ಕಲಬುರಗಿ, ಜುಲೈ 23: ಎಂಆರ್‌ಎಂಸಿ ಮೆಡಿಕಲ್ ಕಾಲೇಜ್ ಶಿಷ್ಯ ವೇತನ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್‌ಕೆಇ ಸೊಸೈಟಿಯ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಭೀಮಾಶಂಕರ್ ಬಲಿಗುಂದಿಯ 5.87 ಕೋಟಿ ರೂ ಆಸ್ತಿಯನ್ನು ಇ.ಡಿ ಜಪ್ತಿ ಮಾಡಿದೆ. ಕಲಬುರಗಿಯ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2018 ರಿಂದ 2024 ರ ವರೆಗಿನ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳ ಶಿಷ್ಯ ವೇತನದಲ್ಲಿ ಅಂದಾಜು 82 ಕೋಟಿ ರೂ. ಹಗರಣ ನಡೆದಿತ್ತು. ಈ ಬಗ್ಗೆ ಟಿವಿ9 ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಆ ಬೆನ್ನಲ್ಲೆ ಕಳೆದ ಮಾರ್ಚ್ನಲ್ಲಿ ಇ.ಡಿ ಅಧಿಕಾರಿಗಳಿಂದ ಭೀಮಾಶಂಕರ್ ಬಲಿಗುಂದಿ ಸೇರಿ ನಾಲ್ವರ ಮನೆ ಮೇಲೆ ಇ.ಡಿ ದಾಳಿ ಮಾಡಿತ್ತು.
ಕಲಬುರಗಿ ಮೆಡಿಕಲ್ ಕಾಲೇಜಿನಲ್ಲಿ ಕೋಟ್ಯಂತರ ಶಿಷ್ಯವೇತನ ಗೋಲ್ ಮಾಲ್ ಭೀಮಾಶಂಕರ್ ಬಿಲಗುಂದಿ, ಕಾಲೇಜಿನ ಪ್ರಾಚಾರ್ಯ ಡಾ. ಎಸ್ಎಂ. ಪಾಟೀಲ್, ಕಾಲೇಜಿನ ಅಕೌಂಟೆಂಟ್ ಸುಭಾಷ್ ಜಗನ್ನಾಥ ಮತ್ತು ಕೆನರಾ ಬ್ಯಾಂಕ್ ಎಂಆರ್‌ಎಂಸಿ ಶಾಖೆಯ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಕಲಬುರಗಿಯ ಪ್ರತಿಷ್ಠಿತ ಹೆಚ್‌ಕೆಇ ಶಿಕ್ಷಣ ಸಂಸ್ಥೆಯ ಎಂಆರ್‌ಎಂಸಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ಶಿಷ್ಯವೇತನ ಹಗರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಬರುತ್ತಿದ್ದ ಶಿಷ್ಯವೇತನವನ್ನ ಕಾಲೇಜು ಆಡಳಿತ ಮಂಡಳಿ ನುಂಗಿ ನೀರು ಕುಡಿದಿರುವುದನ್ನು ಟಿವಿ9 ದಾಖಲೆಗಳ ಸಮೇತ ಬಯಲಿಗೆ ಎಳೆದಿತ್ತು. ಪಿಜಿ ವಿದ್ಯಾರ್ಥಿಗಳಿಗೆ ಬರುತ್ತಿದ್ದ ಶಿಷ್ಯವೇತನವನ್ನ ಬ್ಲಾಂಕ್ ಚೆಕ್ ಪಡೆದು ವಿದ್ಯಾರ್ಥಿಗಳಿಗೆ ವಂಚಿಸಿದ್ದರು. ಈ ಬಗ್ಗೆ ವಿದ್ಯಾರ್ಥಿಗಳು ಕೂಡ ಧರಣಿ ಮಾಡಿದ್ದರು.
ಮೆಡಿಕಲ್ ಕಾಲೇಜಿನ 300ಕ್ಕೂ ಅಧಿಕ ಪಿಜಿ ವಿದ್ಯಾರ್ಥಿಗಳಿಗೆ ತಿಂಗಳಿಗೆ 40 ರಿಂದ 45 ಸಾವಿರ ರೂ. ಶಿಷ್ಯವೇತನ ಬರುತ್ತಿತ್ತು. ಹಿಗೇ 81 ಕೋಟಿ ರೂ. ಶಿಷ್ಯವೇತನ ಹಣವನ್ನ ಕಾಲೇಜು ಆಡಳಿತ ಮಂಡಳಿ ಗುಳುಂ ಮಾಡಿತ್ತು. ಈ ಬಗ್ಗೆ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಗೆ ಹಣ ಕೊಡುವಂತೆ ಕೇಳಿದರೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿತ್ತು.

