗೆ ಸೇರಿದ ಭೂಮಿ ನೀಡುವಂತೆ ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ವಿವಿಧ ಯೋಜನೆಗಳಿಗಾಗಿ ರಕ್ಷಣಾ ಇಲಾಖೆ ಭೂಮಿಗೆ ಮನವಿ ಮಾಡಲಾಗಿದೆ. ಸುರಂಗ ಯೋಜನೆ, ಲಿಂಕ್ ರಸ್ತೆ. ಏರ್​ಪೋರ್ಟ್ ರಸ್ತೆಯಲ್ಲಿ ಡಬಲ್ ಡೆಕ್ಕರ್ ರಸ್ತೆಗಾಗಿ ರಕ್ಷಣಾ ಇಲಾಖೆಗೆ ಸೇರಿದ ಭೂಮಿ ನೀಡುವಂತೆ ಮನವಿ ಸಲ್ಲಿಸಿದ್ದೇವೆ. ನಮ್ಮ ಮನವಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಂದಿಸಿದ್ದಾರೆ. ನಾಳೆ (ಜುಲೈ 10) ಪ್ರಧಾನಿ ಮೋದಿ ಭೇಟಿಗೆ ಸಹ ಅವಕಾಶ ಕೇಳಿದ್ದೇವೆ. ಪ್ರಧಾನಿ ಅವಕಾಶ ನೀಡಿದರೆ ನಾಳೆ ಭೇಟಿಯಾಗುತ್ತೇವೆ ಎಂದರು.

ದೆಹಲಿಯಲ್ಲಿ ಇಂದು ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಅವರನ್ನು ಭೇಟಿಯಾಗಿ ಮೈಸೂರು ದಸರಾ ಉತ್ಸವದಲ್ಲಿ ವೈಮಾನಿಕ‌ ಪ್ರದರ್ಶನ ಆಯೋಜಿಸುವ ಕುರಿತು ಚರ್ಚೆ ನಡೆಸಿ, ಬೆಂಗಳೂರಿನಲ್ಲಿ ಡಿಫೆನ್ಸ್ ಕಾರಿಡಾರ್, ಅಭಿವೃದ್ಧಿ ಕಾಮಗಾರಿಗಳಿಗೆ ರಕ್ಷಣಾ ಇಲಾಖೆಯ ಜಾಗ ನೀಡುವ ಕುರಿತು ಸಮಾಲೋಚನೆ ನಡೆಸಿದೆ.

Leave a Reply

Your email address will not be published. Required fields are marked *

error: Content is protected !!