Headlines

ಸೌಜನ್ಯ ಕೇಸ್: ನಾನೇ ಸಾಕ್ಷಿ ಎಂದಿದ್ದ ಮಹಿಳೆಯ ಅಸಲಿ ವಿಷಯ ಬಹಿರಂಗ!

ಮಂಡ್ಯ, ಸೆ.24: ಸೌಜನ್ಯ ಪ್ರಕರಣಕ್ಕೆ ಮತ್ತೊಂದು ಹೊಸ ಟ್ವಿಸ್ಟ್​ ಸಿಕ್ಕಿದೆ. ಸೌಜನ್ಯ ಅತ್ಯಾಚಾರ ಕಣ್ಣಾರೆ ಕಂಡಿದ್ದೆ ಎಂದು ದೂರು ಕೊಟ್ಟಿದ್ದ ಮಂಡ್ಯ (Mandya) ಮೂಲದ ಮಹಿಳೆ ಬಗ್ಗೆ ಆಕೆಯ ಸಹೋದರನೇ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. TV9 ಜೊತೆ ಮಾತನಾಡಿರುವ ಮಹಿಳೆಯ ಸಹೋದರ ಶಿವಕೆಂಪಯ್ಯ, ಆಕೆ ಹೇಳಿದ್ದೆಲ್ಲ ಬರೀ ಸುಳ್ಳು. ಅವಳ ಹಿಂದೆ ಯಾರೋ ನಿಂತು ಈ ರೀತಿ ಹೇಳಿಸುತ್ತಿದ್ದು, ಸೌಜನ್ಯಗೆ ನ್ಯಾಯ ಕೊಡಿಸುವ ಯಾವ ಉದ್ದೇಶವೂ ಆಕೆಗೆ ಇಲ್ಲ ಎಂದಿದ್ದಾರೆ.

ನನ್ನ ಸಹೋದರಿ 16 ವರ್ಷ ಇದ್ದಾಗಲೇ ಕೇರಳದ ಕ್ರಿಶ್ಚಿಯನ್ ಯುವಕನ ಜೊತೆ ಓಡಿ ಹೋಗಿದ್ದು, ಹಲವು ವರ್ಷ ಅಲ್ಲಿಯೇ ಇದ್ದಳು. ಬಳಿಕ 2 ಮಕ್ಕಳ ಜೊತೆ ಮಂಡ್ಯಕ್ಕೆ ಬಂದು ಗಂಡನಿಗೇ ಚಾಕು ಇರಿದಿದ್ದಳು. ಈ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದೆ. ನಂತರ ಮಹಿಳಾ ಸಂಘಟನೆಗೆ ಸೇರಿಕೊಂಡಿರುವ ಈಕೆಗೆ ಕ್ರಿಮಿನಲ್​ ಹಿನ್ನೆಲೆಯಿದೆ. ಅವಳು ಹೇಳೋದೆಲ್ಲ ಬರೀ ಸುಳ್ಳಾಗಿದ್ದು, ಸೌಜನ್ಯ ಕೇಸ್​ ವಿಚಾರವಾಗಿಯೂ ಆಕೆ ಹೇಳ್ತಿರೋದು ಅದನ್ನೇ ಎಂದಿದ್ದಾರೆ.

ಮಂಡ್ಯ ಮಹಿಳೆ ಸಹೋದರ ಹೇಳಿದ್ದೇನು ನೋಡಿ.
ಸಹೋದರಿಯ ನಡತೆಯೇ ಸರಿ ಇಲ್ಲ ಎಂದಿರುವ ಶಿವಕೆಂಪಯ್ಯ, ನನ್ನ ವಿರುದ್ಧವೂ ಆಕೆ ದೂರು ಕೊಟ್ಟಿದ್ದಳು. ಅದೇ ರೀತಿ ಬಹಳ ಜನರ ವಿರುದ್ಧ ಅವಳು ಕಂಪ್ಲೇಂಟ್​ ಕೊಟ್ಟಿದ್ದಾಳೆ. ಆಕೆ 1980ರಲ್ಲೇ ಮನೆ ಬಿಟ್ಟು ಗಾರೆ ಕೆಲಸ ಮಾಡುತ್ತಿದ್ದವನ ಜೊತೆ ಹೋದಳು. ಆ ಸಂಧರ್ಭದಲ್ಲಿ ಅಂತರ್ಜಾತಿ ವಿವಾಹ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ನಾವು ಇರಲಿಲ್ಲ. ಇನ್ನು ಸೌಜನ್ಯ ಕೇಸ್​ ವಿಚಾರವಾಗಿ ಒಡನಾಡಿ ಸಂಸ್ಥೆಯವರು ನಮ್ಮನ್ನ ಸಂಪರ್ಕ ಮಾಡಿದ್ರು. ಕೆಲ ಮಾಹಿತಿಯನ್ನೂ ಪಡೆದಿಕೊಂಡಿದ್ದಾರೆ ಎಂದು ಶಿವಕೆಂಪಯ್ಯ TV9ಗೆ ತಿಳಿಸಿದ್ದಾರೆ.

ಮಂಡ್ಯ ಮಹಿಳೆ ಏನು ಹೇಳಿದ್ದಳು?
ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದ ಸಮೀಪ ಒಬ್ಬ ಹುಡುಗಿಯ ಅಪಹರಣ ಮಾಡಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಧರ್ಮಸ್ಥಳ ದೇಗುಲದಲ್ಲಿ ಪೂಜೆ ಸಲ್ಲಿಸಿ, ಪ್ರಕೃತಿ ಚಿಕಿತ್ಸಾಲಯಕ್ಕೆ ಹೊರಟಿದ್ದ ವೇಳೆ ಈ ಘಟನೆ ನನ್ನ ಎದುರಲ್ಲಿಯೇ ನಡೆದಿದೆ. ಘಟನೆ ನೋಡಿದ ಬಳಿಕ ಅಧಿಕಾರಿಗಳಿಗೆ ಈ ಬಗ್ಗೆ ಹೇಳಬೇಕು ಎಂದು ಭಾವಿಸಿದ್ದೆ. ಆದರೆ ಆ ಸಂದರ್ಭ ಅದು ಸಾಧ್ಯವಾಗಲಿಲ್ಲ ಎಂದು ಮಹಿಳೆ ಹೇಳಿದ್ದಳು. ಅಲ್ಲದೆ ತಾನು ಹೇಳುತ್ತಿರುವ ಆ ಸ್ಥಳಕ್ಕೆ ಯಾರೆಲ್ಲ ಬಂದಿದ್ದರು, ಅವರ ವರ್ತನೆ ಹೇಗಿತ್ತು ಎಂಬ ಬಗ್ಗೆಯೂ ಮಹಿಳೆ ತಿಳಿಸಿದ್ದಳು.

Leave a Reply

Your email address will not be published. Required fields are marked *

error: Content is protected !!