ವಿಶ್ವೇಶ್ವರಯ್ಯನವರ ಆಶಯಕ್ಕೆ ತಿಲಾಂಜಲಿ; ಅಂತರ್ಜಲ ಕುಸಿತದ ಆತಂಕ ವ್ಯಕ್ತಪಡಿಸಿದ ಡಾ. ಸಿದ್ದೇಗೌಡ
ಮಂಡ್ಯ: ಜಿಲ್ಲೆಯ ಕೆಆರ್ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳ ಆಧುನೀಕರಣ ಕಾಮಗಾರಿ ತೀವ್ರ ವಿವಾದಕ್ಕೆ ಈಡಾಗಿದೆ. ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳು ಸಂಪೂರ್ಣ ‘ಅವೈಜ್ಞಾನಿಕ’ವಾಗಿದ್ದು, ಇದು ಸ್ಥಳೀಯ ಪರಿಸರ ಮತ್ತು ಜಲ ಸಂಪನ್ಮೂಲಗಳ ಮೇಲೆ ಮಾರಕ ಪರಿಣಾಮ ಬೀರಲಿದೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರದ ಶಾ ಶಿಬ್ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರೂ ಆದ ಬೂದನೂರು ನಿವಾಸಿ ಡಾ. ಸಿದ್ದೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಿದ್ದಾರೆ.

ಡಾ. ಸಿದ್ದೇಗೌಡ
ಮಾನದಂಡಗಳ ಉಲ್ಲಂಘನೆ ಆರೋಪ
ತಾಲ್ಲೂಕಿನ ಹಳೇ ಬೂದನೂರಿನಲ್ಲಿ ನಡೆಯುತ್ತಿರುವ ಕಾಲುವೆ ಆಧುನೀಕರಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, “ಕಾಮಗಾರಿಯಲ್ಲಿ ಎಂಜಿನಿಯರಿಂಗ್ ಮಾನದಂಡಗಳನ್ನು ಮತ್ತು ಐಎಸ್ (IS) ಕೋಡ್ಗಳನ್ನು ಗಾಳಿಗೆ ತೂರಲಾಗಿದೆ. ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಯೋಜನೆಗಳಿಗೆ ಈ ಮೂಲಕ ತಿಲಾಂಜಲಿ ಹೇಳಲಾಗುತ್ತಿದೆ”. ಬತ್ತಲಿವೆ ಬೋರ್ವೆಲ್ಗಳು, ಕುಸಿಯಲಿದೆ ಅಂತರ್ಜಲ ಕಾಲುವೆಗಳ ಅತಿಯಾದ ಕಾಂಕ್ರೀಟೀಕರಣ ಅಥವಾ ಅವೈಜ್ಞಾನಿಕ ವಿನ್ಯಾಸದಿಂದಾಗಿ ಅಂತರ್ಜಲ ಮರುಪೂರಣ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ. ಇದರಿಂದಾಗಿ ನಾಲೆ ಪಕ್ಕದ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯಲಿದೆ. ಕುಡಿಯುವ ನೀರಿಗಾಗಿ ಕಾಲುವೆ ಅವಲಂಬಿಸಿರುವ ಹಳ್ಳಿಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಲಿದೆ. ರೈತರ ಬೋರ್ವೆಲ್ಗಳು ಬತ್ತಿ ಹೋಗಿ, ವಾಣಿಜ್ಯ ಬೆಳೆಗಳ ಕೃಷಿಗೆ ಪೆಟ್ಟು ಬೀಳಲಿದೆ. ಸುಮಾರು 300 ರಿಂದ 600 ಹಳ್ಳಿಗಳು ಮುಂದಿನ ದಿನಗಳಲ್ಲಿ ತೀವ್ರ ನೀರಿನ ಸಂಕಷ್ಟ ಎದುರಿಸಲಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
₹248 ಕೋಟಿ ಅನುದಾನ ದುರ್ಬಳಕೆ?
“ರಾಜ್ಯ ಸರ್ಕಾರ ಈ ಕಾಮಗಾರಿಗಾಗಿ ಸುಮಾರು 248 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಆದರೆ, ವೈಜ್ಞಾನಿಕ ಯೋಜನೆ ಇಲ್ಲದೆ ಹಣ ಬಳಸುತ್ತಿರುವುದು ತೆರಿಗೆದಾರರ ಹಣದ ಪೋಲು ಮಾತ್ರವಲ್ಲದೆ, ಕಾವೇರಿ ಜಲಾನಯನ ಪ್ರದೇಶದ ಸುಸ್ಥಿರ ನಿರ್ವಹಣೆಗೆ ಮಾರಕ,” ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಾನೂನು ಕ್ರಮಕ್ಕೆ ಆಗ್ರಹ
ಕಳಪೆ ಗುಣಮಟ್ಟ ಮತ್ತು ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿರುವ ಎಂಜಿನಿಯರ್ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ತಕ್ಷಣ ಕೇಂದ್ರ ಅಧಿಕಾರಿಗಳು ಮಧ್ಯಪ್ರವೇಶಿಸಿ ಈ ಕಾಮಗಾರಿಗಳನ್ನು ಪರಿಶೀಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.


