ಬೆಂಗಳೂರು, ಜುಲೈ 24: ಗ್ರೇಟರ್ ಬೆಂಗಳೂರು(ಆಡಳಿತ) ಕಾಯ್ದೆಯಡಿ ಭೂಸ್ವಾಧೀನಕ್ಕೆ ಆರಂಭಿಕ ವಿಘ್ನ ಎದುರಾಗಿದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ (2025) ಅಡಿಯಲ್ಲಿ ಭೂಸ್ವಾಧೀನ ಪ್ರಶ್ನಿಸಿ ರಾಜಗೋಪಾಲ ಗೋಪಾಲಕೃಷ್ಣ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ನೋಟಿಸ್ ಆಧರಿಸಿ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು. ಅರ್ಜಿದಾರರ ಬಿಡದಿ ಜಮೀನಿನ ಸ್ವಾಧೀನಕ್ಕೆ ಅಡ್ಡಿಪಡಿಸದಂತೆ ಆದೇಶ ಹೊರಡಿಸಿದೆ. ಅಲ್ಲದೇ ಈ ಬಗ್ಗೆ ಇದೇ ಜುಲೈ 29ರಂದು ಪ್ರತಿಕ್ರಿಯಿಸುವಂತೆ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿ ಹೈಕೋರ್ಟ್ ನೋಟಿಸ್ ನೀಡಿದೆ.
2025ರ ಮೇ 15ರಂದು ಕಾಯ್ದೆ ಜಾರಿಯಾಗುವ ಮುನ್ನವೇ ಮಾರ್ಚ್ 12ರಂದೇ ರಾಜ್ಯಸರ್ಕಾರ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ 11 ಸಾವಿರ ಎಕರೆ ಕಾನೂನುಬಾಹಿರ ಭೂಸ್ವಾಧೀನಕ್ಕೆ ರಾಜ್ಯಸರ್ಕಾರ ಮುಂದಾಗಿದೆ. ಆದರೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸದೇ ಹಾಗೂ ಪರಿಸರ ಅನುಮತಿ ಪಡೆಯದೇ ಭೂಸ್ವಾಧೀನಕ್ಕೆ ಮುಂದಾಗಿದೆ ಎಂದು ಅರ್ಜಿದಾರರ ಪರ ವಕೀಲ ಸದಾನಂದ್ ಜಿ. ಶಾಸ್ತ್ರಿ ವಾದ ಮಂಡಿಸಿದರು. ಈ ವಾದ ಆಲಿಸಿದ ಹೈಕೋರ್ಟ್, ಜುಲೈ 29ರಂದು ಈ ಬಗ್ಗೆ ಪ್ರತಿಕ್ರಿಯಿಸುವಂತೆ ರಾಜ್ಯಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಗ್ರೇಟರ್ ಬೆಂಗಳೂರಿಗೆ ಈಗಾಗಲೇ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಇದು ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಜಟಾಪಟಿಗೂ ಕಾರಣವಾಗಿತ್ತು. ಇನ್ನು ಇತ್ತೀಚೆಗೆ ಗ್ರೇಟರ್ ಬೆಂಗಳೂರು ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿತ್ತು. ಆ ಮೂಲಕ ಬೆಂಗಳೂರು ಮಹಾನಗರವನ್ನ 5 ಭಾಗಗಳಾಗಿ ವಿಂಗಡಿಸಲು ಸರ್ಕಾರ ಮುಂದಾಗಿತ್ತು. ಇದೆಲ್ಲದರ ಮಧ್ಯೆ ಇದೀಗ ಬಿಡದಿ ಸಮಗ್ರ ಉಪನಗರ ಯೋಜನೆ ಅನುಷ್ಠಾನಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಹಿನ್ನೆಲೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ರಾಮನಗರ ತಾಲೂಕಿನ ಬಿಡದಿ ಹಾವಳಿಯ ಕೆ.ಜಿ.ಗೊಲ್ಲರಪಾಳ್ಯ, ಕೆಂಪಯ್ಯನಪಾಳ್ಯ, ಬನ್ನಿಗಿರಿ, ಭೈರಮಂಗಲ,, ಕಂಚುಗಾರನಹಳ್ಳಿ, ಮೂಡಲ ಹಳ್ಳಿ, ವಡೇರಹಳ್ಳಿ ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆಗೆ ಪ್ರಾಧಿಕಾರ ಮುಂದಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ 5 ಪಾಲಿಕೆಗಳನ್ನು ರಚನೆ ಮಾಡಿ ಈಗಾಗಲೇ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯಸರ್ಕಾರ ಐದೂ ಮಹಾನಗರ ಪಾಲಿಕೆಗಳ ಗಡಿಯನ್ನು ಗುರುತು ಮಾಡಿದೆ. ಬಿಬಿಎಂಪಿಯ ಕೇಂದ್ರ ಕಚೇರಿಯನ್ನು ಆಗಸ್ಟ್ 10ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕೇಂದ್ರ ಕಚೇರಿಯಾಗಿ ಮಾರ್ಪಾಡು ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಆಗಸ್ಟ್ 11ರಿಂದ ಆರಂಭವಾಗುವ ಮುಂಗಾರು ಅಧಿವೇಶನದಲ್ಲಿ 5 ಪಾಲಿಕೆಗಳನ್ನು ರಚನೆ ಮಾಡಿದ ವಿಚಾರವಾಗಿ ಚರ್ಚೆ ನಡೆಸಿ, ಬಿಲ್ ಪಾಸ್ ಮಾಡಲು ಸರ್ಕಾರ ತಯಾರಿ ನಡೆಸಿದೆ. ಈ ಪಾಲಿಕೆಗಳ ರಚನೆ ಬಗ್ಗೆ ಆಕ್ಷೇಪಣೆ ಇದ್ದರೇ ಸಾರ್ವಜನಿಕರು ಸಲಹೆ ನೀಡುವಂತೆ ರಾಜ್ಯಸರ್ಕಾರ ಹೇಳಿದೆ.
5 ಪಾಲಿಕೆಗಳು ಯಾವ್ಯಾವು?
ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ
ಬೆಂಗಳೂರು ಉತ್ತರ ಮಹಾನಗರ ಪಾಲಿಕೆ
ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆ
ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆ
ಬೆಂಗಳೂರು ಪೂರ್ವ’ ಮಹಾನಗರ ಪಾಲಿಕೆ.

