Headlines

ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

ನವದೆಹಲಿ, ಜುಲೈ 24: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಟ ದರ್ಶನ್ ತೂಗುದೀಪ್ ಹಾಗೂ ಇತರೆ ಎಲ್ಲಾ 17 ಆರೋಪಿಗಳು ಈಗಾಗಲೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಪೈಕಿ ದರ್ಶನ್ ಹಾಗೂ 7 ಆರೋಪಿಗಳ ಜಾಮೀನು ರದ್ದು ಮಾಡುವಂತೆ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಗೆ ಮನವಿ ಮಾಡಿತ್ತು. ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆಯಲ್ಲಿ ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. 10 ದಿನಗಳ ಬಳಿಕವಷ್ಟೇ ನಟ ದರ್ಶನ್ ಜಾಮೀನು ಅರ್ಜಿ ಬಗ್ಗೆ ತೀರ್ಪು ನೀಡುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧಿತರಾದ ದರ್ಶನ್ ಅವರು ಜೈಲಿನಲ್ಲಿ ಮಾಡಿಕೊಂಡ ಅವಾಂತರಗಳು ಒಂದೆರಡಲ್ಲ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಅವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಸಾಬೀತುಪಡಿಸುವ ಫೋಟೋಗಳು ಹೊರಬಂದವು. ಈ ಬೆನ್ನಲ್ಲೇ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಆ ಬಳಿಕ ದರ್ಶನ್ ಅವರಿಗೆ ಬೆನ್ನುನೋವು ಕಾಣಿಸಿಕೊಂಡಿತು.

ಬೆನ್ನುನೋವಿನ ಕಾರಣ ನೀಡಿ ದರ್ಶನ್ ಅವರು ಮಧ್ಯಂತರ ಜಾಮೀನು ಪಡೆದರು. ಆ ಬಳಿಕ ಅವರಿಗೆ ಕರ್ನಾಟಕ ಹೈಕೋರ್ಟ್​ನಿಂದ ಸಂಪೂರ್ಣ ಜಾಮೀನು ದೊರೆತಿತ್ತು. ಇದನ್ನು ರಾಜ್ಯಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನೆ ಮಾಡಿತ್ತು. ಈಗ ಈ ಬಗ್ಗೆ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.

ಕೋರ್ಟ್​​ನಲ್ಲಿ ಏನೆಲ್ಲ ಆಯ್ತು?
ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ದರ್ಶನ್​ಗೆ ಜಾಮೀನು ನೀಡಿ ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ಆದೇಶ ನೀಡಿತ್ತು. ಈ ಆದೇಶವನ್ನು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿತ್ತು. ಈ ಅರ್ಜಿಯನ್ನು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ, ನ್ಯಾಯಮೂರ್ತಿ ಆರ್. ಮಹದೇವನ್ ಅವರಿದ್ದ ಪೀಠ ವಿಚಾರಣೆ ನಡೆಸಿತು.

ರಾಜ್ಯಸರ್ಕಾರದ ಪರ ವಕೀಲ ಸಿದ್ಧಾರ್ಥ್ ಲೂಥ್ರಾ ಮೊದಲು ವಾದ ಮಂಡಿಸಿದರು. ‘ಇದು ಭೀಕರ ಕೊಲೆ ಕೇಸ್. ಇಷ್ಟಾದರೂ 7 ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಕೊಲೆ ಆರೋಪಿಗಳ ಜಾಮೀನು ರದ್ದಾಗಬೇಕು ಎನ್ನುವುದು ನಮ್ಮ ವಾದ. ಏಕೆಂದರೆ ದರ್ಶನ್ ತಂಗಿದ್ದ ಅಪಾರ್ಟ್ ಮೆಂಟ್ ಬಳಿ ರೇಣುಕಾಸ್ವಾಮಿ ಡೆಡ್ ಬಾಡಿ ಸಿಕ್ಕಿದೆ’ ಎಂದು ಅವರು ವಾದಿಸಿದರು. ಸದ್ಯ 7 ಆರೋಪಿಗಳ ಜಾಮೀನನ್ನು ಮಾತ್ರ ರದ್ದು ಮಾಡಬೇಕು ಎಂದು ಕೋರಿದರು.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೆ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಲಿಲ್ಲ. ಹೀಗಾಗಿ, ಅವರು ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನೀಡಿ ಎಂದು ಸರ್ಕಾರಿ ಪರ ವಕೀಲರಿಗೆ ನ್ಯಾಯಮೂರ್ತಿಗಳು ಸೂಚಿಸಿದರು. ಆಗ ಸಿದ್ದಾರ್ಥ್ ಲೂತ್ರಾ ಅವರು ಎಲ್ಲವನ್ನೂ ವಿವರವಾಗಿ ಹೇಳಿದರು.

ಜಾಮೀನು ಸಿಕ್ಕ ಬಳಿಕ ಸಾಕ್ಷಿಗಳ ಜೊತೆ ದರ್ಶನ್ ಕಾಣಿಸಿಕೊಂಡಿದ್ದು ಸೇರಿದಂತೆ ಎಲ್ಲವನ್ನೂ ವಿವರಿಸಿದರು.

ಜೊತೆಗೆ ದರ್ಶನ್ ಅವರು ಕಳೆದ ಜುಲೈ 15ರಂದು ಥೈಲ್ಯಾಂಡ್​ಗೆ ಪ್ರವಾಸ ಬೆಳೆಸಿದ್ದಾರೆ. ‘ಡೆವಿಲ್’ ಸಿನಿಮಾ ಶೂಟಿಂಗ್​ಗೆ ಅವರು ಅಲ್ಲಿಗೆ ಹೋಗಿದ್ದಾರೆ. ‘ಡೆವಿಲ್’ ಸಿನಿಮಾದ ಹಾಡಿನ ಚಿತ್ರೀಕರಣ ಹಾಗೂ ಒಂದು ಫೈಟ್ ದೃಶ್ಯದ ಶೂಟ್ ಬಾಕಿ ಇದೆ. ಬಳಿಕ ನಾಳೆ ಜುಲೈ 25ರಂದು ಅವರು ಬೆಂಗಳೂರಿಗೆ ಮರಳಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!