Headlines

ಎ ಖಾತೆ ನೆಪದಲ್ಲಿ 15 ಸಾವಿರ ಕೋಟಿ ಸುಲಿಗೆ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ

ಮಂಡ್ಯ, ಅಕ್ಟೋಬರ್ 16: ದೀಪಾವಳಿ ಕೊಡುಗೆ ನೆಪದಲ್ಲಿ ಕೊಡುಗೆ ಕೊಡುತ್ತಿದ್ದೇವೆ ಎಂದು ಹೇಳಿ ರಾಜ್ಯಸರ್ಕಾರ ಬೆಂಗಳೂರು ಜನರ ಕಿಸೆಗೆ ಕೈ ಹಾಕಿದೆ. ಕೈ ಸರ್ಕಾರ ಎ ಖಾತಾ ಸೋಗಿನಲ್ಲಿ 15,000 ಕೋಟಿ ರೂ. ಸುಲಿಗೆ ಮಾಡುತ್ತಿದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕಾ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ನಗರದ ಸಂಜಯ್‌ ವೃತ್ತದಲ್ಲಿ ಹೊಸದಾಗಿ ನಿರ್ಮಿಸಿರುವ ಸುಸಜ್ಜಿತ ಆಟೋ ನಿಲ್ದಾಣವನ್ನು ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೀಪಾವಳಿ ಕೊಡುಗೆ ಎಂದರೆ ಏನೋ ನಮಗೆ ದೊಡ್ಡ ಕೊಡುಗೆಯನ್ನು ಕೊಡುತ್ತದೆ ಎಂದು ಜನರು ಭಾವಿಸಿದ್ದರು. ದೊಡ್ಡ ದೊಡ್ಡ ಜಾಹೀರಾತುಗಳನ್ನು ನೋಡಿ ನಾನು ಕೂಡ ಹಾಗೆಯೇ ಅಂದುಕೊಂಡಿದ್ದೆ. ಆದರೆ, ಅದು ದೀಪಾವಳಿ ಹೆಸರಿನಲ್ಲಿ ಜನರಿಗೆ ಮಾಡುತ್ತಿರುವ ಮಹಾನ್‌ ದೋಖಾ ಇದಾಗಿದೆ ಎಂದು ಕಿಡಿಕಾರಿದರು.

ಬೆಂಗಳೂರು ನಗರದ ಜನರಿಗೆ ದೀಪಾವಳಿ ಶಾಕ್‌ ಕೊಡುತ್ತಿದ್ದಾರೆ. ಅದು ಹೇಗಿದೆ ಎಂದರೆ, ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡುವ ಅರ್ಜಿಗೆ 500 ರೂಪಾಯಿ ಶುಲ್ಕ ತುಂಬಬೇಕು. ಆ ಶುಲ್ಕದ ಹೆಸರಿನಲ್ಲಿಯೇ ನೂರಾರು ಕೋಟಿ ರೂಪಾಯಿ ಸುಲಿಗೆ ಮಾಡುತ್ತಿದೆ ಈ ಸರ್ಕಾರ. 30×40 ನಿವೇಶನಕ್ಕೆ 4ರಿಂದ 8 ಲಕ್ಷ ರೂಪಾಯಿವರೆಗೂ ಕಿತ್ತುಕೊಳ್ಳುತ್ತಿದ್ದಾರೆ.

ಮೊದಲು 10ರಿಂದ 13 ಸಾವಿರ ರೂಪಾಯಿ ಅಷ್ಟನ್ನೇ ಕಟ್ಟಬೇಕಿದ್ದ ಬೆಂಗಳೂರು ಜನರು ಇನ್ನು ಮುಂದೆ ಲಕ್ಷಗಳಲ್ಲಿ ಹಣ ನೀಡಬೇಕಿದೆ. ಎ ಖಾತಾ ದಂಧೆಯ ಮೂಲಕ ರಾಜ್ಯ ಸರ್ಕಾರ 15,000 ಕೋಟಿ ರೂಪಾಯಿ ವಸೂಲಿ ಮಾಡುತ್ತಿದೆ ಎಂದು ಎಚ್.ಡಿ.ಕೆ ಆರೋಪಿಸಿದರು.

ಗ್ಯಾರಂಟಿ ಕೊಟ್ಟು ಜನರ ಬದುಕು ಹಸನು ಮಾಡೋದು ಎಂದರೆ ಹೀಗೇನಾ? ಜನರ ಮೇಲೆ ತೆರಿಗೆ ವಿಧಿಸಿ 6ನೇ ಗ್ಯಾರಂಟಿ ಕೊಡಲು ಹೊರಟಿದ್ದಾರೆ. ಈ ಸರ್ಕಾರ ಬಂದ ಮೇಲೆ ನಿರಂತರವಾಗಿ ಸುಲಿಗೆ ಮಾಡುತ್ತಿದೆ. ಕೇವಲ ಹಣ ಮಾಡುವುದಕ್ಕೆ ಸರ್ಕಾರ ಹೊರಟಿದೆ. ಪ್ರತಿಯೊಂದರಲ್ಲಿ ದುಡ್ಡು ಮಾಡುವ ಬಗ್ಗೆಯಷ್ಟೇ ಆಲೋಚನೆ ಮಾಡುತ್ತಿದೆ ಎಂದು ಅವರು ಕಟುವಾಗಿ ಟೀಕಿಸಿದರು.

ಈ ಸರ್ಕಾರದಲ್ಲಿ ಹಣವಿಲ್ಲದೆ, ಕಂಡ ಕಂಡ ಕಡೆ ಹಣಕ್ಕೆ ಕೈ ಹಾಕುತ್ತಿದೆ. ಬೆಂಗಳೂರಿನ ಗುಂಡಿ ಮುಚ್ಚೋದು ಇರಲಿ. ರಾಜ್ಯದಲ್ಲಿರುವ ಗುಂಡಿಗಳನ್ನೂ ಮುಚ್ಚೋಕೆ ಇವರಿಂದ ಆಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಜೆಡಿಎಸ್‌‍ ಕೊಡುಗೆ ಏನು? ಎಂದು ಹಾಸನದಲ್ಲಿ ಸಿಎಂ ಪ್ರಶ್ನೆ ಮಾಡಿದ್ದಾರೆ. ನನ್ನ ಆರೋಗ್ಯ ವಿಚಾರಿಸಲು ಕಾಂಗ್ರೆಸ್‌‍ ಪಕ್ಷದ ಹಿರಿಯ ನಾಯಕರೊಬ್ಬರು ದೆಹಲಿಗೆ ಬಂದಿದ್ದರು.

2018ರಲ್ಲಿ ನೀವು ಕೊಟ್ಟ 500 ಕೋಟಿ ರೂಪಾಯಿ ಅನುದಾನದಲ್ಲಿಯೇ ಇನ್ನೂ ಕೆಲಸ ನಡೆಯುತ್ತಿದೆ ಎಂದು ಅವರೇ ಹೇಳುತ್ತಾರೆ. ಅನುದಾನದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು, ನಾನು ಅಧಿಕಾರದಲ್ಲಿದ್ದಾಗ ಎಷ್ಟು ಕೊಟ್ಟಿದ್ದೇನೆ? ಇವರು ಎಷ್ಟು ಕೊಟ್ಟಿದ್ದಾರೆ? ಎಂಬ ಬಗ್ಗೆ ಜನರ ಮುಂದೆ ದಾಖಲೆ ಇಡಲಿ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.

ಸುಸಜ್ಜಿತ ಆಟೋ ನಿಲ್ದಾಣ ಲೋಕಾರ್ಪಣೆ
ಸಂಜಯ ನಗರ ವೃತ್ತದಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಆಗಿರುವ ಸುಸಜ್ಜಿತ ಆಟೋ ನಿಲ್ದಾಣವನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಉದ್ಘಾಟನೆ ಮಾಡಿದರು.

ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವರ ಸಂಸತ್‌ ಪ್ರದೇಶಾಭಿವೃದ್ಧಿ ನಿಧಿಯಿಂದ ಈ ಆಟೋ ನಿಲ್ದಾಣ ನಿರ್ಮಾಣ ಮಾಡಿದ್ದೇವೆ. ಇದು ಸುಸಜ್ಜಿತ, ವಿಶಾಲ ಆಟೋ ನಿಲ್ದಾಣ ಆಗಿದ್ದು, ಆಟೋ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಎಸ್‌‍. ಪುಟ್ಟರಾಜು, ಮಂಡ್ಯ ಜೆಡಿಎಸ್‌‍ ಜಿಲ್ಲಾಧ್ಯಕ್ಷ ರಮೇಶ್‌‍, ವಿಧಾನಪರಿಷತ್‌ ಸದಸ್ಯ ವಿವೇಕಾನಂದ, ಮುಖಂಡರಾದ ರಾಮಚಂದ್ರ, ಮಂಡ್ಯ ನಗರಸಭೆ ಅಧ್ಯಕ್ಷ ಪ್ರಕಾಶ್‌ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!