Headlines

“ಗುಂಡ್ಲುಪೇಟೆಯ ಮಹಾನ್ ಪುತ್ರ: ಗ್ರಾಮೀಣ ಅಭಿವೃದ್ಧಿಯ ಕರ್ತೃ ಅಬ್ದುಲ್ ನಜೀರ್ ಸಾಬ್ ಸ್ಮರಣೆ”

ಇಂದು ನೀರ್ ಸಾಬ್ ಎಂದೇ ಖ್ಯಾತರಾದ ಅಬ್ದುಲ್ ನಜೀರ್ ಸಾಬ್ ಅವರ 92 ನೇ ಹುಟ್ಟುಹಬ್ಬ.
ಗಾಂಧೀಜಿ ಗ್ರಾಮ ಸ್ವರಾಜ್ಯ ಪರಿ ಕಲ್ಪನೆಯನ್ನ ಸಾಕಾರಗೊಳಿಸಿದ ಹೆಗ್ಗಳಿಕೆ ಅಬ್ದುಲ್ ನಜೀರ್ ಸಾಬ್ ಗೇ ಸಲ್ಲುತ್ತದೆ. ಜಿಲ್ಲಾ ಪಂಚಾಯತಿ, ಮಂಡಲ ಪಂಚಾಯತಿ ಮತ್ತು ಗ್ರಾಮ ಪಂಚಾಯತಿಯನ್ನು ರಾಜ್ಯಕ್ಕೆ ತಂದ ಶ್ರೇಯಸ್ಸು ಗುಂಡ್ಲುಪೇಟೆ ಮೂಲದ ನೀರ್ ಸಾಬ್ ಅವರದು. ಹೆಗ್ಡೆ ಸಂಪುಟದಲ್ಲಿ ಗ್ರಾಮೀಣಅಭಿವೃದ್ಧಿ ಸಚಿವರಾಗಿದ್ದ 1983 ರಿಂದ 86ರವರೆಗೂ ಕರ್ನಾಟಕದಲ್ಲಿ ಭೀಕರ ಬರಗಾಲ. ಇಂತಹ ಸಂದರ್ಭದಲ್ಲಿ ಹಳ್ಳಿ ಹಳ್ಳಿಗೆ ಕೊಳವೆ ಬಾವಿ ತೋಡಿಸಿ, ಜನರ ನೀರಿನ ಬವಣೆ ತಪ್ಪಿಸಿದವರು. ಇವರ ಏಕ ಮಾತ್ರ ಪುತ್ರ ಮುನೀರ್ ಅಹ್ಮದ್ ಬಾಬು ಬೆಂಗಳೂರಿನ ಶಿವಾಜಿ ನಗರದಲ್ಲಿ ವಿಂಟೆಜ್ ಕಾರುಗಳ ಸಂರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಸಂದರ್ಶನ 2012ರಲ್ಲಿ ನಡೆದಿದ್ದೆ. ತಂದೆ ಬಗ್ಗೆ ಬಹಳ ವಿಸ್ತಾರವಾಗಿ ಹೇಳಿದ್ದರು. 4 ಮಂದಿ ಅಕ್ಕಂದಿರ ನಂತರ 5 ನೇಯವರಾಗಿ ಹುಟ್ಟಿದ ಮುನೀರ್ ಅಹ್ಮದ್ ಬಾಬು ಕಂಡರೆ ಅಬ್ದುಲ್ ನಜೀರ್ ಸಾಬ್ ಗೇ ತುಂಬಾ ಪ್ರೀತಿ ಇತ್ತಂತೆ. ತಾಯಿ ಕೈಸರ್ ಜಹಾನ್ ಸಹ ಪತಿ ನೀರ್ ಸಾಬರ ಬೆಳವಣಿಗೆಗೇ ನೆರವಾಗಿದ್ದರಂತೆ. ಅಂದು ಮೈಸೂರು ಸಂಸ್ಥಾನಕ್ಕೆ ಸೇರಿದ ಇರೋಡ್ ಜಿಲ್ಲೆ ಸತ್ಯ ಮಂಗಲ ತಾಲೂಕಿನ ಬಯ್ಯನ ಪುರದಲ್ಲಿ (ಕೊಂಗಳ್ಳಿ ಮಾದಪ್ಪನ ಬೆಟ್ಟದ ಸಮೀಪ )1933ರ ಡಿಸೇಂಬರ್. 25ರಂದು ಯೇಸು ಹುಟ್ಟಿದ ದಿನವೇ ಹುಟ್ಟಿದವರು ನಜೀರ್ ಸಾಬ್. ಇವರ ತಂದೆ ಮಹಮದ್ ಪೀರ್ ಸಾಬ್. ತಾಯಿ ಐಸಾಬಿ. ಈ ಕುಟುಂಬ ಮುಂದೆ ಈಗ ಚಾಮರಾಜನಗರ ಜಿಲ್ಲೆಗೇ ಸೇರಿರುವ ಗುಂಡ್ಲುಪೇಟೆ ಗೇ ವಲಸೆ ಬಂತು.

ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ 1976ರಲ್ಲಿ ಕರ್ನಾಟಕದ ಮೊದಲ ಮಹಿಳಾ ಸ್ಪೀಕರ್ ಮತ್ತು ದೀರ್ಘ ಕಾಲ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ ಕೆ. ಎಸ್. ನಾಗರತ್ನಮ್ಮರ ಮೂಲಕ ಕಾಂಗ್ರೆಸ್ ಸೇರಿ, ಗುಂಡ್ಲುಪೇಟೆ ಪುರಸಭೆ ಸದಸ್ಯರಾಗಿ, ಅಧ್ಯಕ್ಷರಾಗಿ, 1980ರಲ್ಲಿ ದೇವರಾಜ ಅರಸು ನೆರವಿನಿಂದ ವಿಧಾನ ಪರಿಷತ್ ಸದಸ್ಯರಾಗಿ, 1982ರಲ್ಲಿ ಅರಸು ಸ್ಥಾಪಿಸಿದ ಕ್ರಾಂತಿ ರಂಗ ಪಕ್ಷ ಅಧ್ಯಕ್ಷರಾಗಿ 1983ರ ಜನವರಿ.5 ರ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದರೂ ಬಹುಮತವಿಲ್ಲದ ಜನತಾ ಪಕ್ಷಕ್ಕೆ ಬಿಜೆಪಿ 18ಸದಸ್ಯರ ಬೆಂಬಲದಿಂದ ಜನವರಿ. 13ರಂದು ಮುಖ್ಯ ಮಂತ್ರಿ ಆದ ಹೆಗ್ಡೆ ಸಂಪುಟದಲ್ಲಿ ತಮಗಿಷ್ಟವಾದ ಗ್ರಾಮೀಣ ಅಭಿವೃದ್ಧಿ ಸಚಿವರಾಗಿ ಹಳ್ಳಿ ಆಡಳಿತಕ್ಕೆ ಒತ್ತು ಕೊಟ್ಟರು. ಹಳ್ಳಿ ಪ್ರಜಾಪ್ರಭುತ್ವದಿಂದ ಹಳ್ಳಿ ಜನ ಹಾಳಾಗುತ್ತಾರೆ. ರಾಜಕೀಯದಿಂದ ಕಿತ್ತಾಡುತ್ತಾರೆ ಅಂತ ಕಾಂಗ್ರೆಸ್ ನಾಯಕರು ಮೂದಲಿಸುತ್ತಿದ್ದಾಗ ಜಿಪಂ ತಾಪo, ಹೊರತು, ಗ್ರಾಮ ಪಂಚಾಯತಿಗೆ ರಾಜಕೀಯ ಪಕ್ಷಗಳನ್ನು ಹೊರಗಿಟ್ಟು, ಪಕ್ಷದ ಹೆಸರಲ್ಲಿ ಸ್ಪರ್ಧೆ ಮಾಡದಂತೆ ನಿಯಮ ರೂಪಿಸಿದರು.

ಜಿಪಂ ತಾಪಂ ಗ್ರಾಪಂ ಸದಸ್ಯರ ಕೈಗೆ ಸುಮ್ಮನೆ ಅಧಿಕಾರ ಕೊಡ ಬಾರದೆಂದು ಮೈಸೂರಿನಲ್ಲಿ ಇವರಿಗೆ ಆಡಳಿತ ತರಬೇತಿ ನೀಡಲು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಸ್ಥಾಪಿಸಿ, ತರಬೇತಿ ಕೊಡಿಸುವ ವ್ಯವಸ್ಥೆ ಮಾಡಿದರು. ಇವರಿಗೆಲ್ಲ ಐ ಎ ಎಸ್ ಅಧಿಕಾರಿಗಳಿಗೆ ತರಬೇತಿ ನೀಡುವಂತೆ ಅಗತ್ಯ ಪಠ್ಯ ರೂಪಿಸಿದರು. ಇದರ ಉಸ್ತುವಾರಿ ವಹಿಸಿಕೊಂಡ ಚಿರಂಜೀವಿ ಸಿಂಗ್ ಎಂಬ ಸಿಖ್ ಸಂತ ಐ ಎ ಎಸ್ ಅಧಿಕಾರಿ ನೀರ್ ಸಾಬರ ಗ್ರಾಮೀಣ ಅಭಿವೃದ್ಧಿ ಕನಸನ್ನು ಸಾಕಾರಗೊಳಿಸಲು ಅದ್ಭುತವಾಗಿ ಶ್ರಮಿಸಿದರು. ಮೈಸೂರಿನ ಲಲಿತ ಮಹಲ್ ರಸ್ತೆಯಲ್ಲಿರುವ ಈ ಆಡಳಿತ ಸಂಸ್ಥೆಗೇ 1988ರ ಅಕ್ಟೊಬರ್. 24 ರಂದು ನಿಧನರಾದ ಅಬ್ದುಲ್ ನಜೀರ್ ಸಾಬ್ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಎಂದೇ ನಾಮಕರಣ ಮಾಡಲಾಗಿದೆ.

ಇಂತಹ ಜನ ಸೇವಕರು ಸದಾ ಕಾಲ ಹುಟ್ಟುತ್ತಾ ಬರಲಿ ಎಂದು ನಾವೆಲ್ಲರೂ ನಜೀರ್ ಸಾಬ್ 92ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಆ ಭಗವಂತನಲ್ಲಿ ಪ್ರಾರ್ಥಿಸೋಣ 🙏

ಲೇಖನ :ಎಸ್. ಪ್ರಕಾಶ್ ಬಾಬು
ಪತ್ರಕರ್ತ -ಗ್ರಂಥ ಕರ್ತ
ಮೈಸೂರು -ಬೆಂಗಳೂರು

Leave a Reply

Your email address will not be published. Required fields are marked *

error: Content is protected !!