ಬೆಂಗಳೂರು, ಆಗಸ್ಟ್ 4: ಸಾರಿಗೆ ನೌಕರರ ಮುಷ್ಕರವನ್ನು ನಾಳೆವರೆಗೂ (ಆಗಸ್ಟ್ 5) ತಡೆಹಿಡಿಯುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ನಾಳಿನ ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ಮಹತ್ವದ ಆದೇಶ ನೀಡಿತ್ತು. ಆದರೆ ಹೈಕೋರ್ಟ್ ಆದೇಶದ ನಡುವೆಯೂ ನಾಳೆಯಿಂದ ಅನಿರ್ದಿಷ್ಟಾವದಿ ಮುಷ್ಕರ ಆರಂಭಿಸುವುದಾಗಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಖಚಿತಪಡಿಸಿದ್ದಾರೆ.
ಹೀಗಾಗಿ ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ ಸಾರಿಗೆ ಬಸ್ ರಸ್ತೆಗಳಿಯುವುದಿಲ್ಲ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಾರಿಗೆ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್, ಕೋರ್ಟ್ ಆದೇಶ ನಮಗೆ ತಲುಪಿದ್ದು, ಆದೇಶ ಏನಿದೆ ಅನ್ನೋದು ಗೊತ್ತಿಲ್ಲ. ನಾಳೆ ಎಂದಿನಂತೆ ನಮ್ಮ ಮುಷ್ಕರ ನಡೆಯುತ್ತೆ. ಬೆಳಿಗ್ಗೆ 6 ಗಂಟೆಯಿಂದ ಮುಷ್ಕರ ನಡೆಯುತ್ತೆ. ಲಾಯರ್ ಅಭಿಪ್ರಾಯ ಪಡೆದು ನಾಳೆ ನಮ್ಮ ಜಂಟಿಕ್ರಿಯಾ ಸಮಿತಿ ಮುಂದಿಟ್ಟು ತೀರ್ಮಾನ ಮಾಡುತ್ತೇವೆ. ಇವತ್ತು ಮುಷ್ಕರ ವಾಪಸ್ಸು ಪಡೆಯುವ ಮಾತಿಲ್ಲ. ನಾಳೆ ಬೆಳಿಗ್ಗೆ 6 ಗಂಟೆಯಿಂದ ಎಂದಿನಂತೆ ಮುಷ್ಕರ ನಡೆಯುತ್ತೆ ಎಂದು ಸ್ಪಷ್ಟಪಡಿಸಿದರು.
ನಾಳೆ (ಆಗಸ್ಟ್ 5) ಮಂಗಳವಾರ ಬೆಳಗ್ಗೆ 6 ಗಂಟೆಯಿಂದಲೇ ಎಲ್ಲಾ ಬಸ್‌ಗಳನ್ನು ಡಿಪೋಗಳಲ್ಲಿ ನಿಲ್ಲಿಸುತ್ತೇವೆ. ಯಾವುದೇ ನೌಕರರು ನಾಳೆ ಬಸ್‌ಗಳನ್ನು ಓಡಿಸಲ್ಲ. ಸರ್ಕಾರದ ಬೆದರಿಕೆಗೆ ಹೆದರಬೇಡಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಎಂದು ನೌಕರರಿಗೆ ಕಿವಿಮಾತು ಹೇಳಿದ್ದಾರೆ.
ಮುಷ್ಕರದ ಬಗ್ಗೆ 22 ದಿನಗಳ ಹಿಂದೆಯೇ ನೋಟಿಸ್ ಕೊಟ್ಟಿದ್ದೆವು. ಆದರೆ ಸಿಎಂ ಸಿದ್ದರಾಮಯ್ಯ ಇಂದು ಸಭೆ ಕರೆದಿದ್ದರು. 38 ತಿಂಗಳ ಬಾಕಿ ಹಣ ಕೊಡಬೇಕು, ಶೇ.15ರಷ್ಟು ವೇತನ ಹೆಚ್ಚಿಸಬೇಕು. ಬೇಕಿದ್ದರೆ ಕಂತಿನ ರೂಪದಲ್ಲಿ ಬಾಕಿ ಹಣ ಕೊಡಿ ಎಂದು ಮನವಿ ಮಾಡಿದ್ದೇವೆ. 12 ಬೇಡಿಕೆಗಳ ಪೈಕಿ 2 ಪ್ರಮುಖ ಬೇಡಿಕೆಗಳನ್ನಾದರೂ ಈಡೇರಿಸಬೇಕಿತ್ತು. ಅಧಿವೇಶನದವರೆಗೆ ಮುಷ್ಕರ ಮುಂದೂಡಿ ಎಂದು ಹೇಳಿದ್ದಾರೆ. ಆದ್ರೆ, ನಾವು ಒಪ್ಪಿಲ್ಲ. ಹೀಗಾಗಿ ನಾಳೆ ಬೆಳಗ್ಗೆ 6 ಗಂಟೆಯಿಂದ ಸಾರಿಗೆ ಮುಷ್ಕರ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಪ್ರಯಾಣ ದರ ಜಾಸ್ತಿ ಮಾಡಿದರೆ, ನಿಮ್ಮ ಬೇಡಿಕೆ ಈಡೇರಿಕೆ ಮಾಡುತ್ತೇವೆ ಎಂದು ಹಿಂದಿನ ಮುಷ್ಕರ ವೇಳೆ ಭರವಸೆ ನೀಡಿದ್ದರು. ಇದೀಗ 2027 ರವರೆಗೆ ಹೊಸ ವೇತನ ಪರಿಷ್ಕರಣೆ ಆಗಲ್ಲ ಎಂದಿದ್ದಾರೆ. ಅಂತಿಮವಾಗಿ ಸಿಎಂ ಇವತ್ತು 14 ತಿಂಗಳ ಹಿಂಬಾಕಿ ಕೊಡುತ್ತೇವೆ ಎಂದು ಹೇಳಿದ್ದಾರೆ. 2024 ರ ಹೊಸ ವೇತನ ಪರಿಷ್ಕರಣೆಯನ್ನು ಅಧಿವೇಶನದ ಬಳಿಕ ಮಾತನಾಡೋಣ ಎಂದಿದ್ದಾರೆ. ಇದು ನಮಗೆ ಒಪ್ಪಿಗೆ ಇಲ್ಲ ಎಂದು ಅನಂತ ಸುಬ್ಬರಾವ್ ಹೇಳಿದ್ದಾರೆ.
ಸಾರಿಗೆ ನೌಕರರ ಜೊತೆಗೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ವಿಫಲಗೊಂಡಿತ್ತು. ಹೀಗಾಗಿ ಮುಷ್ಕರಕ್ಕೆ ತೀರ್ಮಾನಿಸಲಾಗಿತ್ತು. ಆದ್ರೆ ಅಷ್ಟರೊಳಗೆ ಮುಷ್ಕರ ಮುಂದೂಡಿಕೆ ಮಾಡುವಂತೆ ಹೈಕೋರ್ಟ್ ಆದೇಶ ಬಂದಿತ್ತು. ಹೀಗಾಗಿ ಮುಷ್ಕರ ಇದೆಯಾ? ಇಲ್ವಾ? ಎನ್ನುವ ಬಗ್ಗೆ ಗೊಂದಲಗಳು ಇದ್ದವು. ಆದ್ರೆ, ಇದೀಗ ಅನಂತ ಸುಬ್ಬರಾವ್, ಹೈಕೋರ್ಟ್ ಆದೇಶದ ನಡುವೆಯೂ ಮುಷ್ಕರ ನಡೆಸುವುದಾಗಿ ತಿಳಿಸಿದ್ದಾರೆ.
ನಾಳೆ ಸಾರಿಗೆ ಮುಷ್ಕರ ಮುಂದೂಡಿಕೆ ಮಾಡುವಂತೆ ಹೈಕೋರ್ಟ್ ಸೂಚನೆ ನೀಡಿದೆ. ನಾಳಿನ ಸಾರಿಗೆ ನೌಕರರ ಪ್ರತಿಭಟನೆ ಪ್ರಶ್ನಿಸಿ ವಕೀಲ ಎನ್.ಪಿ ಅಮೃತೇಶ್ ಮತ್ತಿತರರಿಂದ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಒಂದು ದಿನದ ಮಟ್ಟಿಗೆ ಮುಷ್ಕರವನ್ನ ಮುಂದೂಡುವಂತೆ ಸೂಚನೆ ನೀಡಿದೆ. ಹೀಗಾಗಿ ನಾಳೆ ಬಹುತೇಕ ಸರ್ಕಾರಿ ಬಸ್ಗಳು ಎಂದಿನಂತೆ ಓಡಾಟ ನಡೆಸಲಿವೆ ಎನ್ನಲಾಗಿತ್ತು.

