ವಿಜಯಪುರ, ಆ.28: ರಾಜ್ಯದ ಕಾಂಗ್ರೆಸ್ ಸರ್ಕಾರ ಇತ್ತೀಚಿಗೆ ಒಂದಲ್ಲ ಒಂದು ವಿವಾದಕ್ಕೀಡಾಗಿ ಮುಜುಗರ ಅನುಭವಿಸುತ್ತಿದೆ. ಮೈಸೂರಿನ ಚಾಮುಂಡಿ ಬೆಟ್ಟ, ಧರ್ಮಸ್ಥಳ ಪ್ರಕರಣ ಹಾಗೂ ಪಂಚ ಗ್ಯಾರಂಟಿಗಳ ಬಗ್ಗೆ ಓರ್ವ ಹಿರಿಯ ಸಚಿವ ಅಸಮಾಧಾನ ವ್ಯಕ್ತಪಡಿಸಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ತಮ್ಮ ಕ್ಷೇತ್ರಕ್ಕೆ ಅನುದಾನ ವಿಚಾರವಾಗಿ ಹೀಗೆ ಹಿರಿಯ ಸಚಿವರೊಬ್ಬರು ಬಹಿರಂಗವಾಗಿ ಹೇಳಿಕೆ ನೀಡಿರುವುದರಿಂದ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಇರುಸು-ಮುರುಸು ಉಂಟಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಕೈ ಸರ್ಕಾರದ ಒಂದು ಭಾಗವಾಗಿರುವ ಸಚಿವರೇ ಸಿಡಿದೆದ್ದಿದ್ದಾರೆ. ಏಕೆಂದರೆ ಸಚಿವ ಶಿವಾನಂದ ಪಾಟೀಲ್ ಅವರು ತಮ್ಮದೇ ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ಮಾಜಿ ಮುಖ್ಯಮಂತ್ರಿಯೂ ಆದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಹಾಡಿ ಹೊಗಳಿ ಸರ್ಕಾರಿ ವೈದ್ಯಕೀಯ ಕಾಲೇಜು ವಿಚಾರವಾಗಿ ತಮ್ಮ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇಂದು (ಆಗಸ್ಟ್ 28) ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ಪಿಪಿಪಿ ಮಾದರಿಯ ಮೆಡಿಕಲ್ ಕಾಲೇಜು ಸ್ಥಾಪನೆ ಪ್ರಸ್ತಾವನೆ ಕೈಬಿಡಿ. ರಾಜ್ಯಸರ್ಕಾರ ಕೂಡಲೇ ಪಿಪಿಪಿ ಮಾದರಿಯ ಮೆಡಿಕಲ್ ಕಾಲೇಜು ಸ್ಥಾಪನೆ ಪ್ರಸ್ತಾವನೆ ಕೈಬಿಡಬೇಕು. ಯಾವ ಉದ್ದೇಶಕ್ಕಾಗಿ ಪಿಪಿಪಿ ಮಾದರಿ ಪ್ರಸ್ತಾವನೆ ತರಲಾಗಿದೆ ಗೊತ್ತಿಲ್ಲ. ಸರ್ಕಾರದ ಈ ನಿರ್ಧಾರ ನನಗೆ ನೋವು ತರಿಸಿದೆ. ಯಾರಿಗಾಗಿ ಪಿಪಿಪಿ ಮಾದರಿ ಮೆಡಿಕಲ್ ಕಾಲೇಜು ಎಂದು ಸಚಿವ ಶಿವಾನಂದ ಪಾಟೀಲ್ ನೇರವಾಗಿ ಪ್ರಶ್ನಿಸಿದರು.
“ಚುನಾವಣಾ ಪ್ರಣಾಳಿಕೆಯಲ್ಲಿ ವೈದ್ಯಕೀಯ ಕಾಲೇಜು ಭರವಸೆ ನೀಡಿದ್ದೆವು. ಆದರೆ ಈಗ ಏಕೆ ಪಿಪಿಪಿ ಮೆಡಿಕಲ್ ಕಾಲೇಜು” ಎಂದು ಪ್ರಶ್ನಿಸಿದ ಸಚಿವ ಶಿವಾನಂದ ಪಾಟೀಲ್, ಈ ಹಿಂದೆ ನಾನು ಆರೋಗ್ಯ ಸಚಿವನಾಗಿದ್ದಾಗ ಜಿಲ್ಲಾಸ್ಪತ್ರೆ ಅಭಿವೃದ್ಧಿ ಮಾಡಿದ್ದೆ. ಎಂಸಿಹೆಚ್ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ದೇಶದಲ್ಲಿ ಅತ್ಯುತ್ತಮ ಸರ್ಕಾರಿ ಆಸ್ಪತ್ರೆ ವಿಜಯಪುರ ಜಿಲ್ಲಾಸ್ಪತ್ರೆಯಾಗಿತ್ತು. ನಾನು ಆರಂಭಿಸಿದ ಹಲವು ಕಟ್ಟಡಗಳನ್ನು ಇನ್ನೂ ಉದ್ಘಾಟನೆ ಮಾಡಿಲ್ಲ. ನನ್ನ ಹೆಸರಿಗೆ ಅನ್ನೋ ಕಾರಣಕ್ಕೆ ಉದ್ಘಾಟನೆ ಮಾಡದೆ ಇರಬಹುದು. ಈ ಹಿಂದೆಯೂ ಜಿಲ್ಲೆಯ ಸಚಿವರು, ಶಾಸಕರು ಸಾಥ್ ನೀಡಿರಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಕುಮಾರಸ್ವಾಮಿ ನಮಗೆ ಸಹಾಯ ಮಾಡಿದ್ರು!
ಇನ್ನು ಇದೇ ವೇಳೆ ಅಚ್ಚರಿ ಎಂಬಂತೆ ಮಾಜಿ ಸಿಎಂ ಆದ ಹಾಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಸಚಿವ ಶಿವಾನಂದ ಪಾಟೀಲ್ ಹಾಡಿ ಹೊಗಳಿದ್ದಾರೆ. ಹಿಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವೇಳೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ವಿಜಯಪುರ ಜಿಲ್ಲಾಸ್ಪತ್ರೆಗಾಗಿ ನನಗೆ ಸಹಾಯ ಮಾಡಿದ್ದರು ಎಂದು ಹೇಳಿ ಪರೋಕ್ಷವಾಗಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಹಾಗೂ ತಮ್ಮ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೇಸರ ವ್ಯಕ್ತಡಿಸಿದರು.
ಈ ಹಿಂದೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಹಾಗೂ ಶಿವಾನಂದ ಪಾಟೀಲ್ ನಡುವೆ ಮುಸುಕಿನ ಗುದ್ದಾಟ ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಶಿವಾನಂದ ಪಾಟೀಲ್ ಅವರು ಮತ್ತೆ ಕುಮಾರಸ್ವಾಮಿ ಹೆಸರು ಹೇಳದೇ ಜಿಲ್ಲಾಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ವಿಚಾರವಾಗಿ ಎಂ.ಬಿ ಪಾಟೀಲ್ ವಿರುದ್ಧ ಗರಂ ಆಗಿದ್ದಾರೆ.
ಒಟ್ಟಾರೆ ಅನುದಾನ ತಾರತಮ್ಯ ಮತ್ತು ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಹಿರಿಯ ಸಚಿವರೇ ಆಕ್ರೋಶ ವ್ಯಕ್ತಪಡಿಸಿರುವುದರಿಂದ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಮುಜುಗರ ಉಂಟಾಗಿದೆ.

