ಬೆಂಗಳೂರು/ನವದೆಹಲಿ, ಆ.23: ಮುಂದಿನ 6 ತಿಂಗಳಲ್ಲಿ ನಡೆಯಬಹುದಾದ ಬಿಬಿಎಂಪಿ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆ ವೇಳೆಗೆ ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಸರಿಪಡಿಸುವಂತೆ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲ ರಾಜ್ಯದ ಪ್ರಮುಖ ನಾಯಕರಿಗೆ ಕಟ್ಟಪ್ಪಣೆ ಮಾಡಿದ್ದಾರೆ.
ನಿನ್ನೆ ಶುಕ್ರವಾರ ರಾತ್ರಿ ರಾಜ್ಯದ ಪ್ರಮುಖ ಕೈ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲ, ಈ ಹಿಂದೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಾದ ಮತ ಪಟ್ಟಿಯಲ್ಲಿನ ಅಕ್ರಮಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು ರಾಜ್ಯ ಚುನಾವಣಾ ಆಯೋಗದ ಜವಾಬ್ದಾರಿಯಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಸಂಪೂರ್ಣವಾಗಿ ರಾಜ್ಯ ವ್ಯಾಪ್ತಿಯ ಅಧಿಕಾರಿಗಳ ಹೊಣೆಯಾಗಿದೆ.
ಹೀಗಾಗಿ ಈ ಹಿಂದೆ ನಡೆದಿರುವ ಲೋಪಗಳನ್ನು ಸರಿಪಡಿಸುವ ಜೊತೆಗೆ ಕರಾರುವಾಕ್ಕಾದ ಮತದಾರರ ಪಟ್ಟಿ ಸಜ್ಜುಗೊಳ್ಳಬೇಕು. ಇದಕ್ಕೆ ಸಚಿವ ಸಂಪುಟದ ಸದಸ್ಯರು ಕಾಲಕಾಲಕ್ಕೆ ನಿಗಾ ವಹಿಸಬೇಕು ಎಂದು ಸುರ್ಜೇವಾಲ ಸಲಹೆ ನೀಡಿದ್ದಾರೆ.
ಪಕ್ಷದ ಬೂತ್‌ಮಟ್ಟದ ಕಾರ್ಯಕರ್ತರು ಮತದಾರರ ಪಟ್ಟಿಯಲ್ಲಿನ ಪರಿಷ್ಕರಣೆ ಬಗ್ಗೆ ಸದಾಕಾಲ ಎಚ್ಚರಿಕೆ ವಹಿಸಬೇಕು. ಈ ಹಿಂದೆ ಅಲ್ಪಸಂಖ್ಯಾತರ ಮತಗಳನ್ನು ಹಾಗೂ ಪರಿಶಿಷ್ಟರ ಮತಗಳನ್ನು ತೆಗೆದು ಹಾಕಿರುವುದು, ಅನ್ಯ ರಾಜ್ಯಗಳ ಮತದಾರರನ್ನು ಭಾರೀ ಪ್ರಮಾಣದಲ್ಲಿ ಸೇರ್ಪಡೆ ಮಾಡಿರುವುದು, ನಕಲಿ ಮತದಾರರ ಸಂಖ್ಯೆ ಹೆಚ್ಚಿರುವುದು ವ್ಯಾಪಕವಾಗಿತ್ತು.
ಜೊತೆಗೆ ಒಬ್ಬ ವ್ಯಕ್ತಿ ಎರಡಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನಮೂದಿಸಿಕೊಂಡಿರುವುದು ವ್ಯಾಪಕವಾಗಿ ಕಂಡುಬಂದಿದೆ. ಈ ರೀತಿಯ ಪ್ರಕರಣಗಳನ್ನು ಸರಿಪಡಿಸಬೇಕು ಎಂದು ಸುರ್ಜೇವಾಲ ಚರ್ಚೆ ನಡೆಸಿರುವುದಾಗಿ ತಿಳಿದುಬಂದಿದೆ. ಜೊತೆಗೆ ಭವಿಷ್ಯದ ನಾಯಕರನ್ನು ಸೃಷ್ಟಿಸುವ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಳ್ಳಬೇಕು. ಪಕ್ಷ ಸಂಘಟನೆ, ಚುನಾವಣಾ ತಯಾರಿ ಎಲ್ಲದರಲ್ಲೂ ಎಚ್ಚರಿಕೆಯ ಹೆಜ್ಜೆ ಇಡಬೇಕು.
ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷ ನಿಷ್ಠರಿಗೆ ಆದ್ಯತೆ ನೀಡಬೇಕು. ವಲಸಿಗ ಅಭ್ಯರ್ಥಿ ಸಂಖ್ಯೆ ಶೇ. 10ಕ್ಕಿಂತ ಹೆಚ್ಚಿರಬಾರದು, ಅನಿವಾರ್ಯ ಸಂದರ್ಭದಲ್ಲಿ ಅನ್ಯ ಪಕ್ಷಗಳಿಂದ ಬಂದವರಿಗೆ ಟಿಕೆಟ್ ನೀಡಬೇಕಾದರೆ, ಸ್ಥಳೀಯ ನಾಯಕರ ಜೊತೆ ಸಮಾಲೋಚನೆ ನಡೆಸಿ, ಒಪ್ಪಿಗೆ ಪಡೆದುಕೊಳ್ಳುವುದು ಕಡ್ಡಾಯ ಎಂದು ಸುರ್ಜೇವಾಲ ತಾಕೀತು ಮಾಡಿದ್ದಾರೆ.
ಸಂಪನ್ಮೂಲ ಹೊಂದಾಣಿಕೆ ಹಾಗೂ ಕ್ಷೇತ್ರವಾರು ಚುನಾವಣಾ ಉಸ್ತುವಾರಿಗೆ ನಿಯೋಜನೆಗೊಳ್ಳುವ ಸಚಿವರ ಮತ್ತು ಶಾಸಕರ ಪಟ್ಟಿಯನ್ನು ಸಿದ್ಧಪಡಿಸಿ ಈ ತಿಂಗಳ ಅಂತ್ಯದಲ್ಲಿ ಕೆಪಿಸಿಸಿಗೆ ಸಲ್ಲಿಸುವಂತೆ ಸುರ್ಜೇವಾಲ ಸೂಚನೆ ನೀಡಿದ್ದಾರೆ. ಹಲವು ದಿನಗಳಿಂದ ನನೆಗುದಿಗೆ ಬಿದ್ದಿರುವ ಬಿಬಿಎಂಪಿ, ಜಿ.ಪಂ, ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ರಾಜ್ಯಸರ್ಕಾರ ತಯಾರಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸುರ್ಜೇವಾಲ ಸಭೆ ಮಹತ್ವ ಪಡೆದುಕೊಂಡಿದೆ.

