Headlines

ಪ್ರತಿ ಸೋಮವಾರ ತಾ.ಪಂ. ಹಾಗೂ ಗ್ರಾ.ಪಂ.ಗಳಲ್ಲಿ ಕಡ್ಡಾಯವಾಗಿ ಕುಂದುಕೊರತೆ ಸಭೆ ಆಯೋಜಿಸಲು ಜಿ.ಪಂ. ಸಿಇಓ ನಂದಿನಿ ಕೆ.ಆರ್. ಸೂಚನೆ

ಮಂಡ್ಯ.ಅ.16:- ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯತ್ ಗಳು ಮತ್ತು ಗ್ರಾಮ ಪಂಚಾಯತ್ ಗಳು ಸಾರ್ವಜನಿಕ ಸೋಮವಾರ ಕಾರ್ಯಕ್ರಮವನ್ನು ಆಯೋಜಿಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಬೇಕು ಎಂದು ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ತಾ.ಪಂ. ಇಓ ಹಾಗೂ ಗ್ರಾ.ಪಂ.ಗಳ ಪಿಡಿಓಗಳಿಗೆ ಸೂಚನೆ ನೀಡಿದರು.

 ಬುಧವಾರ ಮಳವಳ್ಳಿ ತಾಲ್ಲೂಕು ಪಂಚಾಯತ್ ನಲ್ಲಿ ನಡೆದ ತಾಲ್ಲೂಕು ಮಟ್ಟದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಾರ್ವಜನಿಕರ ಸೋಮವಾರ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಆಯೋಜಿಸುತ್ತಿಲ್ಲವೆಂಬ ದೂರುಗಳು ಬರುತ್ತಿವೆ. ಈ ರೀತಿಯ ದೂರುಗಳಿಗೆ ಆಸ್ಪದವಿಲ್ಲದಂತೆ ಕಾರ್ಯಕ್ರಮವನ್ನು ಆಯೋಜಿಸುವಂತೆ ಸೂಚಿಸಿದರು.

 ಕಡ್ಡಾಯವಾಗಿ ಪ್ರತೀ ಸೋಮವಾರದಂದು ಸಾರ್ವಜನಿಕ ಕುಂದು ಕೊರತೆ ಸಭೆಗಳನ್ನು ತಾ.ಪಂ. ಮತ್ತು ಗ್ರಾ.ಪಂ.ಗಳಲ್ಲಿ ನಡೆಸಬೇಕು. ಒಂದುವೇಳೆ, ಅನಿವಾರ್ಯ ಕಾರಣಗಳಿಂದ ಕುಂದು ಕೊರತೆ ಸಭೆ ಆಯೋಜಿಸಲು ಸಾಧ್ಯವಾಗಿಲ್ಲದಿದ್ದಲ್ಲಿ ಮರುದಿನವೇ ಆಯೋಜಿಸಬೇಕು ಹಾಗೂ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಜಿ.ಪಂ. ಸಿಇಓ ಅವರು ಪಿಡಿಓ ಗಳಿಗೆ ಸೂಚಿಸಿದರು.

ಸಾರ್ವಜನಿಕ ಸೋಮವಾರದ ಕುರಿತು ವ್ಯಾಪಕ ಪ್ರಚಾರವನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳು ಮಾಡಬೇಕು. ಸ್ವಚ್ಛ ಭಾರತ ಮಿಷನ್ ಯೋಜನೆ ಆಟೋಗಳ ಮೂಲಕ ಹಾಗೂ ಟಾಂ ಟಾಂ ಹಾಕಿಸುವ ಮೂಲಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಪ್ರಚಾರ ಮಾಡಬೇಕು ಎಂದು ತಿಳಿಸಿದರು.
ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ, ಇ-ಸ್ವತ್ತು ಸೇರಿದಂತೆ ಇತರೆ ವಿಷಯಗಳಿಗೆ ಸಾರ್ವಜನಿಕರನ್ನು ಅಲೆದಾಡಿಸದೇ ತ್ವರಿತವಾಗಿ ಕ್ರಮವಹಿಸಬೇಕು ಎಂದು ತಿಳಿಸಿದರು. ಸರ್ಕಾರದ ಯೋಜನೆಗಳ ಬಗ್ಗೆ ಹಾಗೂ ಅವುಗಳ ಅನುಷ್ಟಾನಕ್ಕೆ ಇರುವ ನಿಯಮಗಳ ಬಗ್ಗೆ ಗ್ರಾ.ಪಂ. ಹಂತದಲ್ಲಿಯೇ ಸೂಕ್ತ ಮಾಹಿತಿ ನೀಡಿದಲ್ಲಿ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ, ಆದ್ದರಿಂದ ಎಲ್ಲಾ ಗ್ರಾ.ಪಂ.ಗಳಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಲು ಸೂಚಿಸಿದರು.

ಇ-ಹಾಜರಾತಿ ಕಡ್ಡಾಯ: ಗ್ರಾ.ಪಂ.ನ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಇ-ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದ್ದು, ಪಿಡಿಓಗಳು ಕಡ್ಡಾಯವಾಗಿ ಇ-ಹಾಜರಾತಿ ಹಾಕಬೇಕು ಹಾಗೂ ಕಚೇರಿ ಅವಧಿ ಮುಗಿಯುವವರೆಗೂ ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯವಿರಬೇಕು ಎಂದು ತಿಳಿಸಿದರು.

ಅಕ್ಕ ಕೆಫೆ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ: ಎನ್.ಆರ್.ಎಲ್.ಎಂ. ಯೋಜನೆಯಡಿ ಅಕ್ಕ ಕೆಫೆ ನಿರ್ಮಾಣ ಮಾಡಲು ಹಾಗೂ ತಾ.ಪಂ. ಕಚೇರಿಗೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಯಿತು.

ತಾ.ಪಂ. ಕಚೇರಿಯ ದೈನಂದಿನ ಚಟುವಟಿಕೆಗಳು ಹಾಗೂ ಪ್ರಗತಿ ಪರಿಶೀಲನೆ: ತಾ.ಪಂ. ಕಚೇರಿಯ ವಿವಿಧ ಶಾಖೆಗಳಿಗೆ ಭೇಟಿ ನೀಡಿ ಕಚೇರಿಯ ಸ್ವಚ್ಛತೆ, ಸಾರ್ವಜನಿಕರಿಗೆ ಕಲ್ಪಿಸಲಾಗಿರುವ ಮೂಲಭೂತ ಸೌಕರ್ಯಗಳು, ಅಭಿಲೇಖಾಲಯ ನಿರ್ವಹಣೆ, ಬಾಕಿ ಇರುವ ಕಡತಗಳು ಸೇರಿದಂತೆ ಇತರೆ ವಿಷಯಗಳ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿAದ ಮಾಹಿತಿ ಪಡೆದರು.

ನರೇಗಾ ಯೋಜನೆಯ ಕುರಿತು ಮಾಹಿತಿ ನೀಡಲು ಸೂಚನೆ: ನರೇಗಾ ಯೋಜನೆಯಡಿ ಉದ್ಯೋಗಕ್ಕಾಗಿ ನಮೂನೆ 6 ಅನ್ನು ಸಲ್ಲಿಸಿದ ತಕ್ಷಣವೇ ಸಮುದಾಯ ಆಧಾರಿತ ಕಾಮಗಾರಿಗಳಲ್ಲಿ ಉದ್ಯೋಗ ಒದಗಿಸಲು ಕ್ರಮವಹಿಸಬೇಕು. ಪೂರ್ವಭಾವಿಯಾಗಿ ಸಮುದಾಯ ಆಧಾರಿತ ಕಾಮಗಾರಿಗಳನ್ನು ಗುರುತಿಸಿಕೊಂಡು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಳ್ಳಲು ಕ್ರಮವಹಿಸಬೇಕು. 60:40 ಅನುಪಾತ ಹಾಗೂ ಡಿ.ಪಿ.ಸಿ. ಲಾಗಿನ್ ಬಗ್ಗೆ ಸಾರ್ವಜನಿಕರಿಗೆ ತಪ್ಪು ಮಾಹಿತಿಗಳನ್ನು ನೀಡದೇ ಸರಿಯಾದ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ನರೇಗಾ ಯೋಜನೆಯಡಿ ಕರ್ತವ್ಯ ಲೋಪ ಹಾಗೂ ಹಣ ದುರುಪಯೋಗದಂತಹ ದೂರುಗಳು ಬಂದ ತಕ್ಷಣವೇ ಯಾವುದೇ ವಿಳಂಬಕ್ಕೆ ಆಸ್ಪದವಿಲ್ಲದಂತೆ ಸೂಕ್ತ ತನಿಖೆ ನಡೆಸಿ ಜಿಲ್ಲಾ ಪಂಚಾಯತ್ ಗೆ ವರದಿ ಸಲ್ಲಿಸಬೇಕು ಹಾಗೂ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಬೇಕು ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಚಂದ್ರು, ತಾ.ಪಂ. ಇಓ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ, ಮಳವಳ್ಳಿ ತಾಲ್ಲೂಕಿನ 39 ಗ್ರಾಮ ಪಂಚಾಯತ್ ಗಳ ಪಂಚಾಯತ್ ಗಳ ಪಿಡಿಓಗಳು ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!