ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ ಚಾಮರಾಜನಗರ ಜಿಲ್ಲೆಯ ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದ ಅಮಾಯಕ ಯುವಕರ ಮೇಲೆ ಖಾಕಿ ಪಡೆ ದರ್ಪ ಮೆರೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಂದಹಳ್ಳಿ ಗ್ರಾಮದ ಶಿವರಾಜು ಹಾಗೂ ಕುಮಾರ್ ಎಂಬುವವರು ತಮ್ಮ ಮೊಬೈಲ್ ಕಳ್ಳತನವಾಗಿರುವ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳ ಸಮೇತ ದೂರು ನೀಡಲು ಠಾಣೆಗೆ ತೆರಳಿದ್ದರು. ಆದರೆ, ಅಲ್ಲಿ ನ್ಯಾಯ ಸಿಗುವ ಬದಲು ಪೊಲೀಸರ ಹಲ್ಲೆ ಮತ್ತು ಅವಾಚ್ಯ ಶಬ್ದಗಳ ನಿಂದನೆ ಎದುರಾಗಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ಸಂತ್ರಸ್ತರ ಆರೋಪದ ಪ್ರಕಾರ, ಸಬ್ ಇನ್ಸ್ಪೆಕ್ಟರ್ ಆಕಾಶ್ ಹಾಗೂ ಪೊಲೀಸ್ ಪೇದೆ ಶಿವಕುಮಾರ್ ಹಾಸನ್ ಎಂಬುವವರು, “ನಾವು ಹೇಳಿದಂತೆ ದೂರು ಬರೆದುಕೊಡು, ಮೊಬೈಲ್ ಕಳ್ಳತನವಾಗಿಲ್ಲ ಬದಲಾಗಿ ಬಿದ್ದು ಹಾಳಾಗಿದೆ ಎಂದು ಸುಳ್ಳು ಹೇಳು, ಇಲ್ಲದಿದ್ದರೆ ನಿನ್ನ ಮೇಲೆ ಕಳ್ಳತನದ ಕೇಸ್ ಹಾಕುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಜಾಗಕ್ಕೆ ಕರೆದೊಯ್ದು ಮದ್ಯದ ಅಮಲಿನಲ್ಲಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಪೊಲೀಸರ ಹೊಡೆತದಿಂದ ನೊಂದ ಯುವಕರು ಆಸ್ಪತ್ರೆಗೆ ದಾಖಲಾಗಿ ವೈದ್ಯಕೀಯ ಪ್ರಮಾಣಪತ್ರ ಪಡೆದಿದ್ದು, ಮದ್ಯಪಾನ ಮಾಡಿ ಕರ್ತವ್ಯದ ಅವಧಿಯಲ್ಲಿ ಹಲ್ಲೆ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಯಳಂದೂರು ಭಾಗದಲ್ಲಿ ದೂರು ಸ್ವೀಕರಿಸಲು ವಿಳಂಬ ಮಾಡುವುದು, ದೂರುದಾರರನ್ನು ಬೆದರಿಸಿ ರಾಜೀ ಮಾಡಿಸುವುದು ಹಾಗೂ ದಲಿತ ವಿರೋಧಿ ಧೋರಣೆ ತೋರುವುದು ಸಾಮಾನ್ಯವಾಗಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ಡಿಜಿಪಿ ಅವರ ‘ಜನಸ್ನೇಹಿ ಪೊಲೀಸ್’ ಎಂಬ ಆದೇಶಗಳು ಈ ಜಿಲ್ಲೆಯ ಕೆಲವು ಠಾಣೆಗಳಿಗೆ ಅನ್ವಯವಾಗುತ್ತಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಪಾನಮತ್ತರಾಗಿ ದರ್ಪ ತೋರಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ನ್ಯಾಯ ಒದಗಿಸಬೇಕಿದೆ.

