ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿರುವ ಅಸಹಜ ಸಾವು ಪ್ರಕರಣದ ತನಿಖೆ ನಡೆಯುತ್ತಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಗಂಭೀರವಾದ ಮಾತುಕತೆಗಳು ನಡೆದಿದ್ದು ರಾಜ್ಯಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ವಾಕ್ಸಮರವೇ ನಡೆಯುತ್ತಿದೆ. ಇದರ ನಡುವೆ ಗೃಹ ಸಚಿವ ಪರಮೇಶ್ವರ್ ಅವರು ಯೂಟ್ಯೂಬರ್ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅವರು ಹೇಳಿದ್ದಿಷ್ಟು…
“ಯಾರೇ ಯೂಟ್ಯೂಬರ್ಗಳಾದರೂ, ಯಾವುದೇ ಯೂಟ್ಯೂಬ್ ಆದರೂ ಇರಲಿ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಬಾರದು. ಒಂದು ವೇಳೆ ಧರ್ಮಸ್ಥಳ ಕ್ಷೇತ್ರದ ಕುರಿತು ಕೆಟ್ಟದಾಗಿ ಮಾತನಾಡಿರುವುದು, ಅಪಪ್ರಚಾರ ಮಾಡಿರುವುದು ಕಂಡುಬಂದಲ್ಲಿ ಅಂತವರ ವಿರುದ್ಧ ರಾಜ್ಯಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಎಸ್ಐಟಿ ಅಧಿಕಾರಿಗಳ ತನಿಖೆ ಮಾಡುವಾಗಲೇ ಅಪಪ್ರಚಾರ ಮಾಡಿದರೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ಕಾರ್ಯ ಕುರಿತು ಗೃಹ ಸಚಿವ ಪರಮೇಶ್ವರ್ ಅವರು ನಿನ್ನೆ ಮಾತನಾಡಿದರು. ಅಲ್ಲಿ ಸಿಕ್ಕಂತಹ ಅಸ್ಥಿಪಂಜರ, ಮೂಳೆಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ ರವಾನಿಸಲಾಗಿದ್ದು ವರದಿ ಬರಬೇಕಿದೆ. ವರದಿ ಬರುವವರೆಗೂ ಎಸ್ಐಟಿ ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದೆ. ವರದಿ ಬಂದ ಬಳಿಕ ತನಿಖೆ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
ಸಚಿವ ಪರಮೇಶ್ವರ್ ಮಾತು ಮುಗಿಸಿದ ನಂತರ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಎಸ್ಐಟಿ ತನಿಖೆಯನ್ನು ಹೇಳಿದ್ದೀರಿ. ಧರ್ಮಸ್ಥಳದಲ್ಲಿ ಗುಡ್ಡ ಅಗೆದರೂ ಇಲಿ ಸಿಗಲಿಲ್ಲ, ಕಲಾಪದಲ್ಲಿ ನೀವು ಹೇಳಿದರೆ ಸೊಳ್ಳೆ ಕೂಡ ಸತ್ತಿಲ್ಲ. ಅನಾಮಿಕ ಬುರಡೆ ತಂದಿರುವುದರ ಕುರಿತು ಮೊದಲೇ ಯಾಕೆ ತನಿಖೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

