ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ, ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ವೈರಲ್ ವಿಡಿಯೋ ಪ್ರಕರಣವೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ದೃಶ್ಯಗಳು ಎಡಿಟ್ ಮಾಡಿದ್ದಲ್ಲ, ಬದಲಾಗಿ ನೂರಕ್ಕೆ ನೂರರಷ್ಟು ಅಸಲಿ ಎಂಬುದು ಎಸ್ಐಟಿ (SIT) ತನಿಖೆಯಲ್ಲಿ ಬಯಲಾಗಿದೆ!
ಎಡಿಟಿಂಗ್ ಅಲ್ಲ, ಇದು ಎಐ ಕಾಲದ ಡೀಪ್ಫೇಕ್ ಕೂಡ ಅಲ್ಲ!
ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದು ತನ್ನ ಚಾರಿತ್ರ್ಯ ಹರಣಕ್ಕೆ ಮಾಡಿರುವ ಪಿತೂರಿ, ದೃಶ್ಯಗಳನ್ನು ಎಡಿಟ್ ಮಾಡಲಾಗಿದೆ ಎಂದು ನಂಬಿಸಲಾಗಿತ್ತು. ಆದರೆ ಎಡಿಜಿಪಿ ಆರ್. ಹಿತೇಂದ್ರ ನೇತೃತ್ವದ ವಿಶೇಷ ತನಿಖಾ ತಂಡ ಸರ್ಕಾರಕ್ಕೆ ಸಲ್ಲಿಸಿರುವ 100 ಪುಟಗಳ ಸುದೀರ್ಘ ವರದಿ ಅಧಿಕಾರಿ ಪಾಲಿಗೆ ಮರಣಶಾಸನವಾಗಿ ಪರಿಣಮಿಸಿದೆ. ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ವಿಡಿಯೋವನ್ನು ಕೂಲಂಕಷವಾಗಿ ಪರೀಕ್ಷಿಸಿದ್ದು, ಇದರಲ್ಲಿ ಯಾವುದೇ ತಾಂತ್ರಿಕ ಮಾರ್ಪಾಡು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಐಜಿಪಿ ಕಚೇರಿಯಲ್ಲೇ ನಡೆದಿತ್ತು ‘ಅದೂ-ಇದೂ’!
ಈ ವಿಡಿಯೋ ಇತ್ತೀಚಿನದ್ದಲ್ಲ, ಬದಲಾಗಿ 2016-17ರಲ್ಲಿ ಕೆ. ರಾಮಚಂದ್ರ ರಾವ್ ಅವರು ಬೆಳಗಾವಿ ವಲಯದ ಐಜಿಪಿ ಆಗಿದ್ದ ಅವಧಿಯದ್ದು. ಅಚ್ಚರಿಯ ವಿಷಯವೆಂದರೆ, ಈ ಕಾಮದಾಟ ನಡೆದಿದ್ದು ಬೇರೆಲ್ಲೂ ಅಲ್ಲ, ಸಾಕ್ಷಾತ್ ಸರ್ಕಾರಿ ಕಚೇರಿಯಲ್ಲೇ! ಅಂದು ಅಲ್ಲಿ ಕೆಲಸ ಮಾಡುತ್ತಿದ್ದ ಚಾಲಕರು ಮತ್ತು ಸಿಬ್ಬಂದಿಗಳು ವಿಡಿಯೋದಲ್ಲಿರುವ ಸ್ಥಳ ಮತ್ತು ಮಹಿಳೆಯರನ್ನು ಗುರುತಿಸಿದ್ದು, ತನಿಖಾ ತಂಡದ ಮುಂದೆ ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ.
”ಆ ಇಬ್ಬರು ಮಹಿಳೆಯರು ಆಗಾಗ್ಗೆ ಸಾಹೇಬರ ಖಾಸಗಿ ಕಚೇರಿಗೆ ಬರುತ್ತಿದ್ದರು” ಎಂದು ಸಿಬ್ಬಂದಿಗಳು ಬಾಯಿಬಿಟ್ಟಿದ್ದಾರೆ.
ವಿಡಿಯೋ ಮಾಡಿದ ಸುಂದರಿಯರು ಈಗ ನಾಪತ್ತೆ!
ಮೂಲಗಳ ಪ್ರಕಾರ, ಕಚೇರಿಗೆ ಬರುತ್ತಿದ್ದ ಇಬ್ಬರು ಮಹಿಳೆಯರ ಪೈಕಿ ಒಬ್ಬರು ಉದ್ದೇಶಪೂರ್ವಕವಾಗಿ ತಮ್ಮ ಮೊಬೈಲ್ನಲ್ಲಿ ಈ ದೃಶ್ಯಗಳನ್ನು ಸೆರೆಹಿಡಿದಿದ್ದರು. ಆದರೆ ಪ್ರಕರಣ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದ್ದಂತೆ ಈ ಇಬ್ಬರೂ ‘ಮಾಯಾಂಗಿಯರು’ ದಿಢೀರ್ ನಾಪತ್ತೆಯಾಗಿದ್ದಾರೆ. ಇವರ ಹೇಳಿಕೆ ಈ ಪ್ರಕರಣದ ಅಂತಿಮ ತೀರ್ಮಾನಕ್ಕೆ ಅತಿ ಮುಖ್ಯವಾಗಿದ್ದು, ಪೊಲೀಸರು ಈಗ ಅವರ ಪತ್ತೆಗಾಗಿ ಬಲೆ ಬೀಸಿದ್ದಾರೆ.
ನಿವೃತ್ತಿಯ ಅಂಚಿನಲ್ಲಿರುವ ಅಧಿಕಾರಿಗೆ ಈಗ ಈ ‘ಅಸಲಿ’ ವರದಿ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಸರ್ಕಾರ ಮುಂದಿನ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

