ಬೀಜಿಂಗ್, ಸೆಪ್ಟೆಂಬರ್ 1: ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯು ಜಗತ್ತಿನ 3 ಪ್ರಮುಖ ಯುರೇಷಿಯನ್ ಶಕ್ತಿಗಳಾದ ಭಾರತ, ರಷ್ಯಾ ಮತ್ತು ಚೀನಾ ತಮ್ಮ ಏಕತೆ ಮತ್ತು ಶಕ್ತಿಯನ್ನು ಪ್ರದರ್ಶಿಸಲು ಮತ್ತು ಅಮೆರಿಕದಲ್ಲಿನ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಬಲವಾದ ಸಂದೇಶವನ್ನು ಕಳುಹಿಸಲು ವೇದಿಕೆಯಾಗಿದೆ. ಇಂದು ಒಗ್ಗಟ್ಟಾಗಿ ಕಾಣಿಸಿಕೊಂಡ ರಷ್ಯಾ ಅಧ್ಯಕ್ಷ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಅಪ್ಪಿಕೊಂಡು, ಹಸ್ತಲಾಘವ ನೀಡಿ, ನಗುತ್ತಾ ತಮಾಷೆ ಮಾಡುತ್ತಾ ಬಹಳ ಆತ್ಮೀಯವಾಗಿ ಕಾಣಿಸಿಕೊಂಡರು. ಈ ವೇಳೆ ಅಲ್ಲೇ ನಿಂತಿದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕಡೆ ತಿರುಗಿಯೂ ನೋಡದೆ ಅವರು ನಡೆದುಹೋದರು. ಇದರಿಂದ ಪಾಕ್ ಪ್ರಧಾನಿಗೆ ಮುಖಭಂಗವಾಯಿತು. ರಷ್ಯಾದ ತೈಲ ಖರೀದಿಸಿದ್ದರಿಂದಲೇ ಭಾರತದ ಮೇಲೆ ಹೆಚ್ಚುವರಿ ಶೇ. 25ರಷ್ಟು ತೆರಿಗೆ ವಿಧಿಸಿದ್ದ ಅಮೆರಿಕ ಪ್ರಧಾನಿ ಡೊನಾಲ್ಡ್ ಟ್ರಂಪ್ ಅವರಿಗೆ ಈ ಶೃಂಗಸಭೆಯ ಮೂಲಕ ಪ್ರಧಾನಿ ಮೋದಿ ನಿದ್ರೆಗೆಡಿಸಿದ್ದಾರೆ. ಅಮೆರಿಕದ ಶತ್ರುದೇಶವೆಂದೇ ಗುರುತಿಸಲ್ಪಟ್ಟಿರುವ ಚೀನಾ, ರಷ್ಯಾ ಅಧ್ಯಕ್ಷರ ಜೊತೆ ಮೋದಿ ಬಹಳ ಆತ್ಮೀಯವಾಗಿ ಕಾಣಿಸಿಕೊಳ್ಳುತ್ತಿರುವುದು ಮತ್ತು ಈ ಎರಡು ದೇಶಗಳ ಜೊತೆ ಭಾರತದ ಸಂಬಂಧ ಗಟ್ಟಿಗೊಳ್ಳುತ್ತಿರುವುದು ಅಮೆರಿಕಕ್ಕೆ ನುಂಗಲಾರದ ತುತ್ತಾಗಿದೆ.


