Headlines

ಕೆ.ಆರ್.ಪೇಟೆ: ಪತ್ನಿ ಬೆನ್ನಲ್ಲೇ ಪತಿಯೂ ಬಲಿ; ಕತ್ತು ಹಿಸುಕಿದರೂ ಬದುಕುಳಿದ ಎರಡು ವರ್ಷದ ಕಂದಮ್ಮ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ಹೊಸಕೋಟೆ ಗ್ರಾಮದ ಮೂಲದ ದರ್ಶನ್ (29) ಮತ್ತು ಪತ್ನಿ ದಿವ್ಯಶ್ರೀ (25) ಮೃತಪಟ್ಟವರು. ಮೃತ ದಂಪತಿ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು, ಕೆ.ಆರ್. ಪೇಟೆಯ ಜಯನಗರ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ದರ್ಶನ್ ಕಾರು ಚಾಲಕನಾಗಿ ಕೆಲಸ ಮಾಡುತ್ತಾ ಕೃಷಿಯಲ್ಲೂ ತೊಡಗಿಸಿಕೊಂಡಿದ್ದರೆ, ದಿವ್ಯಶ್ರೀ ಪ್ಯಾರಾ ಮೆಡಿಕಲ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.

​ಇಂದು ಬೆಳಗ್ಗೆ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ ಎನ್ನಲಾಗಿದ್ದು, ಗಲಾಟೆಯ ಬಳಿಕ ಮೊದಲು ದಿವ್ಯಶ್ರೀ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ಸಾವಿನಿಂದ ಕಂಗಾಲಾದ ದರ್ಶನ್, ದಿವ್ಯಶ್ರೀ ಅವರ ಕುಟುಂಬಕ್ಕೆ ವಿಡಿಯೋ ಕಾಲ್ ಮಾಡಿ ತಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾನೆ.

ಪ್ರಾಣಾಪಾಯದಿಂದ ಪಾರಾದ ಮಗು: ತಾನು ಸಾಯುವ ಮುನ್ನ ತನ್ನ ಎರಡು ವರ್ಷದ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಲು ದರ್ಶನ್ ಯತ್ನಿಸಿದ್ದಾನೆ.

ಕತ್ತು ಹಿಸುಕಿದ ವೇಳೆ ಮಗು ಪ್ರಜ್ಞೆ ತಪ್ಪಿದ್ದು, ಮಗು ಸತ್ತಿದೆ ಎಂದು ಭಾವಿಸಿದ ದರ್ಶನ್ ತಾನು ಕೂಡ ನೇಣಿಗೆ ಶರಣಾಗಿದ್ದಾನೆ. ಆದರೆ, ಅದೃಷ್ಟವಶಾತ್ ಮಗು ಬದುಕುಳಿದಿದ್ದು, ಪ್ರಾಣಾಪಾಯದಿಂದ ಪಾರಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

​ಸ್ಥಳಕ್ಕೆ ಭೇಟಿ ನೀಡಿದ ಕೆ.ಆರ್.ಪೇಟೆ ಟೌನ್ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!