ನವದೆಹಲಿ, ಸೆಪ್ಟೆಂಬರ್ 4: ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತೀಯ ನಾಗರಿಕರಾಗುವ 3 ವರ್ಷಗಳ ಮೊದಲೇ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದೆ ಎಂದು ಆರೋಪಿಸಿ ದೆಹಲಿ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ.
ರೂಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ACJM) ವೈಭವ್ ಚೌರಾಸಿಯಾ ಅವರು ಇಂದು ಸ್ವಲ್ಪ ಸಮಯದವರೆಗೆ ಪ್ರಕರಣದ ವಿಚಾರಣೆ ನಡೆಸಿ, ಸೆಪ್ಟೆಂಬರ್ 10ರಂದು ಈ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ವಿಕಾಸ್ ತ್ರಿಪಾಠಿ ಎಂಬುವವರು ಸಲ್ಲಿಸಿದ ಅರ್ಜಿಯಲ್ಲಿ ಸೋನಿಯಾ ಗಾಂಧಿಯವರು ಏಪ್ರಿಲ್ 1983ರಲ್ಲಿ ಭಾರತದ ನಾಗರಿಕರಾಗಿದ್ದರೂ, 1980ರಲ್ಲಿಯೇ ನವದೆಹಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿತ್ತು ಎಂದು ಆರೋಪಿಸಲಾಗಿದೆ. 1980ರಲ್ಲಿ ಸೋನಿಯಾ ಗಾಂಧಿಯವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. 1982ರಲ್ಲಿ ಡಿಲೀಟ್ ಮಾಡಲಾಗಿದೆ ಮತ್ತು ನಂತರ 1983ರಲ್ಲಿ ಮತ್ತೆ ಸೇರಿಸಲಾಗಿದೆ ಎಂದು ತ್ರಿಪಾಠಿ ಆರೋಪಿಸಿದ್ದಾರೆ.
“ಭಾರತೀಯ ಪೌರತ್ವಕ್ಕಾಗಿ ಅವರ ಅರ್ಜಿಯೂ ಸಹ ಏಪ್ರಿಲ್ 1983ರದ್ದಾಗಿದೆ. ಹಾಗಾದರೆ 1980ರಲ್ಲಿ ನವದೆಹಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಹೇಗೆ ಸೇರಿಸಲ್ಪಟ್ಟಿತು, ನಂತರ ಅದನ್ನು 82ರಲ್ಲಿ ಡಿಲೀಟ್ ಮಾಡಿ 1983ರಲ್ಲಿ ಏಕೆ ಮರು ನಮೂದಿಸಲಾಯಿತು?” ಎಂದು ತ್ರಿಪಾಠಿ ಅವರ ವಕೀಲರು ಪ್ರಶ್ನಿಸಿದ್ದಾರೆ.
1980ರಲ್ಲಿ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದರೆ ಕೆಲವು ನಕಲಿ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದರ್ಥ. ಆದ್ದರಿಂದ, ಎಫ್‌ಐಆರ್ ದಾಖಲಿಸಲು ಆದೇಶಗಳನ್ನು ಹೊರಡಿಸುವಂತೆ ಅವರು ನ್ಯಾಯಾಲಯವನ್ನು ಕೋರಿದರು. ತ್ರಿಪಾಠಿ ಅವರ ವಕೀಲರು ವಾದಗಳನ್ನು ಪೂರ್ಣಗೊಳಿಸಿದ ನಂತರ, ಮುಂದಿನ ವಾರ ವಿಷಯವನ್ನು ಮತ್ತೆ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಸೋನಿಯಾ ಗಾಂಧಿ ಅಥವಾ ದೆಹಲಿ ಪೊಲೀಸರಿಗೆ ಈ ಬಗ್ಗೆ ಇನ್ನೂ ಯಾವುದೇ ಔಪಚಾರಿಕ ನೋಟಿಸ್ ನೀಡಲಾಗಿಲ್ಲ.

