Headlines

ಪರಿಶಿಷ್ಟ ಜಾತಿ-ಪಂಗಡಗಳಿಗೆ ಮೀಸಲಿಟ್ಟ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆ!

ಬೆಂಗಳೂರು, ಜುಲೈ 28: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನದಿಂದ ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣ ಬಳಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೊಮ್ಮೆ ವಿವಾದ ಮೈಮೇಲೆ ಎಳೆದುಕೊಂಡಿದೆ.

ಎಸ್​ಸಿ, ಎಸ್​ಟಿಗೆ ಮಾತ್ರ ಮೀಸಲಿಟ್ಟ ಎಸ್​ಸಿಎಸ್​​ಪಿ-ಟಿಎಸ್​​ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಡೈವರ್ಟ್ ಮಾಡಲು ಮುಂದಾಗಿದೆ. ಎಸ್​ಸಿಎಸ್​​ಪಿ-ಟಿಎಸ್​​ಪಿ (ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ) ಯೋಜನೆಯಡಿ 2025-26ರ ಸಾಲಿನಲ್ಲಿ 42,017.51 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈ ಪೈಕಿ 11,896.84 ಕೋಟಿ ರೂ. ಮೊತ್ತವನ್ನು ಗ್ಯಾರಂಟಿ ಯೋಜನೆಗೆ ಬಳಸಲು ಸರ್ಕಾರ ಚಿಂತನೆ ನಡೆಸಿದೆ.

ಎಸ್​ಸಿಎಸ್​​ಪಿ-ಟಿಎಸ್​​ಪಿ ಯೋಜನೆಯಿಂದ ಯುವನಿಧಿ ಯೋಜನೆಗೆ 162 ಕೋಟಿ ರೂಪಾಯಿ, ಗೃಹಲಕ್ಷ್ಮೀ ಯೋಜನೆಗೆ 7,438 ಕೋಟಿ ರೂ., ಗೃಹಜ್ಯೋತಿಗೆ 2,626 ಕೋಟಿ ರೂ., ಶಕ್ತಿ ಯೋಜನೆಗೆ 1,537 ಕೋಟಿ ರೂ. ಹಾಗೂ ಅನ್ನಭಾಗ್ಯಕ್ಕೆ 1,670 ಕೋಟಿ ರೂ. ಬಳಕೆಗೆ ಸರ್ಕಾರ ಮುಂದಾಗಿದೆ.

ಕಳೆದ ಹಣಕಾಸು ವರ್ಷದಲ್ಲಿಯೂ ಎಸ್​ಸಿಎಸ್​​ಪಿ-ಟಿಎಸ್​​ಪಿ ಅನುದಾನದಿಂದ ಒಂದು ಪಾಲನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿತ್ತು. ಸರ್ಕಾರದ ಈ ನಡೆಗೆ ದಲಿತ ಸಂಘಟನೆಗಳು, ವಿಪಕ್ಷಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದವು. ಕಳೆದ ಬಾರಿಯ ಅಧಿವೇಶನದಲ್ಲಿ ಕೂಡ ಇದೇ ವಿಚಾರಕ್ಕೆ ಜಟಾಪಟಿ ಆಗಿತ್ತು.

ಆಗಸ್ಟ್ 5 ರಂದು ಎಸ್​​ಸಿ, ಎಸ್​ಟಿ ಅಭಿವೃದ್ಧಿ ಪರಿಷತ್ ಸಭೆ
ಆಗಸ್ಟ್ 5ರಂದು ಎಸ್​​ಸಿ, ಎಸ್​ಟಿ ಅಭಿವೃದ್ಧಿ ಪರಿಷತ್ ಸಭೆ ನಿಗದಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಎಸ್​ಸಿಎಸ್​​ಪಿ-ಟಿಎಸ್​​ಪಿ ಯೋಜನೆಯಿಂದ ಗ್ಯಾರಂಟಿಗಳಿಗೆ ಫಂಡ್ ಡೈವರ್ಟ್ ಮಾಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

2024-25 ರ ಸಾಲಿನಲ್ಲಿ ಎಸ್​ಸಿಎಸ್​ಪಿ-ಟಿಎಸ್​ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ ಬಗ್ಗೆ ಸದನದಲ್ಲಿ ಸರ್ಕಾರ ಮಾಹಿತಿ ನೀಡಿತ್ತು. ಎಸ್​ಸಿಎಸ್​ಪಿ-ಟಿಎಸ್​ಪಿ ಯೋಜನೆಗೆ ​2024-25 ರಲ್ಲಿ 42 ಕೋಟಿ ರೂ. ಮೀಸಲು ಇಡಲಾಗಿತ್ತು. ಇದರಲ್ಲಿ 14282 ಕೋಟಿ ರೂ. ಗ್ಯಾರಂಟಿಗೆ ಮೀಸಲು ಇಡಲಾಗಿತ್ತು. ಇದರಲ್ಲಿ 9,797 ಕೋಟಿ ರೂ. ಗ್ಯಾರಂಟಿಗೆ ಬಳಕೆ ಮಾಡಲಾಗಿದೆ ಎಂದು ಪ್ರತಿಪಕ್ಷಗಳ ಪ್ರಶ್ನೆಗೆ ಸದನದಲ್ಲಿ ಉತ್ತರ ನೀಡಲಾಗಿತ್ತು. ಇದೀಗ ಸರ್ಕಾರ ಮತ್ತೆ ಆ ನಿರ್ಧಾರಕ್ಕೆ ಮುಂದಾಗಿರುವುದು ರಾಜಕೀಯವಾಗಿ ತೀವ್ರ ಕೋಲಾಹಲಕ್ಕೆ ಕಾರಣವಾಗುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

error: Content is protected !!