Headlines

ಜಾತಿ ಗಣತಿ ಸಮೀಕ್ಷೆ ನಿರ್ಲಕ್ಷ್ಯ ಮಾಡಿದರೆ ಕಠಿಣ ಕ್ರಮ: ಸಿಎಂ ಎಚ್ಚರಿಕೆ

ಬೆಂಗಳೂರು, ಸೆ.26: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸದೇ ಕರ್ತವ್ಯ ಲೋಪ ಎಸಗುವವರು ಹಾಗೂ ದತ್ತಾಂಶ ಸಂಗ್ರಹದಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಿಂದ ಹಿರಿಯ ಅಧಿಕಾರಿಗಳ ಜೊತೆ ವಿಡಿಯೋ ಸಂವಾದದಲ್ಲಿ ಚರ್ಚೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಕಾಂತರಾಜು ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಮೀಕ್ಷೆಯಲ್ಲಿ ಪೂರ್ಣ ಪ್ರಮಾಣದ ಮಾಹಿತಿ ಕಲೆ ಹಾಕಿರಲಿಲ್ಲ. ಆಯೋಗ ನೀಡಿದ್ದ ಸೂಚನೆಗಳನ್ನು ಸರಿಯಾಗಿ ಪಾಲಿಸಿರಲಿಲ್ಲ. ಇದರಿಂದಾಗಿ ಸಾಕಷ್ಟು ಸಮಸ್ಯೆಯಾಗಿತ್ತು. ಕೊನೆಗೆ ಆ ವರದಿ ಅಂಗೀಕರಿಸಲು ಆಗದೆ, ಬಿಡಲೂ ಆಗದೇ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಸ್ತುತ ನಡೆಯುತ್ತಿರುವ ಸಮೀಕ್ಷೆಯನ್ನು ಕರಾರುವಾಕ್ಕಾಗಿ ಹಾಗೂ ಕಾನೂನಾತ್ಮಕವಾಗಿ ನಡೆಸಬೇಕು. ಪ್ರತಿಹಂತದಲ್ಲೂ ಸಮೀಕ್ಷಾದಾರರು ಮಾಹಿತಿ ಸಂಗ್ರಹದ ದಸ್ತಾವೇಜುಗಳಿಗೆ ಸಹಿ ಹಾಕಿ, ಅಧಿಕೃತಗೊಳಿಸಬೇಕು. ಯಾವುದು ಅನಧಿಕೃತ ಹಾಗೂ ಆಧಾರರಹಿತ ಎಂಬ ಸನ್ನಿವೇಶ ಸೃಷ್ಟಿಯಾಗಬಾರದು ಎಂದು ಸಿಎಂ ಸೂಚನೆ ನೀಡಿದರು.

ಕೆಲವು ಅಧಿಕಾರಿಗಳು ಸಮೀಕ್ಷೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಮೊಬೈಲ್‌ ಬಳಕೆಗೆ ತಾಂತ್ರಿಕವಾದ ಸಾಮರ್ಥ್ಯವಿಲ್ಲವೆಂಬ ನೆಪ ಒಡ್ಡುತ್ತಿದ್ದು ಅಂಥವರ ಪಟ್ಟಿಯನ್ನು ಪಡೆದು ಸೂಕ್ತ ಪರಿಶೀಲನೆ ನಡೆಸಿ ನಂತರ ವಿನಾಯಿತಿ ನೀಡಿ ಪರ್ಯಾಯ ಸಮೀಕ್ಷಾದಾರರನ್ನು ನಿಯೋಜಿಸಬೇಕೆಂದು ಸಿಎಂ ತಾಕೀತು ಮಾಡಿದ್ದಾರೆ.

ಸಮೀಕ್ಷೆಗೆ ಆರಂಭಿಕ ಹಂತದಲ್ಲಿ ತೀವ್ರ ಹಿನ್ನಡೆಯಾಗಿದ್ದು, ಇದೇ ವೇಗದಲ್ಲಿ ಗಣತಿ ನಡೆದರೆ ಒಂದು ತಿಂಗಳಾದರೂ ಪೂರ್ಣಗೊಳ್ಳುವುದಿಲ್ಲ. ಪ್ರತಿ ದಿನ ಸರಾಸರಿ 10 ಲಕ್ಷ ಮನೆಗಳಂತೆ ಸಮೀಕ್ಷೆ ನಡೆಯಬೇಕಿತ್ತು. ಅದರ ಅಂದಾಜಿನ ಪ್ರಕಾರ ಸರಿಸುಮಾರು ಕನಿಷ್ಠ 50 ಲಕ್ಷ ಮನೆಗಳ ಸಮೀಕ್ಷೆಯಾಗಬೇಕಿತ್ತು. ಆದರೆ 5 ಲಕ್ಷ ಮನೆಗಳ ಸಮೀಕ್ಷೆಯೂ ಪೂರ್ಣವಾಗಿಲ್ಲ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಂತ್ರಿಕ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಸಮೀಕ್ಷೆ ನಡೆಯುವುದು ಎರಡು ತಿಂಗಳ ಮೊದಲೇ ನಿಗದಿಯಾಗಿತ್ತು. ಅಂದಿನಿಂದಲೂ ಪೂರ್ವ ತಯಾರಿ ಮಾಡಿಕೊಳ್ಳದೆ ಕಾಲಹರಣ ಮಾಡಿದ್ದೇಕೆ? ಎಂದು ಸಿಎಂ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಮೀಕ್ಷೆಯನ್ನು ವಿಫಲಗೊಳಿಸಬೇಕು ಎಂಬ ಕಾರಣಕ್ಕಾಗಿಯೇ ವ್ಯವಸ್ಥಿತವಾದ ಅಪಪ್ರಚಾರಗಳು ನಡೆಯುತ್ತಿವೆ. ಇದಕ್ಕೆ ಕಿವಿಗೊಡಬಾರದು, ಸಮೀಕ್ಷಾದಾರರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ತಾಂತ್ರಿಕ ತೊಂದರೆ ಸೇರಿದಂತೆ ಯಾವುದೇ ಅಡಚಣೆಗಳಿದ್ದರೂ ಅದನ್ನು ಹಿರಿಯ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಬಗೆಹರಿಸಬೇಕು. ಯಾವುದೇ ಹಂತದಲ್ಲಿ ಲೋಪಗಳಾಗಿದ್ದರೂ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರ ನೀಡಲಾಗಿದೆ. ಇದು ಐತಿಹಾಸಿಕ ಮಹತ್ವ ಪೂರ್ಣವಾದ ಸಮೀಕ್ಷೆಯೆಂಬುದನ್ನು ಅಧಿಕಾರಿಗಳು ಗಮನದಲ್ಲಿಟ್ಟುಕೊಳ್ಳಬೇಕು. ಪ್ರತಿ ಸಂದರ್ಭದಲ್ಲೂ ತಮ್ಮ ಮನೆಯ ಕೆಲಸ ಮಾಡುತ್ತಿದ್ದೇವೆ ಎಂಬ ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ತೊಡಗಿಸಿಕೊಳ್ಳಬೇಕು ಎಂದು ಸಿಎಂ ಸಲಹೆ ನೀಡಿದ್ದಾರೆ.

ಕಂದಾಯ, ಹಿಂದುಳಿದ ವರ್ಗಗಳ ಕಲ್ಯಾಣ, ಶಾಲಾ ಶಿಕ್ಷಣ ಸಾಕ್ಷರತೆ, ಪೌರಾಡಳಿತ, ನಗರಾಭಿವೃದ್ಧಿ, ಜಿಬಿಎಗೆ ಸೇರಿದಂತೆ ಹಲವು ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ವಿಡಿಯೋ ಸಂವಾದದಲ್ಲಿದ್ದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಎಚ್‌.ಕೆ.ಪಾಟೀಲ್‌, ಶಿವರಾಜ ತಂಗಡಗಿ, ಕೃಷ್ಣ ಭೈರೇಗೌಡ, ರಹೀಂ ಖಾನ್‌, ಭೈರತಿ ಬಸವರಾಜ್‌, ಮಧು ಬಂಗಾರಪ್ಪ, ಬೋಸರಾಜು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ ನಾಯ್‌್ಕ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌, ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!