Headlines

ರಾತ್ರಿ ಆದ್ರೆ ಸಾಕು ಪೊಲೀಸ್ ಠಾಣೆಗಳು ಕ್ಲೋಸ್: ಡಿಜಿಪಿ ಸಲೀಂ ಅವ್ರೇ ಇದನ್ನೊಮ್ಮೆ ನೋಡಿ!

ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ

ಗಡಿ ಜಿಲ್ಲೆ ಚಾಮರಾಜನಗರದ ಪೊಲೀಸ್ ಇಲಾಖೆಯಲ್ಲಿ ವಿಚಿತ್ರವೊಂದು ಜಾರಿಯಲ್ಲಿದೆ. “ಜನಸ್ನೇಹಿ ಪೊಲೀಸ್” ಎಂಬ ಘೋಷವಾಕ್ಯಕ್ಕೆ ಇಲ್ಲಿನ ಕೆಲವು ಠಾಣೆಗಳು ಅಕ್ಷರಶಃ ಬೀಗ ಜಡಿಯುತ್ತಿವೆ. ಜಿಲ್ಲೆಯ ಸೆನ್ (CEN) ಮತ್ತು ಮಹಿಳಾ ಪೊಲೀಸ್ ಠಾಣೆಗಳು ರಾತ್ರಿ ಹೊತ್ತಾದರೆ ಸಾಕು, ದೂರುದಾರರಿಗಾಗಿ ಕಾಯುವ ಬದಲು ಬಾಗಿಲಿಗೆ ಬೀಗ ಹಾಕಿಕೊಂಡು ವಿಶ್ರಮಿಸುತ್ತಿರುವ ಗಂಭೀರ ಆರೋಪಗಳು ಕೇಳಿಬರುತ್ತಿವೆ.

​ವರದಿಯ ಪ್ರಕಾರ, ಮಾರ್ಚ್ 26ರ ರಾತ್ರಿ 9 ಗಂಟೆ ಹಾಗೂ 27ರ ಬೆಳಗಿನ ಜಾವ 8 ಗಂಟೆಯ ಸಮಯದಲ್ಲೂ ಸೆನ್ ಠಾಣೆಯ ಗೇಟ್ ಮತ್ತು ಬಾಗಿಲಿಗೆ ಬೀಗ ಹಾಕಲಾಗಿತ್ತು. ರಾತ್ರಿ ವೇಳೆ ಯಾರೂ ದೂರು ನೀಡಲು ಬರುವುದಿಲ್ಲ ಎಂಬ ಉಡಾಫೆಯೋ ಅಥವಾ ಸಿಬ್ಬಂದಿಗಳ ಕೊರತೆಯ ನೆಪವೋ ತಿಳಿಯುತ್ತಿಲ್ಲ. ಈ ಹಿಂದೆ ಸ್ವತಃ ನ್ಯಾಯಾಧೀಶರೊಬ್ಬರು ಭೇಟಿ ನೀಡಿದಾಗಲೂ ಇಂತಹುದೇ ಪರಿಸ್ಥಿತಿ ಇತ್ತು ಎಂಬ ಕಾರಣಕ್ಕೆ ಇನ್ಸ್‌ಪೆಕ್ಟರ್ ಒಬ್ಬರು ಅಮಾನತುಗೊಂಡ ಇತಿಹಾಸವಿದ್ದರೂ, ಇಲ್ಲಿನ ವ್ಯವಸ್ಥೆ ಮಾತ್ರ ಸುಧಾರಿಸಿಲ್ಲ.

​ಇನ್ನೊಂದು ಗೊಂದಲವೆಂದರೆ, ಸೆನ್ ಠಾಣೆಯು ಇತ್ತೀಚೆಗೆ ಮೈಸೂರು ಸೆನ್ ಎಸ್ಪಿಯವರ ವ್ಯಾಪ್ತಿಗೆ ಸೇರ್ಪಡೆಗೊಂಡಿದೆ. ಈ ತಾಂತ್ರಿಕ ಬದಲಾವಣೆಯನ್ನು ಬಳಸಿಕೊಂಡು ಸ್ಥಳೀಯ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇನ್ನು ಮಹಿಳಾ ಠಾಣೆಯ ಕಥೆಯೂ ಭಿನ್ನವಾಗಿಲ್ಲ; ಯಾರಾದರೂ ದೂರು ನೀಡಲು ಬಂದರೆ ‘ಊಟಕ್ಕೆ ಹೋಗಿದ್ದೆವು’ ಅಥವಾ ‘ಹೊರಗೆ ಹೋಗಿದ್ದೆವು’ ಎಂಬ ಸಿದ್ಧ ಉತ್ತರಗಳು ಇಲ್ಲಿ ತಯಾರಾಗಿರುತ್ತವೆ.

​24 ಗಂಟೆಯೂ ಸಾರ್ವಜನಿಕರ ರಕ್ಷಣೆಗಾಗಿ ಇರಬೇಕಾದ ಠಾಣೆಗಳು ಈ ರೀತಿ ಬೀಗ ಹಾಕಿಕೊಳ್ಳುತ್ತಿರುವುದು ಇಲಾಖೆಯ ಶಿಸ್ತನ್ನು ಪ್ರಶ್ನಿಸುವಂತಿದೆ. ಈ ಹಿಂದೆ ಠಾಣೆಯ ಆವರಣದಲ್ಲಿದ್ದ ವಾಹನವೇ ಕಳ್ಳತನವಾದ ಘಟನೆಯೂ ನಡೆದಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಡಿಜಿಪಿ ಸಲೀಂ ಅವರು ಕೂಡಲೇ ಈ ಬಗ್ಗೆ ಗಮನಹರಿಸಿ, ಕರ್ತವ್ಯ ಲೋಪವೆಸಗುತ್ತಿರುವ ಅಧಿಕಾರಿಗಳಿಗೆ ಚಾಟಿ ಬೀಸಬೇಕಿದೆ. ಇಲ್ಲವಾದರೆ ಪೊಲೀಸ್ ಠಾಣೆಗಳು ಕೇವಲ ನಾಮಫಲಕಕ್ಕೆ ಸೀಮಿತವಾಗುವ ಅಪಾಯವಿದೆ.

Leave a Reply

Your email address will not be published. Required fields are marked *

error: Content is protected !!