Headlines

ರಾಹುಲ್ ಗಾಂಧಿ ಮತಗಳ್ಳತನ ಆರೋಪ ಸಿಎಂ ಸಿದ್ದರಾಮಯ್ಯಗೆ ಕಂಟಕ!

ಬೆಂಗಳೂರು, ಆಗಸ್ಟ್ 21: ಕಳೆದ 2024 ರ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂಬ ರಾಹುಲ್ ಗಾಂಧಿ ಅವರ ಗಂಭೀರ ಆರೋಪ ಇದೀಗ ಖುದ್ದು ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿಗೆ ಸಂಚಕಾರ ತಂದಿದೆ. ಏಕೆಂದರೆ ಹಿಂದಿನ 2018ರ ಕರ್ನಾಟಕ ವಿಧಾನಸಭೆ ಚುನಾವಣೆಯ ಬಾದಾಮಿ ಕ್ಷೇತ್ರದಲ್ಲಿ ಮತ ಖರೀದಿ ಮಾಡಿದ್ದರಿಂದ ಸಿದ್ದರಾಮಯ್ಯನವರು ಗೆದ್ದದ್ದು ಎಂದು ಇಂದು ಸಿ.ಎಂ. ಇಬ್ರಾಹಿಂ ಗಂಭೀರ ಆರೋಪ ಮಾಡಿದ್ದಾರೆ. ಇಬ್ರಾಹಿಂ ಅವರ ಈ ಹೇಳಿಕೆಯನ್ನು ಆಧರಿಸಿ ರಾಜ್ಯ ಬಿಜೆಪಿ, ರಾಜ್ಯ ಚುನಾವಣಾ ಆಯೋಗಕ್ಕೆ ಇಂದು ದೂರು ನೀಡಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ 3000 ಮತ ಖರೀದಿ ಕುರಿತು ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಹೇಳಿಕೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ 7 ಕೋಟಿ ರೂ. ಹಂಚಿಕೆ ಕುರಿತು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿಕೆಯನ್ನು ಆಧರಿಸಿ ಬಿಜೆಪಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.

ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥ್ ನಾರಾಯಣ, ಮಾಜಿ ಎಂಎಲ್ಸಿಗಳಾದ ಕ್ಯಾ. ಗಣೇಶ್ ‌ಕಾರ್ಣಿಕ್, ಅರುಣ್ ಶಹಾಪುರ ಮತ್ತು ಬಿಜೆಪಿ ಕಾನೂನು ಪ್ರಕೋಷ್ಠ ಸಂಚಾಲಕ ವಸಂತಕುಮಾರ್ ಅವರನ್ನೊಳಗೊಂಡ ಬಿಜೆಪಿ ತಂಡ, ಈ ಬಗ್ಗೆ ಇಂದು ರಾಎ ಚುನಾವಣಾ ಆಯೋಗಕ್ಕೆ ದೂರು ನೀಡಿ, ಸಿ.ಎಂ ಇಬ್ರಾಹಿಂ ಮತ್ತು ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿಕೆಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದೆ.

ಕೇಂದ್ರ ಚುನಾವಣೆ ಆಯೋಗಕ್ಕೂ ಪತ್ರ
ರಾಹುಲ್ ಗಾಂಧಿ ಮತಗಳ್ಳತನದ ಆರೋಪ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಬೆಂಗಳೂರಿನಲ್ಲಿ ಪ್ರತಿಭಟನಾ ಸಮಾವೇಶ ನಡೆಸಿ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎಂದು ಕೆಲ ಅಂಕಿ-ಸಂಖ್ಯೆ ಬಿಡುಗಡೆಗೊಳಿಸಿದ್ದರು. ಇದರ ಬೆನ್ನಲ್ಲೇ ಸಿದ್ದರಾಮಯ್ಯನವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಸಿ.ಎಂ. ಇಬ್ರಾಹಿಂ, ಸಿದ್ದರಾಮಯ್ಯ ವಿರುದ್ಧ ಮತ ಖರೀದಿ ಆರೋಪ ಮಾಡಿದ್ದರು. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಬಿಜೆಪಿ, ಸಿದ್ದರಾಮಯ್ಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಈ ಸಂಬಂಧ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಹ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಸಿ.ಎಂ.ಇಬ್ರಾಹಿಂ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇಬ್ರಾಹಿಂ ಹೇಳಿದ್ದೇನು?
“2018ರ ಅಸೆಂಬ್ಲಿ ಚುನಾವಣೆಯಲ್ಲಿ ಏನಾಗಿತ್ತು ಗೊತ್ತಾ? ಚಾಮುಂಡೇಶ್ವರಿಯಲ್ಲಿನ ಗ್ರೌಂಡ್ ರಿಪೋರ್ಟ್ ಸರಿಯಿರಲಿಲ್ಲ, ಅದಕ್ಕಾಗಿ ಬಾದಾಮಿಯಲ್ಲೂ ಸಿದ್ದರಾಮಯ್ಯ ಕಣಕ್ಕಿಳಿದಿದ್ದರು. 2 ಕಡೆ ಸ್ಪರ್ಧಿಸಿದ್ದರು. ಬಾದಾಮಿಯಲ್ಲಿ, 3 ಸಾವಿರ ಮತವನ್ನು ಖರೀದಿಸದಿದ್ದರೆ ಅಲ್ಲೂ ಸೋಲುತ್ತಿದ್ದರು” ಎಂದು ಸಿ.ಎಂ ಇಬ್ರಾಹಿಂ ಹೇಳಿದ್ದರು.

ಬಾದಾಮಿಯಲ್ಲಿ ನಾನು ಬುದ್ದಿವಂತಿಕೆಯಿಂದ ಕೆಲಸ ಮಾಡಿದೆ. ಅಲ್ಲಿನ ಪರಿಸ್ಥಿತಿಯೂ ಸಿದ್ದರಾಮಯ್ಯನವರಿಗೆ ಪೂರಕವಾಗಿರಲಿಲ್ಲ. ನಾನು ಬೇರೆ ಕಡೆ ಸಾಲ ಮಾಡಿ ಮೂರು ಸಾವಿರ ಮತಗಳನ್ನು ಖರೀದಿ ಮಾಡಿದ್ದೆ. ಆ ಕಾರಣಕ್ಕಾಗಿ, ಅವರು ಅಲ್ಪಮತದಲ್ಲಿ ಗೆಲುವು ಸಾಧಿಸಿದರು. 6 ತಿಂಗಳ ನಂತರ, ಸಿದ್ದರಾಮಯ್ಯ ನಾನು ಖರ್ಚು ಮಾಡಿದ್ದ ದುಡ್ಡನ್ನು ವಾಪಸ್ ಕೊಟ್ಟರು ಎಂದು ಹೇಳಿದ್ದಾರೆ.

ನಾನು ಹೇಳುತ್ತಿರುವುದು ನಿಜ, ನಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡುತ್ತೇನೆ. ಆದರೆ, ಮೇಲ್ಮನೆಯಲ್ಲಿ ನನ್ನನ್ನು ಗೌರವದಿಂದ ಕಾಣಲಿಲ್ಲ, ಆ ಕಾರಣಕ್ಕಾಗಿ ರಾಜೀನಾಮೆ ನೀಡಿದೆ ಎಂದು ಇಬ್ರಾಹಿಂ ಹೇಳಿದ್ದಾರೆ. ಆ ಮೂಲಕ, ಮತದಾರರಿಗೆ ದುಡ್ಡು ಕೊಟ್ಟು ಮತ ಚಲಾಯಿಸಿಕೊಂಡಿದ್ದನ್ನು ಸಿ.ಎಂ ಇಬ್ರಾಹಿಂ ಪರೋಕ್ಷವಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!