ಲೇಖನ -ಎಸ್. ಪ್ರಕಾಶ್ ಬಾಬು
ಪತ್ರಕರ್ತ -ಗ್ರಂಥಕರ್ತ ಮೈಸೂರು-ಬೆಂಗಳೂರು
ನಿಮಗೆಲ್ಲ ನಕಲಿ ಮದ್ಯದ ವ್ಯವಹಾರ ಗೊತ್ತಿಲ್ಲ ಅನ್ನಿಸುತ್ತೆ. ಈ ನಕಲಿ ಮದ್ಯ ವ್ಯಾಪಾರ ಮಾಡದೇ ಯಾರೂ ಲಕ್ಷಾಂತರ ಖರ್ಚು ಮಾಡಿ ಬಾರು ವೈನ್ ಸ್ಟೋರ್ ನಡೆಸೋಲ್ಲ. ಮನೆಯಲ್ಲೇ ಕಳಪೆ ಸ್ಪಿರಿಟ್ ತಂದು, ಅದಕ್ಕೆ ಕಲರ್ ಹಾಕಿ, ಅದಕ್ಕೆ ಬೇಕಾದ ವಿಸ್ಕಿ, ರಮ್, ಬ್ರಾಂಡಿ ಫ್ಲೆವರ್ ಹಾಕಿ, ಬಾಟಲಿಗೆ, ಬೇಕಾದ ಲೇಬಲ್ ಅಂಟಿಸಿ, ಕಾರ್ಕ್ ಹಾಕಿ ಮಾರುವುದು 50ವರ್ಷಗಳಿಂದ ನಡೆದು ಬರುತ್ತಿದೆ. ಇದೇ ಒಂದು ದೊಡ್ಡ ಮಾಫಿಯ. ಇದರ ಬಗ್ಗೆ ಯಾರೂ ಆಳವಾಗಿ ತಿಳಿದಿಲ್ಲ. ಹೀಗಾಗಿ, ಕೆಲವರು ಮದ್ಯದ ಅಮಲಿನಲ್ಲಿ ತೇಲುತ್ತಿದ್ದಾರೆ. ಇಂತಹ ನಕಲಿ ಮದ್ಯ ಸೇವಿಸಿಯೇ ಈಗಿನ ಯುವಕರು ಮಧ್ಯ ವಯಸ್ಸಿಗೆ ಗೊಟಕ್ ಅನ್ನುತ್ತಿದ್ದಾರೆ.
ಇಂತಹ ಅಪಾಯಕಾರಿ ಮದ್ಯ ಪಾನ ನಿಷೇಧಕ್ಕೆ 1966ರಲ್ಲಿ ನಿಜ ಲಿಂಗಪ್ಪ ಸಂಪುಟದಲ್ಲಿ ಆಗಷ್ಟೇ ಸ್ಥಾಪಿಸಿತವಾದ ಸಮಾಜ ಕಲ್ಯಾಣ ಸಚಿವೆ ಆಗಿದ್ದ ಶ್ರೀಮತಿ ಯಶೋಧರ ದಾಸಪ್ಪ ಮದ್ಯಪಾನ ನಿಷೇಧ ಮಾಡಬೇಕು ಅಂತ ಒತ್ತಾಯಿಸಿದರು. ರಾಜ್ಯದ ಮೊದಲ ಸಂಪುಟ ದರ್ಜೆ ಸಚಿವೆ ಹಾಗೂ 1950ರಲ್ಲೇ ಮೊದಲ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ಯಶೋಧರಮ್ಮನ ಮಾತಿಗೆ ಕಿವಿಗೊಡದೆ, ಉಡಾಫೆ ಮಾತಾಡಿದ ಅಂದಿನ ಹಣಕಾಸು ಮಂತ್ರಿ ರಾಮಕೃಷ್ಣ ಹೆಗ್ಡೆ ಮತ್ತು ಕಂದಾಯ ಮಂತ್ರಿ ವೀರೇಂದ್ರ ಪಾಟೀಲ್ ವಿರುದ್ಧ ಸಿಡಿದೆದ್ದು ರಾಜೀನಾಮೆ ನೀಡಿ ಹೊರ ನಡೆದರು. ಗಾಂಧೀಜಿ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದು, ಅವರು ಪ್ರತಿಪಾದಿಸಿದ ಮದ್ಯ ಪಾನ ನಿಷೇದ ಜಾರಿ ಆಗುವವರೆಗೂ ವಿಧಾನ ಸೌಧದ ಮೆಟ್ಟಿಲು ತುಳಿಯೋಲ್ಲ ಎಂದು ಹೊರ ನಡೆದಿದ್ದರು. ಹಾಗೇ,ಶ್ರೀಮತಿ ಯಶೋಧರ ದಾಸಪ್ಪ ಶಪಥ ಮಾಡದೇ ಇದ್ದಿದ್ದರೆ, ಅವರ ಶಿಷ್ಯರಾದ ದೇವರಾಜ್ ಅರಸು ಮುಂಚೆಯೇ ಮುಖ್ಯಮಂತ್ರಿ ಆಗಬಹುದಿತ್ತು. ಹೀಗಾಗಿದ್ದರೆ, ಮೊದಲ ಮಹಿಳಾ ಮುಖ್ಯ ಮಂತ್ರಿ ಎಂಬ ಹೆಗ್ಗಳಿಕೆಯು ಯಶೋಧರ ದಾಸಪ್ಪ ಅವರಿಗೇ ಸಿಗುತ್ತಿತ್ತು. ಆದರೇ ತತ್ವ ನಿಷ್ಠೆಗೆ ಬದ್ಧರಾಗಿ ರಾಜಕೀಯ ಸನ್ಯಾಸ ಸ್ವೀಕರಿಸಿದರು. ಇದರಿಂದ ಆಕೆ ಯಾರೂ ಅನ್ನೋದು ಇರಲಿ, ಅವರ ಹೆಸರನ್ನೇ ಜನ ಮರೆತು ಬಿಟ್ಟಿದ್ದಾರೆ.
ಜನ ಯಶೋಧರಮ್ಮನನ್ನು ಮರೆತಿದ್ದರೂ, ಅವರು ಪ್ರತಿಪಾದಿಸಿದ ಮದ್ಯ ಪಾನ ನಿಷೇದ ಜಾರಿಗೆ ತಂದಿದ್ದರೆ ಈ 60ವರ್ಷಗಳಲ್ಲಿ ಕೋಟ್ಯಂತರ ಜೀವಗಳು ಉಳಿಯುತ್ತಿದ್ದವು. ಅದೆಷ್ಟೋ ಕುಟುಂಬಗಳು ಚೆನ್ನಾಗಿರುತ್ತಿದ್ದವು.
ಈಗಲೂ ಕಾಲ ಮಿಂಚಿಲ್ಲ, ಸಂಪೂರ್ಣ ಮದ್ಯಪಾನ ನಿಷೇದ ಮಾಡಿದರೆ, ಸಾವಿನ ದಾರಿಯಲ್ಲಿರುವ ಅದೆಷ್ಟೋ ಜೀವಗಳು, ಸಂಸಾರಗಳು ಬದುಕುಳಿಯುತ್ತವೆ. ಬಹು ಮುಖ್ಯವಾಗಿ ಯುವಕರು ಬೀದಿ ಹೆಣವಾಗುವುದು ತಪ್ಪುತ್ತೆ.
ಅಂದ ಹಾಗೇ, ಶ್ರೀಮತಿ ಯಶೋಧರ ದಾಸಪ್ಪ ಸಾಧನೆ ಅಷ್ಟಿಷ್ಟಲ್ಲ. ದೀನ ದಲಿತರಿಗೆ ಇವರು ಮಾಡಿದಷ್ಟು ಉತ್ತಮ ಸೇವೆ ದಲಿತ ನಾಯಕರು ಸಹ ಮಾಡಿಲ್ಲ. ರಾಜ್ಯದ ಎಲ್ಲೆಲ್ಲಿ ಯಶೋಧರ ಪುರ ಮತ್ತು ಯಶೋಧರ ನಗರ ಅಂತಾ ಇದೆಯೋ, ಅವೆಲ್ಲ ಯಶೋಧರ ದಾಸಪ್ಪ ತಾವೇ ಜಮೀನು ಖರೀದಿಸಿ ಹರಿಜನ ಗಿರಿಜನರಿಗೇ ಹಂಚಿದ ಭೂಮಿಗಳು. ಹೀಗೆ ಬೆಂಗಳೂರು ಜಕ್ಕೂರು ಬಳಿ ನಿರ್ಮಿಸಿಕೊಟ್ಟ ಊರು ಈಗ ಯಶೋಧರ ನಗರವಾಗಿದೆ. ಹುಣಸೂರು ಬಳಿ ಯಶೋಧರ ಪುರ ಇದೆ. ಅರಸೀಕೆರೆಯಲ್ಲಿರುವ ಕಸ್ತೂರ್ ಬಾ ಆಶ್ರಮ ಗಾಂಧಿ ಸೂಚನೆಯಂತೆ ನಿರ್ಮಿಸಿದ್ದರು. ಹಾಗೇ, ಮೈಸೂರಿನ ಪಡುವಾರಹಳ್ಳಿ ದಲಿತ ಕೇರಿಯ ಮಕ್ಕಳನ್ನು ಕರೆ ತಂದು ಸ್ನಾನ ಮಾಡಿಸಿ, ಸಮೀಪದ ನಿರ್ಮಲ ಕಾನ್ವೆಂಟ್ ಸೇರಿಸುತ್ತಿದ್ದರು. ಈ ದಲಿತ ಮಕ್ಕಳೆಲ್ಲ ಇಂದು ವೈದ್ಯರು, ಮಹಾರಾಣಿ ಕಾಲೇಜು ಪ್ರಿನ್ಸಿಪಾಲರು, ಆಗಿದ್ದಾರೆ.
ಹೀಗೇ ಸರ್ವ ಜನಾಂಗವನ್ನು ಮನುಷ್ಯರಂತೆ ಪೋಷಿಸಿ ಬೆಳೆಸಿದ ಯಶೋಧರಮ್ಮನನ್ನು ಇಂದು ಯಾರೂ ನೆನೆಯುತ್ತಿಲ್ಲ. ಶಿವಪುರ ಧ್ವಜ ಸತ್ಯಾಗ್ರಹದ ರೂವಾರಿಗಳಲ್ಲಿ ಒಬ್ಬರಾ ದ ಶ್ರೀಮತಿ ಯಶೋಧರ ದಾಸಪ್ಪ ಸಾಮಾನ್ಯ ಮನೆತನದವರಲ್ಲ. ಇವರ ತಂದೆ ಕೆ.ಹೆಚ್. ರಾಮಯ್ಯ 1906ರಲ್ಲಿ ರಾಜ್ಯ ಒಕ್ಕಲಿಗರ ಸಂಘ 1928ರಲ್ಲಿ ಆದಿ ಚುಂಚನಗಿರಿ ಮಠ ಸ್ಥಾಪಿಸಿಕೊಟ್ಟವರು. ಇವರ ಪತಿ ಹೆಚ್. ಸಿ. ದಾಸಪ್ಪ ಮೊದಲ ರೈಲ್ವೆ ಸಚಿವರು. ಹೆಚ್. ಸಿ. ದಾಸಪ್ಪ ತಂದೆ ಜಸ್ಟೀಸ್ ಹೆಚ್. ಚೆನ್ನಯ್ಯ 1916ರಲ್ಲಿ ರಾಜ್ಯದ ಮೊದಲ ಪ್ರಾದೇಶಿಕ ಪಕ್ಷ ಪ್ರಜಾಮಿತ್ರ ಮಂಡಳಿ ಸ್ಥಾಪಿಸಿ,1919ರಲ್ಲಿ ಮೈಸೂರು ಸಂಸ್ಥಾನದಲ್ಲಿ ದಲಿತರು ಒಳಗೊಂಡ ಹಿಂದುಳಿದ ವರ್ಗಕ್ಕೆ ಮೀಸಲಾತಿ ದೊರಕಿಸಿಕೊಟ್ಟವರು. ಯಶೋಧರಮ್ಮ ಮಗ ಹೆಚ್.ಡಿ. ತುಳಸಿ ದಾಸ್ 1967-80ರವರೆಗೆ ಮೈಸೂರು ಲೋಕ ಸಭಾ ಸದಸ್ಯರಾಗಿದ್ದ ಮೈಸೂರಿನ ಏಕೈಕ ಹ್ಯಾಟ್ರಿಕ್ ಸಂಸದ. ಇಂತಹ ಉದಾತ್ತ ಮಹಿಳೆ ಹೆಸರಲ್ಲಿ ಮೈಸೂರಿನಲ್ಲಿ ಒಂದು ರಸ್ತೆ ಅಥವಾ ವೃತ್ತಕ್ಕೂ ಇಟ್ಟಿಲ್ಲ.
ಇತ್ತೀಚೆಗೆ ಮೈಸೂರಿನ ಮಾತೃ ಮಂಡಳಿ ವೃತ್ತಕ್ಕೆ ಅಂಬೇಡ್ಕರ್ ಹೆಸರಿಡಿ ಅಂತ ದಲಿತರು, ಕುವೆಂಪು ಹೆಸರಿಡಿ ಅಂತ ಒಕ್ಕಲಿಗರು ಕಿತ್ತಾಡಿಕೊಂಡರು. ಆಗ ಅವರಿಗೇ ಮೈಸೂರಿನಲ್ಲಿ ಅಂಬೇಡ್ಕರ್ ಮತ್ತು ಕುವೆಂಪು ಹೆಸರಿನಲ್ಲಿ ಅದೆಷ್ಟೋ ರಸ್ತೆ ವೃತ್ತಕ್ಕೆ ಇಡಲಾಗಿದೆ. ದಲಿತರು ಮತ್ತು ಒಕ್ಕಲಿಗರಿಬ್ಬರಿಗೂ ಬೇಕಾದ ಶ್ರೀಮತಿ ಯಶೋಧರ ದಾಸಪ್ಪ ಹೆಸರು ಆ ವೃತ್ತಕ್ಕೆ ಇಡಬೇಕೆಂಬ ಬುದ್ದಿ ಯಾರಿಗೂ ಬರಲಿಲ್ಲ. ಕಾರಣ, ಅಂತಹ ಉಕ್ಕಿನ ಮಹಿಳೆಯ ಹೆಸರೇ ಅವರಿಗೆ ತಿಳಿದಿರಲಾರದು. ಈಗಲಾದರೂ ಪಡುವಾರಹಳ್ಳಿಯ ದಲಿತರು ಮತ್ತು ಒಕ್ಕಲಿಗರು ಒಗ್ಗಟ್ಟಾಗಿ ಮಾತೃ ಮಂಡಳಿ ಸ್ಕೂಲ್ ವೃತ್ತಕ್ಕೆ ಶ್ರೀಮತಿ ಯಶೋಧರ ದಾಸಪ್ಪ ಹೆಸರಿಡಲು ಮುಂದಾಗಲಿ ಎಂದು ಈ ಮೂಲಕ ವಿನಂತಿಸುತ್ತೇನೆ. ಉಪಕಾರ ಮಾಡಿದವರ ನೆನೆಯದ ಕೃತಘ್ನ ಜನರಿಂದಾಗಿಯೇ ಇಂದು ಖಾಲಿ ಪೋಲಿ ಗಳೆಲ್ಲ ರಾಜಕಾರಣಿ ವೇಷ ಹಾಕಿಕೊಂಡು ಮೆರೆಯುತ್ತಿರುವುದು. ಈಗಲಾದರೂ ಜನ ನಮಗೆ ಒಳ್ಳೆಯದನ್ನು ಮಾಡಿದ ಮಹನೀಯರನ್ನೂ ನೆನೆದು ಕೃತಜ್ಞತೆ ಸಲ್ಲಿಸೋಣ. ಆಗಲಾದರೂ ಈ ದೇಶಲ್ಲಿ ಒಳ್ಳೆ ಜನ ನಾಯಕರು ಹುಟ್ಟಬಹುದೇನೋ 🙏

