ಮಂಡ್ಯ:ಮಂಡ್ಯ ನಗರದ ಬನ್ನೂರು ರಸ್ತೆಯಲ್ಲಿರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿ.ಎಸ್. ಬೈರೇಶ್ ರವರ ಕಚೇರಿಯ ಮೇಲೆ ಮಂಗಳವಾರ ಬೆಳಗಿನ ಜಾವ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ.


ಲೋಕಾಯುಕ್ತ ಅಧಿಕಾರಿಗಳು ಮಂಡ್ಯದಲ್ಲಿರುವ ಕಚೇರಿಯ ಜೊತೆಗೆ ವಿ.ಎಸ್. ಬೈರೇಶ್ ರವರ ಮಂಡ್ಯ ಹಾಗೂ ವಳಗೆರೆಹಳ್ಳಿಯಲ್ಲಿರುವ ನಿವಾಸಗಳ ಮೇಲೂ ಏಕಕಾಲಕ್ಕೆ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಪ್ರಮುಖ ದಾಖಲೆಗಳು ಮತ್ತು ಹಣಕಾಸು ದಾಖಲೆಗಳನ್ನು ನಿಖರವಾಗಿ ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.ವಿ.ಎಸ್. ಬೈರೇಶ್ ರವರು ಈ ಹಿಂದೆ ಮಂಡ್ಯ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗೆ ವರ್ಗಾವಣೆಗೊಂಡಿದ್ದರು. ಲೋಕಾಯುಕ್ತ ತಂಡದ ದಾಳಿ ಹಿನ್ನೆಲೆಯಲ್ಲಿ ಇಲಾಖೆಯಲ್ಲಿ ಚರ್ಚೆ ಉದ್ಭವಿಸಿದೆ.ಲೋಕಾಯುಕ್ತದಿಂದ ಅಧಿಕೃತ ಮಾಹಿತಿ ಹೊರಬರಬೇಕಿದೆ.

