ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ: ತೆರಕಣಾಂಬಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡಗೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದಿದ್ದ ಬೃಹತ್ ಕಳವು ಪ್ರಕರಣವನ್ನು ಪೊಲೀಸರು ಕೇವಲ ಕೆಲವೇ ದಿನಗಳಲ್ಲಿ ಭೇದಿಸಿದ್ದಾರೆ. ವಿಶೇಷವೆಂದರೆ, ಪ್ರಕರಣದ ದೂರುದಾರನೇ ಅಸಲಿ ಕಳ್ಳ ಎಂಬ ಬೆಚ್ಚಿಬೀಳಿಸುವ ಸತ್ಯ ತನಿಖೆಯಿಂದ ಬಯಲಾಗಿದೆ.
ಘಟನೆಯ ಹಿನ್ನೆಲೆ
ದಿನಾಂಕ 16/12/2025 ರಂದು ರಾತ್ರಿ ವೇಳೆ ಮೂಡಗೂರು ಸಹಕಾರ ಸಂಘದ ಕಚೇರಿಯ ಬೀಗ ಮುರಿದು ಸುಮಾರು ರೂ. 14,12,000/- ನಗದು ಹಣವನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಸಂಘದ ಸಿ.ಇ.ಒ. ಆಗಿರುವ ಚಂದ್ರಶೇಖರಮೂರ್ತಿ ಅವರೇ ತರಕಣಾಂಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗಾಗಿ ಚಾಮರಾಜನಗರ ಉಪ ವಿಭಾಗದ ಡಿವೈಎಸ್ಪಿ ಮತ್ತು ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು.
ತನಿಖೆಯಲ್ಲಿ ಸಿಕ್ಕ ಸುಳಿವು
ದೂರುದಾರ ಚಂದ್ರಶೇಖರಮೂರ್ತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ, ಆತನೇ ಹಣವನ್ನು ಲಪಟಾಯಿಸಿ ಕಳವು ನಾಟಕವಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಶೇರುದಾರರಿಂದ ಸಂಗ್ರಹವಾಗಿದ್ದ ಒಟ್ಟು ಹಣದಲ್ಲಿ ರೂ. 8,92,000/- ನಗದು ಹಣವನ್ನು ಆತ ಕಳವು ಮಾಡಿದ್ದಾಗಿ ತನಿಖೆಯಿಂದ ದೃಢಪಟ್ಟಿದೆ.
ಕಾರ್ಯಾಚರಣೆ ಮತ್ತು ವಶ
ಪೊಲೀಸರು ಆರೋಪಿಯಿಂದ ಕಳವು ಮಾಡಿದ್ದ ಪೂರ್ಣ ಹಣವಾದ ರೂ. 8,92,000/- ಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಕವಿತಾ ಬಿ.ಟಿ, ಐಪಿಎಸ್ ಅವರು ಪ್ರಕರಣವನ್ನು ಶೀಘ್ರವಾಗಿ ಪತ್ತೆಹಚ್ಚಿದ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರ :ಡಾ.ಕವಿತಾ ಬಿ.ಟಿ ಪೊಲೀಸ್ ಅಧೀಕ್ಷಕರು

