Headlines

ಎಚ್ಐವಿ ಪೀಡಿತ ತಮ್ಮನನ್ನು ಕೊಲೆಗೈದ ಅಕ್ಕ, ಕೊಲೆಗೆ ಸಾಥ್ ನೀಡಿದ ಪತಿ..!?

ಹೊಳಲ್ಕೆರೆ, ಜುಲೈ 28: ಹೆಚ್‌ಐವಿ ಪೀಡಿತನಾಗಿದ್ದ ತಮ್ಮನಿಂದ ನಮ್ಮ ಮನೆ ಮರ್ಯಾದೆ ಹೋಗುತ್ತದೆ ಎಂದು ಸ್ವತಃ ಅಕ್ಕನೇ ತನ್ನ ಗಂಡನ ಜೊತೆ ಸೇರಿ ಆತನನ್ನು ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದಲ್ಲಿ ನಡೆದಿದೆ.

ಹೀಗೆ ತನ್ನ ಒಡಹುಟ್ಟಿದ ಅಕ್ಕನಿಂದಲೇ ಕೊಲೆಗೀಡಾದ ಯುವಕನನ್ನು ಮಲ್ಲಿಕಾರ್ಜುನ್‌(23) ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೊಲೆಗೀಡಾದ ಮಲ್ಲಿಕಾರ್ಜುನನ ಅಕ್ಕ ನಿಶಾ ಹಾಗೂ ಆಕೆಯ ಪತಿ ಮಂಜುನಾಥ್‌ ನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಮಲ್ಲಿಕಾರ್ಜುನ್‌ ಬೆಂಗಳೂರಿನಲ್ಲಿ ಗಾರ್ಮೆಂರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಜುಲೈ 23ರಂದು ತನ್ನ ಸ್ವಗ್ರಾಮವಾದ ದುಮ್ಮಿಗೆ ಕಾರಿನಲ್ಲಿ ಸ್ನೇಹಿತರೊಂದಿಗೆ ಬರುತ್ತಿದ್ದಾಗ ಹಿರಿಯೂರು ತಾಲ್ಲೂಕಿನ ಐಮಂಗಲ ಬಳಿ ಅಪಘಾತ ಸಂಭವಿಸಿ ಕಾಲು ಮುರಿದ ಪರಿಣಾಮ ದಾವಣಗೆರೆ ಆಸ್ಪತ್ರೆಗೆ ದಾಖಲಾಗಿದ್ದ.

ಅಪಘಾತಗೊಂಡಿದ್ದ ವೇಳೆ ಮಲ್ಲಿಕಾರ್ಜುನನಿಗೆ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ನೀಡಲಾಗಿತ್ತು. ಆದರೆ ರಕ್ತಪರೀಕ್ಷೆ ವೇಳೆ ಮಲ್ಲಿಕಾರ್ಜುನ್‌ಗೆ ಹೆಚ್‌ಐವಿ ಕಾಯಿಲೆ ಇದೆ ಅನ್ನೋದು ಗೊತ್ತಾಯಿತು. ಇದರಿಂದ ಕಳೆದ ಜುಲೈ 25ರಂದು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಯಿಂದ ಮಣಿಪಾಲ್‌ ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಆಂಬುಲೆನ್ಸ್ ನಲ್ಲೇ ಮಲ್ಲಿಕಾರ್ಜುನನ್ನ ಅಕ್ಕನೇ ಕೊಲೆಗೈದಿದ್ದಾಳೆ. ಇದಕ್ಕೆ ಪತಿ ಮಂಜುನಾಥ್‌ ಕೂಡ ಸಾಥ್‌ ನೀಡಿದ್ದಾನೆ. ಆದರೆ ಇದು ಯಾರಿಗೂ ಗೊತ್ತಾಗಿರಲಿಲ್ಲ.

ಇನ್ನು ಅಂತ್ಯಕ್ರಿಯೆ ವೇಳೆ ಮಲ್ಲಿಕಾರ್ಜುನ್‌ನ ಕುತ್ತಿಗೆ ಮೇಲಿದ್ದ ಗಾಯದ ಗುರುತು ಕಂಡು ಸಂಬಂಧಿಕರು ಹಾಗು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಮೃತನ ತಂದೆ ನಾಗರಾಜ್‌ ಹೊಳಲ್ಕೆರೆ ಪೊಲೀಸ್‌‍ ಠಾಣೆಗೆ ದೂರು ನೀಡಿದರು. ತನಿಖೆ ವೇಳೆ ಮಲ್ಲಿಕಾರ್ಜುನ ಹೆಚ್‌ಐವಿ ಪೀಡಿತ ಎಂಬ ಕಾರಣಕ್ಕೆ ಮರ್ಯಾದೆಗೆ ಅಂಜಿ ಸಹೋದರಿಯೇ ಹತ್ಯೆಗೈದಿರುವ ಸತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮ್ಮನನ್ನೇ ಕೊಲೆಗೈದ ಅಕ್ಕ ನಿಶಾಳನ್ನ ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!