ನವದೆಹಲಿ, ನ.18.ರಾಜಧಾನಿ ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟಕ್ಕೆ ಆತ್ಮಾಹುತಿ ದಾಳಿಕೋರ ಡಾ.ಉಮರ್ ಮೊಹಮ್ಮದ್ ತಾನು ಧರಿಸಿದ್ದ ಶೂನಲ್ಲಿ ಸ್ಫೋಟಕ ಸಿಕ್ಕಿಸಿಕೊಂಡಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಫಾರೆನ್ಸಿಕ್ ತಜ್ಞರು ತನಿಖೆಯ ವೇಳೆ, ಮೆಟಲ್ ಟ್ರಿಗ್ಗರ್ ಒಂದನ್ನು ಶೂನಲ್ಲಿ ಜೋಡಿಸಿದ್ದನ್ನು ಸ್ಫೋಟದ ಸ್ಥಳದಿಂದ ಪತ್ತೆ ಮಾಡಿದ್ದು, ಇದರೊಂದಿಗೆ ಆತ್ಮಾಹುತಿ ದಾಳಿ ಎನ್ನುವುದಕ್ಕೆ ಮಹತ್ವದ ಸಾಕ್ಷ್ಯ ಕಲೆಹಾಕಿದ್ದಾರೆ.
ಟಿಎಟಿಪಿ (triacetone triperoxide) ಎನ್ನುವ ರೀತಿಯ ಸ್ಫೋಟಕ ಬಳಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಇದೇ ಮಾದರಿಯನ್ನು ಜಗತ್ತಿನ ಹಲವೆಡೆ ನಡೆದಿರುವ ಉಗ್ರವಾದಿಗಳ ವಿಧ್ವಂಸಕ ಕೃತ್ಯಗಳಲ್ಲಿ ಬಳಸಿರುವುದು ಕಂಡುಬಂದಿತ್ತು. 2001ರಲ್ಲಿ ಅಮೆರಿಕದ ವಿಮಾನವನ್ನು ಹೈಜಾಕ್ ಮಾಡಿ ಸ್ಫೋಟಿಸಲು ಅಲ್ ಖೈದಾ ಉಗ್ರರು ಇದೇ ಮಾದರಿಯ ಶೂ ಸ್ಫೋಟಕ ಬಳಸಿದ್ದರು ಎನ್ನುವುದು ವಿಶೇಷ.
2001ರ ಸೆಪ್ಟಂಬರ್ 11ರಂದು ಅಮೆರಿಕದ ಅವಳಿ ಕಟ್ಟಡಗಳನ್ನು ವಿಮಾನ ಬಳಸಿ ಸ್ಫೋಟಿಸಿದ ಘಟನೆಯ ಬಳಿಕ ಅಲ್ಲಿನ ಎಫ್ ಬಿಐ ಎಚ್ಚತ್ತುಕೊಂಡಿತ್ತು. ಅದೇ ವರ್ಷ ಡಿಸೆಂಬರ್ 22ರಂದು ರಿಚರ್ಡ್ ಕಾಲ್ವಿನ್ ರೀಡ್ ಅಲಿಯಾಸ್ ಆಬ್ಡೆಲ್ ರಹೀಮ್ ಎನ್ನುವಾತ ತನ್ನ ಶೂನಲ್ಲಿ ಸ್ಫೋಟಕ ಸಿಕ್ಕಿಸಿಕೊಂಡು ಅಮೆರಿಕದ ವಿಮಾನ ಹತ್ತಿದ್ದ. ಪ್ಯಾರಿಸ್ ನಿಂದ ಮಿಯಾಮಿ ತೆರಳುತ್ತಿದ್ದ ದೀರ್ಘ ಪ್ರಯಾಣದ ವಿಮಾನದಲ್ಲಿ ರೀಡ್ ಪ್ರಯಾಣಿಕನಾಗಿದ್ದ. ಆದರೆ ಅದಾಗಲೇ ಅಲ್ ಖೈದಾ ಸೇರಿ ಉಗ್ರವಾದವನ್ನು ತಲೆಗೆ ತುಂಬಿಕೊಂಡಿದ್ದ ಆಬ್ಡೆಲ್ ರಹೀಮ್ ತಾನು ಧರಿಸಿದ್ದ ಬಾಸ್ಕೆಟ್ ಬಾಲ್ ಶೂನಲ್ಲೇ ಸ್ಫೋಟಕ ಸಿಕ್ಕಿಸಿಕೊಂಡಿದ್ದ.

90 ನಿಮಿಷಗಳ ಪ್ರಯಾಣದ ಬಳಿಕ ತನ್ನ ಶೂ ಬಳಸಿ ಸ್ಫೋಟಕ್ಕೆ ತಯಾರಾಗುತ್ತಿದ್ದಾಗಲೇ ಸಹ ಪ್ರಯಾಣಿಕರು, ಶೂನಿಂದ ಲೈಟ್ ಬರುತ್ತಿರುವುದು ಮತ್ತು ಸಲ್ಫರ್ ವಾಸನೆಯಿಂದ ಏನೋ ಅಸಹಜ ಇರುವುದನ್ನು ಗಮನಿಸಿದ್ದರು. ಕೂಡಲೇ ವಿಮಾನ ಸಿಬಂದಿ ರೀಡ್ ನನ್ನು ಹಿಡಿದು ವಿಚಾರಣೆ ನಡೆಸಿದ್ದು ವಿಮಾನವನ್ನು ಬಳಿಕ ಬೋಸ್ಟನ್ ನಿಲ್ದಾಣದಲ್ಲಿ ಲ್ಯಾಂಡ್ ಆಗಿಸಿ ಕಾಲ್ವಿನ್ ರೀಡ್ ನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಫಾರೆನ್ಸಿಕ್ ತಜ್ಞರು ಶೂವನ್ನು ಪರೀಕ್ಷೆ ನಡೆಸಿದಾಗ ಅದರಲ್ಲಿ 10 ಔನ್ಸ್ (283 ಗ್ರಾಮ್) ಟಿಎಟಿಪಿ ಸ್ಫೋಟಕ ಇರುವುದನ್ನು ಪತ್ತೆಯಾಗಿತ್ತು. ಆಮೂಲಕ ಅಲ್ ಖೈದಾ ಉಗ್ರ ವಿಮಾನದಲ್ಲಿದ್ದ ಎಲ್ಲ 197 ಪ್ರಯಾಣಿಕರನ್ನು ಬ್ಲಾಸ್ಟ್ ಮಾಡುವ ಗುರಿ ಹೊಂದಿದ್ದ ಎನ್ನುವುದನ್ನು ಕಂಡುಕೊಳ್ಳಲಾಗಿತ್ತು.

ಯಾರೀತ ರಿಚರ್ಡ್ ರೀಡ್ ?
1973, ಆಗಸ್ಟ್ 12ರಂದು ಲಂಡನ್ ತಾಯಿ ಮತ್ತು ಜಮೈಕಾ ಮೂಲದ ತಂದೆಗೆ ಜನಿಸಿದ್ದ ರಿಚರ್ಡ್ ರೀಡ್ ಸಣ್ಣಂದಿನಲ್ಲೇ ಹೆತ್ತವರ ಜೊತೆಗೆ ಜಗಳ ಕಾದು ಸ್ಕೂಲ್ ಡ್ರಾಪೌಟ್ ಆಗಿದ್ದ ಹುಡುಗ. 1995ರ ವೇಳೆಗೆ ಇಸ್ಲಾಮಿಗೆ ಮತಾಂತರಗೊಂಡು ತನ್ನ ಹೆಸರನ್ನು ಆಬ್ಡೆಲ್ ರಹೀಮ್ ಎಂದು ಮಾಡಿಕೊಂಡಿದ್ದ. 1997ರಲ್ಲಿ ಉಗ್ರವಾದವನ್ನು ತಲೆಗೆ ಹತ್ತಿಸಿಕೊಂಡು ಮೂಲಭೂತವಾದಿಗಳ ಜೊತೆಗೆ ಹತ್ತಿರವಾಗಿದ್ದ. ಅಷ್ಟೇ ಅಲ್ಲ, ಲಂಡನ್ ಬಿಟ್ಟು ಪಾಕಿಸ್ತಾನ, ಅಫ್ಘಾನಿಸ್ತಾನಕ್ಕೆ ತೆರಳಿ ಅಲ್ ಖೈದಾ ಉಗ್ರರಿಂದ ತರಬೇತಿಯನ್ನೂ ಪಡೆದಿದ್ದ.
2001ರಲ್ಲಿ ಯುರೋಪಿಗೆ ಮರಳಿದ್ದು ಬಾಸ್ಕೆಟ್ ಬಾಲ್ ಶೂ ಖರೀದಿಸಿ ಅಮೆರಿಕದ ಮೇಲಿನ ದ್ವೇಷದಿಂದ ಅಲ್ಲಿನ ಪ್ರಜೆಗಳಿದ್ದ ವಿಮಾನವನ್ನು ಸ್ಫೋಟಿಸಲು ಮುಂದಾಗಿದ್ದ. ಇದಕ್ಕಾಗಿ ಡಿಸೆಂಬರ್ 22ರಂದು ಪ್ಯಾರಿಸ್ ನಿಂದ ಮಿಯಾಮಿ, ಆಂಟಿಗುವಾ ತೆರಳುತ್ತಿದ್ದ ವಿಮಾನವೇರಿದ್ದಲ್ಲದೆ, ಈ ನಡುವೆ ನಿರಂತರವಾಗಿ ಅಲ್ ಖೈದಾ ಉಗ್ರರೊಂದಿಗೆ ಇಮೇಲ್ ಸಂಪರ್ಕದಲ್ಲಿದ್ದುದು ಎಫ್ ಬಿಐ ತನಿಖೆಯಲ್ಲಿ ಪತ್ತೆಯಾಗಿತ್ತು. 2002ರ ಅಕ್ಟೋಬರ್ 4ರಂದು ರಿಚರ್ಡ್ ನನ್ನು ಸಾಮೂಹಿಕ ನರಮೇಧಕ್ಕೆ ಸಂಚು ನಡೆಸಿದ್ದ ಅಪರಾಧಿಯೆಂದು ಘೋಷಿಸಿದ್ದ ಅಮೆರಿಕದ ನ್ಯಾಯಾಲಯ 2003ರ ಜನವರಿ 31ರಂದು ಜೀವಿತಾವಧಿ ಶಿಕ್ಷೆಗೆ ಗುರಿ ಮಾಡಿತ್ತು.

