Headlines

ಕನ್ನಡ ಧ್ವಜಕ್ಕೆ ಮತ್ತೆ ಹಕ್ಕು ಮಂಡಿಸಿ ಕೇಂದ್ರಕ್ಕೆ ಪತ್ರ ಬರೆದ ರಾಜ್ಯಸರ್ಕಾರ

ಬೆಂಗಳೂರು, ಜುಲೈ 19: ರಾಜ್ಯಸರ್ಕಾರ ಕನ್ನಡ ಧ್ವಜಕ್ಕೆ ಧ್ವಜಕ್ಕೆ ಮತ್ತೆ ಹಕ್ಕು ಮಂಡಿಸಿದೆ. ಹಳದಿ-ಕೆಂಪು ಬಾವುಟಕ್ಕೆ ಅಧಿಕೃತ ಮಾನ್ಯತೆ ಕೊಡುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 2017 ರಲ್ಲೇ ಬಾವುಟ ಅಧಿಕೃತ ಕೋರಿ ಕೇಂದ್ರಕ್ಕೆ ಅಂದಿನ ಸಿದ್ದರಾಮಯ್ಯ ಸರ್ಕಾರ ಮನವಿ ಸಲ್ಲಿಸಿತ್ತು. ಇದೀಗ ಮತ್ತೊಮ್ಮೆ ಪತ್ರ ಬರೆಯುವ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಿದೆ.

ಪತ್ರ ಬರೆದಿರುವ ಬಗ್ಗೆ ಟಿವಿ9 ಗೆ ಸಚಿವ ಶಿವರಾಜ್ ತಂಗಡಗಿ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ತಂಗಡಗಿ ನೇತೃತ್ವದ ನಿಯೋಗ ದೆಹಲಿಗೆ ತೆರಳಲಿದ್ದು, ಕೇಂದ್ರದ ಸಂಸ್ಕೃತಿ ಸಚಿವರ ಭೇಟಿ ಮಾಡಲಿದ್ದಾರೆ. ಆ ಮೂಲಕ ಕನ್ನಡ ಬಾವುಟಕ್ಕೆ ಅಧಿಕೃತತೆ ಹಾಗೂ ಶಾಸ್ತ್ರೀಯ ಭಾಷೆ ಅನುದಾನ ಕೋರಿ ಮನವಿ ಮಾಡಲಿದ್ದಾರೆ.

ಈಗಿರುವ ಕನ್ನಡದ ಬಾವುಟ ಅಧಿಕೃತ ಅಲ್ಲ: ಸಚಿವ ಶಿವರಾಜ ತಂಗಡಗಿ
ಈ ವಿಚಾರವಾಗಿ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ ಸಚಿವ ಶಿವರಾಜ ತಂಗಡಗಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬರೀ ಹೆಸರಿಗೆ ಮಾತ್ರ ಇದೆ. ಈಗಿರುವ ಕನ್ನಡದ ಬಾವುಟ ಅಧಿಕೃತ ಅಲ್ಲ. ಅದೇ ಬಾವುಟ ಅಧಿಕೃತಗೊಳಿಸಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಕನ್ನಡ ಬಾವುಟಕ್ಕೆ ಒಪ್ಪಿಗೆ ಕೋರಿ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಶೋಭಾ ಕರಂದ್ಲಾಜೆ ಮಾತಾಡುತ್ತಾರೆ. ದಯಮಾಡಿ ಕೇಂದ್ರದಿಂದ ಕನ್ನಡ ಬಾವುಟಕ್ಕೆ ಒಪ್ಪಿಗೆ ಕೊಡಿಸಲಿ. ಶಾಸ್ತ್ರೀಯ ಸ್ಥಾನಮಾನ ವಿಚಾರದಲ್ಲಿ ಅನುದಾನ ಕೊಡಿಸಲಿ. ತಮಿಳುನಾಡಿಗೆ ಹೆಚ್ಚಿನ ಅನುದಾನ ನೀಡಲಾಗುತ್ತದೆ. ಆದರೆ ಕನ್ನಡಕ್ಕಿಲ್ಲ. ಜುಲೈ ಅಂತ್ಯ ವೇಳೆಗೆ ನಿಯೋಗದ ಜತೆ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿ ಅನುದಾನಕ್ಕೆ ಮನವಿ ಮಾಡುತ್ತೇವೆ ಎಂದಿದ್ದಾರೆ.

ಇನ್ನು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್​ ಹೇಳಿಕೆ ನೀಡಿದ್ದು, ನಾವು ಕನ್ನಡದ ವಿರೋಧಿಗಳಲ್ಲ. ಕಾಂಗ್ರೆಸ್ ಗಿಂತ ಜಾಸ್ತಿ ಹೋರಾಟ ನಾನು ಮಾಡಿದ್ದೇನೆ. ಗೋಕಾಕ್ ಚಳುವಳಿಯಲ್ಲಿ ನಾನೂ ಭಾಗಿಯಾಗಿ ಲಾಠಿ ಏಟು ತಿ‌ಂದಿದ್ದೇನೆ. ಕನ್ನಡ ನೆಲ, ಜಲ, ಭಾಷೆಯ ವಿಚಾರವಾಗಿ ನಾವು ಏನು ಮಾಡಿದ್ದೇವೆ ಎಂದು ಆತ್ಮಸಾಕ್ಷಿಯಾಗಿ ಪ್ರಶ್ನೆ ಮಾಡಿಕೊಂಡು ಆಮೇಲೆ ಮುಂದೆ ಹೋಗಲಿ. ಎಸ್​​ಎಸ್​​ಎಲ್​​​ಸಿ ಕನ್ನಡ ಭಾಷೆಯ ಅಂಕ ಕಡಿತ ಮಾಡಿ, ಅಲ್ಲಿ ಧ್ವಜ ಅಂತ ಹೋದರೆ ಹೇಗೆ? ರಾಜ್ಯದಲ್ಲಿ ಅಭಿವೃದ್ಧಿ ಆಗಿಲ್ಲ, ಗಮನ ಬೇರೆಡೆ ಸೆಳೆಯಲು ಕನ್ನಡ ಧ್ವಜದ ವಿಚಾರ ತಂದಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!