ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ, ಜನವರಿ,04:- ಚಾಮರಾಜನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಶ್ರೀರೂಪ ಅವರು ಇಂದು ಚಾಮರಾಜೆಶ್ವರ ದೇವರ ದರ್ಶನ ಪಡೆದು ಅದಿಕಾರ ಸ್ವೀಕರಿಸಿದ್ದಾರೆ.
ದೇವಾಲಯಕ್ಕೆ ಭೇಟಿ ನೀಡಿ ನಂತರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ವರ್ಗಾವಣೆಯಾಗಿರುವ ನಿರ್ಗಮಿತ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಂದ ಅಧಿಕಾರಿ ಸ್ವೀಕರಿಸಿದರು. ನೂತನ ಜಿಲ್ಲಾಧಿಕಾರಿ ಶ್ರೀರೂಪ ಅವರಿಗೆ ಶಿಲ್ಪಾ ನಾಗ್ ಅವರು ಹೂಗುಚ್ಚ ನೀಡಿ ಶುಭ ಕೋರಿದರು. ನೂತನ ಜಿಲ್ಲಾಧಿಕಾರಿ ಶ್ರೀರೂಪ ಅವರು ನಿರ್ಗಮಿತ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಗೆ ಹೂಗುಚ್ಚ ನೀಡಿ ಹಾರೈಸಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಗಡಿಭಾಗದ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಸ್ತುತ ಮಾನವ ಪ್ರಾಣಿ ಸಂಘರ್ಷದಂತಹ ಪ್ರಕರಣಗಳು ಇವೆ. ಆದಿವಾಸಿಗಳಿಗೆ ಸಂಬಂಧಿಸಿದ ಸಮಸ್ಯೆಗಳು ಇದೆ. ಈ ಎಲ್ಲವನ್ನೂ ಪರಿಹರಿಸುವುದು ಆದ್ಯತೆಯಾಗಿದೆ.ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕಿದೆ ಎಂದರು.
ಜನರ ಬಳಿ ಆಡಳಿತ ತೆಗೆದುಕೊಂಡು ಹೋಗುವುದು ಮುಖ್ಯವಾಗಿದೆ. ನಿರ್ಗಮಿತ ಜಿಲ್ಲಾಧಿಕಾರಿಯವರು ರೂಪಿಸಿರುವ ಯೋಜನೆ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಲಿದ್ದೇನೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಹೇಳಿದರು.
ನಿರ್ಗಮಿತ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಶ್ರೀ ರೂಪ ಅವರು ಜಿಲ್ಲೆಯ ಪ್ರಗತಿಗೆ ಹೆಚ್ಚಿನ ಕಾರ್ಯನಿರ್ವಹಿಸಲಿ. ಜಿಲ್ಲೆಯ ಇಲಾಖೆ ಅಧಿಕಾರಿಗಳು ಅಭಿವೃದ್ಧಿಗೆ ಪೂರಕವಾಗಿ ನೂತನ ಜಿಲ್ಲಾಧಿಕಾರಿಯವರಿಗೆ ಸಹಕರಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ತಹಶೀಲ್ದಾರ್ ಗಿರಿಜಾ, ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

