Headlines

ಮಂಡ್ಯ ತಾಲ್ಲೂಕಿನಲ್ಲಿ ಶಾಲಾ ಫಲಿತಾಂಶ ಸುಧಾರಣೆ, ಆರೋಗ್ಯ-ಕೃಷಿ-ಪ್ರಾಣಿ ಸಂಪನ್ಮೂಲ ಅಭಿವೃದ್ಧಿಗೆ ಶಾಸಕ ಪಿ. ರವಿಕುಮಾರ್ ಸೂಚನೆ

ಮಂಡ್ಯ.ನ.18:- ಮಂಡ್ಯ ತಾಲ್ಲೂಕು ವ್ಯಾಪ್ತಿಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ವೃದ್ಧಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್ ಅವರು ಹೇಳಿದರು.

ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೆ.ಡಿ.ಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಂಡ್ಯ ತಾಲ್ಲೂಕು ವ್ಯಾಪ್ತಿಯ ಕೆಲವು ಆಸ್ಪತ್ರೆಗಳಲ್ಲಿ ವೈದ್ಯರು ರಾತ್ರಿ ವೇಳೆಯಲ್ಲಿ ಇರುವುದಿಲ್ಲವೆಂದು ದೂರು ಕೇಳಿ ಬರುತ್ತಿವೆ ಎಲ್ಲಾ ಆಸ್ಪತ್ರೆಗಳಲ್ಲೂ ರಾತ್ರಿ ವೇಳೆಯಲ್ಲಿ ವೈದ್ಯರು ಇರಬೇಕು. ವೈದ್ಯರ ಲಭ್ಯತೆ ಇಲ್ಲದಿದ್ದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಅಗತ್ಯವಿರುವ ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನು ನೇಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಹೇಳಿದರು.

ಎಲ್ಲಾ ಶಾಲೆಗಳಲ್ಲೂ ಮೂಲಭೂತ ಸೌಕರ್ಯ ಸಮರ್ಪಕವಾಗಿ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ದುರಸ್ಥಿಗೊಳ್ಳಬೇಕಾದ ಶಾಲೆಗಳ ಪಟ್ಟಿ ಸಿದ್ಧ ಪಡಿಸಿ ಮಾಹಿತಿ ನೀಡಿ ಎಂದು ತಿಳಿಸಿದರು. ಮಕ್ಕಳಿಗೆ ಶಾಲೆಗಳಲ್ಲಿ ಮಾನಸಿಕ ಒತ್ತಡ ನಿವಾರಣೆ ಮಾಡಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ, ಕೌನ್ಸೆಲಿಂಗ್ ಮಾಡಿಸಿ ಮಕ್ಕಳ ಕೌಶಲ್ಯ ಮತ್ತು ಶೈಕ್ಷಣಿಕ ವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದರು.

ಭತ್ತ ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿ ಪ್ರಾರಂಭಿಸಲಾಗಿದೆ. ಶೀಘ್ರದಲ್ಲೇ ಖರೀದಿಯನ್ನು ಪ್ರಾರಂಭಿಸಲಾಗುವುದು. ಕೃಷಿ ಇಲಾಖೆಗೆ ಸೇರಿದ ಯೋಜನೆಗಳನ್ನು ರೈತರಿಗೆ ತಿಳಿಸಿ. ಗುಂಪು ಕರೆ, ಪೋಸ್ಟರ್, ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಚಾರ ಮಾಡಿ. ಮಂಡ್ಯ ತಾಲ್ಲೂಕು ವ್ಯಾಪ್ತಿಯಲ್ಲಿ 15 ಜನರಿಗೆ ಹನಿ ನೀರಾವರಿ ಯೋಜನೆಯಡಿ ಅನುದಾನ ನೀಡಲಾಗಿದೆ. ಈರುಳ್ಳಿ ಶೇಖರಣಾ ಘಟಕ ನಿರ್ಮಾಣಕ್ಕೆ 11 ಜನರಿಗೆ ಅನುದಾನ ನೀಡಲಾಗಿದೆ. ಅಧಿಕಾರಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.

ಪಶುಗಳಿಗೆ ನೀಡಲಾಗುವ ಆಹಾರದಲ್ಲಿ ಕಲಬೆರಕೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಜಾನುವಾರಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಎಂದು ಹೇಳಿದರು.

ಮಂಡ್ಯ ತಾಲ್ಲೂಕು ವ್ಯಾಪ್ತಿಯಲ್ಲಿ ರೇಷ್ಮೆ ಕೃಷಿಗೆ ಬೇಡಿಕೆ ಹೆಚ್ಚಾಗಿದೆ. ಸದರಿ ವರ್ಷ ಮಂಡ್ಯ ತಾಲ್ಲೂಕು 68.37 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆಯ ಬೆಲ್ಲ ವಿಶ್ವಕ್ಕೆ ಪ್ರಸಿದ್ಧ ಇತ್ತೀಚಿನ ದಿನಗಳಲ್ಲಿ ಬೆಲ್ಲದ ಗುಣಮಟ್ಟ ಕಳಪೆಯಾಗಿದೆ ಎಂಬ ದೂರು ಕೇಳಿ ಬರುತ್ತಿವೆ. ಆಹಾರ ಸಂರಕ್ಷಣಾಧಿಕಾರಿ ವಿಶೇಷ ತಂಡ ರಚಿಸಿ ಜಿಲ್ಲೆಯ ಆಲೆಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದು ಸೂಚಿಸಿದರು.

ಅನರ್ಹ ಬಿ.ಪಿ.ಎಲ್ ಕಾರ್ಡ್ ಬಳಕೆದಾರರ ಹೆಸರನ್ನು ಕೈ ಬಿಡಲು ಸೂಚಿಸಲಾಗಿದೆ. ಮೊದಲ ಹಂತದಲ್ಲಿ ಮಂಡ್ಯ ತಾಲೂಕಿನ 1667 ಬಿ.ಪಿ.ಎಲ್ ಕಾರ್ಡ್ ಬಳಕೆದಾರರನ್ನು ಅರ್ಹ ಪಟ್ಟಿಯಿಂದ ಕೈ ಬೀಡಲಾಗಿದೆ. ಅಧಿಕಾರಿಗಳು ಬಿ.ಪಿ.ಎಲ್ ಬಳಕೆದಾರರ ಪಟ್ಟಿಯನ್ನು ಕೈ ಬಿಡುವ ಮೊದಲು ಅವರ ಆರ್ಥಿಕ ಸ್ಥಿತಿಯನ್ನು ಅವಲೋಕಿಸಿ ರದ್ದು ಪಡಿಸಿ ಅರ್ಹರನ್ನು ಬಿ.ಪಿ.ಎಲ್ ಪಟ್ಟಿಯಿಂದ ಕೈ ಬಿಡಬೇಡಿ ಎಂದು ಹೇಳಿದರು.

ಮಂಡ್ಯ ತಾಲ್ಲೂಕು ವ್ಯಾಪ್ತಿಯಲ್ಲಿ ಪದವಿ 921 ಹಾಗೂ 25 ಡಿಪ್ಲೊಮಾ ಒಟ್ಟು 936 ನಿರುದ್ಯೋಗಿಗಳು ಯುವನಿಧಿ ಯೋಜನೆ ಪಡೆದುಕೊಳ್ಳುತ್ತಿದ್ದಾರೆ. ಯುವನಿಧಿಯ ಕುರಿತಾಗಿ ಎಲ್ಲಾ ಕಾಲೇಜುಗಳಲ್ಲಿ ಪ್ರಚಾರ ಕೈಗೊಳ್ಳಿ. ಎಲ್ಲಾ ಯುವನಿಧಿ ಫಲಾನುಭವಿಗಳನ್ನು ಒಗ್ಗೂಡಿಸಿ ಅವರಿಗೆ ವಿವಿಧ ಕಾರ್ಯಾಗಾರಗಳನ್ನು ರೂಪಿಸಿ. ಮಂಡ್ಯ ತಾಲ್ಲೂಕಿನಲ್ಲಿ 18 ಹಾಸ್ಟೆಲ್ ಗಳು ಕಾರ್ಯ ನಿರ್ವಹಿಸುತ್ತಿವೆ ಸದರಿ ಸುಮಾರು 1750 ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 2 ಬಾಲಕಿಯರ ಹಾಸ್ಟೆಲ್ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ಆಹಾರದ ಗುಣಮಟ್ಟದ ಕಳಪೆಯಾಗಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಶೀಘ್ರವೇ ಪರಿಶೀಲಿಸಿ ನಾನು ಸಹ ಅಲ್ಲಿಗೆ ಬಂದು ಪರೀಕ್ಷೆ ಮಾಡುತ್ತೇನೆ. ಅಧಿಕಾರಿಗಳು ಹಾಸ್ಟೆಲ್ ಗಳಿಗೆ ತಿಂಗಳಿಗೆ 2 ರಿಂದ 3 ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದು ತಾಕೀತು ಮಾಡಿದರು.

ಬ್ಯಾಂಕ್ ಗಳು ರೈತರಿಗೆ ಸಾಲ ಮರುಪಾವತಿ ಮಾಡುವಂತೆ ಒತ್ತಾಯ ಮಾಡುತ್ತಿವೆ ಯಾವುದೇ ಬ್ಯಾಂಕ್ ಒತ್ತಾಯದಿಂದ ಸಾಲ ಮರುಪಾವತಿ ಮಾಡಿಸಿಕೊಂಡರೆ ಬ್ಯಾಂಕ್ ನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಂಡ್ಯ ತಾಲ್ಲೂಕು ವ್ಯಾಪ್ತಿಯಲ್ಲಿ ಚಿರತೆಯ ಉಪಟಳ ಹೆಚ್ಚಾಗಿದೆ ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಅಗತ್ಯವಿರುವ ಕಡೆ ಬೋನು ಇಟ್ಟು ಚಿರತೆ ಹಿಡಿಯಿರಿ. ಇಲ್ಲವಾದಲ್ಲಿ ಜನ ಜಾನುವಾರುಗಳಿಗೆ ಹಾನಿ ಸಂಭವಿಸುತ್ತದೆ. ಅರಣ್ಯ ಇಲಾಖೆ ಎಚ್ಚೆತ್ತು ಕಾರ್ಯೋನ್ಮುಖರಾಗಿ ಎಂದು ತಿಳಿ ಹೇಳಿದರು.

ನ್ಯಾಷನಲ್ ಹೈವೇ ಬಳಿ ತಡರಾತ್ರಿಯಾದರೂ ಮದ್ಯ ಮಾರಾಟವನ್ನು ಕೆಲವರು ಮಾಡುತ್ತಿದ್ದಾರೆ. ಎಲ್ಲೆಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆಯೊ ಎಲ್ಲರ ಮೇಲೆ ಕ್ರಮ ಕೈಗೊಳ್ಳಬೇಕು. ತಡ ರಾತ್ರಿ ಮದ್ಯ ಮಾರಾಟ ಮಾಡುವವರ ಲೈಸೆನ್ಸ್ ಅನ್ನು ರದ್ದು ಗೊಳಿಸಿ ಎಂದು ಹೇಳಿದರು.

ಸಭೆಯಲ್ಲಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಹಾಗೂ ಮಂಡ್ಯ ತಾಲ್ಲೂಕು ಆಡಳಿತಾಧಿಕಾರಿ ಶಿವಲಿಂಗಯ್ಯ, ಮಂಡ್ಯ ತಹಶೀಲ್ದಾರ್ ವಿಶ್ವನಾಥ್, ಮಂಡ್ಯ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ರುದ್ರಪ್ಪ, ಡಿ.ವೈ.ಎಸ್ಪಿ ಲಕ್ಷಿ ನಾರಾಯಣ್, ಮಂಡ್ಯ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ ಮೂರ್ತಿ, ಮಂಡ್ಯ ತಾಲ್ಲೂಕು ಯೋಜನಾಧಿಕಾರಿ ವೆಂಕಟರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!