ಬೆಂಗಳೂರು, ಆಗಸ್ಟ್ 19: ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದೆ ತಮಿಳುನಾಡಿನ ಕಾಂಗ್ರೆಸ್ ಸಂಸದ ಹಾಗೂ ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಕೈವಾಡವಿದೆ ಎಂದು ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಸದ ಸಸಿಕಾಂತ್ ಸೆಂಥಿಲ್ ಮೂಲಕ ಧರ್ಮಸ್ಥಳ ಕೇಸ್ ಮಾಡಿಸುತ್ತಿದ್ದಾರೆ ಎಂದರು.
ಕೋರ್ಟ್ ಮೊರೆ ಹೋಗುವೆ ಎಂದ ಜನಾರ್ದನ ರೆಡ್ಡಿ!
ಮುಸುಕುಧಾರಿಯೂ ಕೂಡ ತಮಿಳುನಾಡು ಮೂಲದವನು. ಮುಸುಕುಧಾರಿ ಇಷ್ಟು ವರ್ಷ ತಮಿಳುನಾಡಿನಲ್ಲಿಯೇ ವಾಸಿಸುತ್ತಿದ್ದನು. ತಮಿಳುನಾಡಿನ ಆ ವ್ಯಕ್ತಿಗೂ, ಸಸಿಕಾಂತ್ ಸೆಂಥಿಲ್ಗೂ ನಂಟಿದೆ. ಧರ್ಮಸ್ಥಳ ಕೇಸ್ ಸಂಬಂಧ ಎಸ್ಐಟಿ ತನಿಖೆಯಿಂದ ಸತ್ಯ ಹೊರಬರಲ್ಲ. ರಾಜ್ಯಸರ್ಕಾರದ ಸಂಸ್ಥೆಗಳಿಂದ ಸತ್ಯ ಹೊರಬರುವುದಿಲ್ಲ. ಸಿಬಿಐ ಹಾಗೂ ಎನ್ಐಎಯಿಂದ ತನಿಖೆ ಆಗಬೇಕು. ನ್ಯಾಯಕ್ಕಾಗಿ ನಾನು ನ್ಯಾಯಾಲಯದ ಮೊರೆ ಹೋಗುತ್ತೇನೆ. ಸಾರ್ವಜನಿಕ ಹಿತಾಸಕ್ತಿ ಅಡಿ ದೂರು ಕೊಡುತ್ತೇನೆ ಎಂದು ಜನಾರ್ದನ ರೆಡ್ಡಿ ಹೇಳಿದರು.

