ಬೆಂಗಳೂರು, ಡಿ.29 : ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ನಗರದ ಮೂರು ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕೊತ್ತನೂರು ಠಾಣೆಯ ಚೇತನ್ ಕುಮಾರ್, ಅವಲಹಳ್ಳಿ ಠಾಣೆಯ ರಾಮಕೃಷ್ಣಾರೆಡ್ಡಿ ಮತ್ತು ಬಾಗಲೂರು ಠಾಣೆಯ ಶಬರೀಶ್ ಅಮಾನತುಗೊಂಡ ಅಧಿಕಾರಿಗಳಾಗಿದ್ದಾರೆ. ಈ ಅಧಿಕಾರಿಗಳ ವ್ಯಾಪ್ತಿಯಲ್ಲಿ ಬೃಹತ್ ಡ್ರಗ್ಸ್ ತಯಾರಿಕಾ ಘಟಕಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು ಉತ್ತರ ಜಿಲ್ಲೆಯ ಬಾಗಲೂರಿನ ಸ್ಪಂದನಾ ಲೇಔಟ್, ಕೊತ್ತನೂರಿನ ಎನ್.ಜಿ. ಗೊಲ್ಲಹಳ್ಳಿ ಮತ್ತು ಆವಲಹಳ್ಳಿ ಠಾಣಾ ವ್ಯಾಪ್ತಿಯ ಯಾರಪ್ಪನ ಹಳ್ಳಿಯಲ್ಲಿ ಮಹಾರಾಷ್ಟ್ರ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದರು. ಈ ಕಾರ್ಯಾಚರಣೆಯ ವೇಳೆ ಸುಮಾರು 55.88 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ತಯಾರಿಸುವ ಫ್ಯಾಕ್ಟರಿಗಳು ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಜನವಸತಿ ಪ್ರದೇಶಗಳಲ್ಲೇ ಅನೇಕ ತಿಂಗಳಿನಿಂದ ಈ ಡ್ರಗ್ಸ್ ಫ್ಯಾಕ್ಟರಿಗಳು ಕಾರ್ಯನಿರ್ವಹಿಸುತ್ತಿದ್ದರೂ, ಸ್ಥಳೀಯ ಪೊಲೀಸರಿಗೆ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದು ಮತ್ತು ದಂಧೆಯನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ನೆರೆ ರಾಜ್ಯದ ಪೊಲೀಸರು ಬಂದು ಬೆಂಗಳೂರಿನಲ್ಲಿ ಇಷ್ಟು ದೊಡ್ಡ ಮಟ್ಟದ ದಂಧೆಯನ್ನು ಬಯಲಿಗೆಳೆದದ್ದು ಸ್ಥಳೀಯ ಪೊಲೀಸ್ ಇಲಾಖೆಗೆ ಮುಜುಗರ ತಂದಿದ್ದರಿಂದ, ಕಮಿಷನರ್ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದ ಇನ್ಸ್‌ಪೆಕ್ಟರ್‌ಗಳ ವಿರುದ್ಧ ಕ್ರಮ ಜರುಗಿಸಿದ್ದಾರೆ.

