Headlines

ಮುಜರಾಯಿ ಇಲಾಖೆ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ: ಹೈಕೋರ್ಟ್ ತೀರ್ಪು

ಬೆಂಗಳೂರು, ಜುಲೈ 16: ಅವ್ಯವಹಾರ ವಿಡಿಯೋ ಸಾಕ್ಷಿ ಮೂಲಕ ಸಾಬೀತಾದ ಬೆನ್ನಲ್ಲಿಯೇ ಬೆಂಗಳೂರಿನ ಐತಿಹಾಸಿಕ ಗಾಳಿ ಆಂಜನೇಯ ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದುಕೊಂಡಿದೆ. ಆದ್ರೆ, ಇದನ್ನು ಪ್ರಶ್ನಿಸಿ ದೇಗುಲದ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ರಾಜ್ಯಸರ್ಕಾರದ ಈ ಕ್ರಮಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.
ಗಾಳಿ ಆಂಜನೇಯ ದೇವಾಲಯದಲ್ಲಿ ಹಣ ದುರುಪಯೋಗದ ಆರೋಪವಿದೆ. ಹೀಗಾಗಿ ಸರ್ಕಾರದ ಕ್ರಮ ಮೇಲ್ನೋಟಕ್ಕೆ ತಪ್ಪೆನ್ನಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.

ಗಾಳಿ ಆಂಜನೇಯಸ್ವಾಮಿ ದೇವಾಲಯದ ಆಡಳಿತವನ್ನು ಸರ್ಕಾರ ತನ್ನ ಅಧೀನಕ್ಕೆ ಪಡೆದಿದ್ದು, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಇನ್ಮುಂದೆ ದೇವಾಲಯದ ಉಸ್ತುವಾರಿಯ ನಡೆಸಿಕೊಂಡು ಹೋಗಲಿದೆ. ದೇವಾಲಯದ ಆಡಳಿತ ಮಂಡಳಿಗೆ ಬೇರೆ ದಾರಿ ಕಾಣದೇ ಸರ್ಕಾರದ ನಿರ್ಧಾರದ ವಿರುದ್ಧ ಕೋರ್ಟ್ ಮೊರೆಹೋಗಿತ್ತು. ಆದ್ರೆ, ಇದೀಗ ಕೋರ್ಟ್ ಸಹ ಸರ್ಕಾರದ ಕ್ರಮ ಸರಿ ಇದೆ ಎಂದು ತಡೆ ನೀಡಲು ನಿರಾಕರಿಸಿದೆ. ಇದರಿಂದ ದೇವಸ್ಥಾನದ ಟ್ರಸ್ಟ್​​ ಗೆ ನಿರಾಸೆಯಾಗಿದೆ.

ಕಳೆದ ವರ್ಷ ದೇವಸ್ಥಾನದ ಹುಂಡಿ ಹಣ ಎಣಿಸುವಾಗಲೇ ಆಡಳಿತ ಮಂಡಳಿಯ ಸದಸ್ಯರು ಹಣ ಎಗರಿಸಿದ್ದರು. ಹಣ ಎಗರಿಸುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಘಟನೆಯ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರ ಮುಜರಾಯಿ ಇಲಾಖೆಗೆ ಸೂಚನೆ ನೀಡಿತ್ತು. ವರದಿಯಲ್ಲಿ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ವರ್ಗಾವಣೆಗೆ ಶಿಫಾರಸ್ಸು ಮಾಡಲಾಗಿತ್ತು. ಇದನ್ನು ಒಪ್ಪಿದ ಸರ್ಕಾರ 1997ರ 42 ಮತ್ತು 43ರನ್ವಯ ಘೋಷಿತ ಸಂಸ್ಥೆ ಎಂದು ಘೋಷಣೆ ಮಾಡಿತ್ತು.

ರಾಜ್ಯಸರ್ಕಾರದ ಆದೇಶದಲ್ಲಿ ಹೀಗಿದೆ…
“ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಬ್ಯಾಟರಾಯನಪುರದಲ್ಲಿರುವ ಶ್ರೀ ಗಾಳಿ ಆಂಜನೇಯಸ್ವಾಮಿ ದೇವಾಲಯವನ್ನು ಅವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸುತ್ತಿರುವುದು ಮತ್ತು ಹಣ ದುರುಪಯೋಗಪಡಿಸಿಕೊಂಡಿರುವುದು, ಟ್ರಸ್ಟ್​ ನಿರ್ವಹಣೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ, ಪ್ರಸ್ತಾಪಿತ ದೇವಾಲಯವನ್ನು ‘ಕರ್ನಾಟಕ ಹಿಂದೂ ಧಾರ್ಮಿಕ ಸಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, 1997ರ ಕಲಂ ಸೆಕ್ಷನ್ 42 ಮತ್ತು 43ರನ್ವಯ “ಘೋಷಿತ ಸಂಸ್ಥೆ” ಎಂದು ಘೋಷಿಸಲಾಗಿದೆ” ಎಂದು ಆದೇಶ ಹೊರಡಿಸಲಾಗಿದೆ.

ಈಗಾಗಲೇ ಧಾರ್ಮಿಕ ದತ್ತಿ ಇಲಾಖೆ ದೇವಾಲಯದ ನಿರ್ವಹಣೆಗೆ ಕಾರ್ಯಪಾಲಕ ಅಧಿಕಾರಿಯನ್ನು ನೇಮಕ ಮಾಡಿದೆ. ಇಓ ನಾರಾಯಣಸ್ವಾಮಿ ಅಧಿಕಾರ ವಹಿಸಿಕೊಂಡು ದೇವಾಲಯದ ಅಧಿಕಾರ ಪಡೆದುಕೊಂಡಿದ್ದಾರೆ. ಸರ್ಕಾರದ ಈ ನಿರ್ಧಾರವನ್ನು ದೇವಾಲಯದ ಆಡಳಿತ ಮಂಡಳಿ ಖಂಡಿಸಿದೆ. ನಮ್ಮ ಪೂರ್ವಿಕರಿಂದ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯತ್ವ ದೊರತಿದ್ದು, ಇಷ್ಟು ವರ್ಷ ದೇವಸ್ಥಾನದ ಅಭಿವೃದ್ಧಿಗಾಗಿ ಶ್ರಮಿಸಿದ ನಮಗೆ ಅನ್ಯಾಯವಾಗಿದೆ ಎಂದು ಗ್ರಾಮಸ್ಥರು ಮತ್ತು ಟ್ರಸ್ಟಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!