ಬೆಂಗಳೂರು, ಜುಲೈ 28: ನಟ ದರ್ಶನ್ ಅಭಿಮಾನಿಗಳಿಂದ ಅಶ್ಲೀಲವಾದ, ಕೊಳಕು ಕಮೆಂಟ್ಸ್ ಬರುತ್ತಿರುವ ಬಗ್ಗೆ ನಟಿ ರಮ್ಯಾ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಸೋಮವಾರ ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ರಮ್ಯ ಅವರು ಇದುವರೆಗೂ ಯಾವುದೇ ದೂರು ದಾಖಲಿಸಿಲ್ಲ. ಒಂದು ವೇಳೆ ದಾಖಲಿಸಿದರೆ ನಮ್ಮ ಪೊಲೀಸರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ನುಡಿದರು.
ರಮ್ಯಾ ದೂರು ಕೊಡಲಿ, ಪೊಲೀಸರು ಏನು ಕ್ರಮ ಕೈಗೊಳ್ಳಬೇಕೋ ತಗೊಳ್ತಾರೆ. ಸೈಬರ್ ಕ್ರೈಂನವ್ರು ಯಾವುದು ಸೆನ್ಸಿಟೀವ್ ಇರುತ್ತೆ ಅಂತವನ್ನ ಬ್ಲಾಕ್ ಮಾಡ್ತಾರೆ. ಅಥವಾ ದೂರು ಕೊಟ್ಟರೆ ಕ್ರಮ ಕೈಗೊಳ್ತಾರೆ. ಇದರಲ್ಲಿ ದೂರು ಯಾರಾದ್ರು ಕೊಡಬೇಕಲ್ವ. ಕೆಲವೊಮ್ಮೆ ಸುಮೋಟೋ (ಸ್ವಯಂಪ್ರೇರಿತ) ದೂರು ತಗೊಳ್ತಾರೆ. ದೂರು ಬಂದ್ರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಈ ಕುರಿತು ಸರ್ಕಾರ ನಿರ್ದೇಶನ ಆದೇಶ ಕೊಡುವುದಿಲ್ಲ. ಆ ವ್ಯಾಪ್ತಿಯ ಪೊಲೀಸರೇ ತಮ್ಮ ವಿವೇಚನೆಯಂತೆ ಕ್ರಮ ಕೈಗೊಳ್ಳುವುದು ಸಹಜ ಪ್ರಕ್ರಿಯೆ ಎಂದು ಗೃಹಸಚಿವರು ಹೇಳಿದ್ದಾರೆ.
ಇತ್ತೀಚಿಗಷ್ಟೇ ನಟಿ ರಮ್ಯಾ ಅವರು ರೇಣುಕಾಸ್ವಾಮಿ ಕೊಲೆಯ ವಿಚಾರವಾಗಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದರು. ರೇಣುಕಾಸ್ವಾಮಿ ಕುಟುಂಬಸ್ಥರಿಗೆ ನ್ಯಾಯ ಸಿಗಬೇಕಿದೆ. ತಪ್ಪು ಯಾರೇ ಮಾಡಿರಲಿ ಅವರಿಗೆ ಶಿಕ್ಷೆಯಾಗಬೇಕಿದೆ ಎಂದು ಹೇಳಿದ್ದರು. ಇದಕ್ಕೆ ಎಂದಿನಂತೆ ಕೆಲವು ಕಿಡಿಗೇಡಿಗಳು ರಮ್ಯಾ ಅವರ ವಿರುದ್ದ ಅವಹೇಳನಕಾರಿ ಭಾಷೆಯಲ್ಲಿ ಪದಪ್ರಯೋಗಿಸಿ ಹೀನಾಯವಾಗಿ ನಿಂದಿಸಿದ್ದರು.
ಈ ಕುರಿತು ಮತ್ತೆ ಪೋಸ್ಟ್ ಒಂದರಲ್ಲಿ ಬರೆದುಕೊಂಡಿದ್ದ ನಟಿ ರಮ್ಯಾ, ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಗೂ ಹಾಗೂ ದರ್ಶನ್ ಅಭಿಮಾನಿಗಳ ಭಾಷೆಗೂ ಏನು ವ್ಯತ್ಯಾಸ ಎಂದು ನುಡಿದಿದ್ದರು. ದರ್ಶನ್ ಅಭಿಮಾನಿಗಳ ಕೆಲವು ಅಶ್ಲೀಲ , ಕೊಳಕು ಭಾಷೆಯ ಕಮೆಂಟ್ ಗಳನ್ನು ಉಲ್ಲೇಖಿಸಿ ರಮ್ಯಾ ಈ ಹೇಳಿಕೆ ನೀಡಿದ್ದರು. ಇದರಿಂದ ಕೆರಳಿದ್ದ ದರ್ಶನ್ ಅಭಿಮಾನಿಗಳು ತಮ್ಮ ಅವಹೇಳನವನ್ನು ಮತ್ತಷ್ಟು ಮುಂದುವರೆಸಿದ್ದರು.
ಇದುವರೆಗೂ ನಟಿ ರಮ್ಯಾ, ದರ್ಶನ್ ಅಭಿಮಾನಿಗಳ ವಿರುದ್ದ ಅಥವಾ ತೇಜೋವಧೆಯ ವಿರುದ್ದ ಯಾವುದೇ ದೂರು ಕೊಡುವುದಾಗಿ ಅಥವಾ ಕಾನೂನು ಸಮರ ಕೈಗೊಳ್ಳುವುದಾಗಿ ಹೇಳಿಕೆ ನೀಡಿಲ್ಲ.
ಆದಾಗ್ಯೂ ಇಂದು ಸೋಮವಾರ ಸಂಜೆ 5:30 ಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸ್ವತಃ ನಟಿ, ಮಾಜಿ ಸಂಸದೆ ರಮ್ಯಾ ಅವರೇ ತೆರಳಿ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳ ಅಶ್ಲೀಲ ಕಮೆಂಟ್ಸ್ ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ದೂರು ನೀಡಲು ಮುಂದಾಗಿದ್ದಾರೆ.

