ನವದೆಹಲಿ, ಆಗಸ್ಟ್11: ಮತಕಳುವಿನ ಆರೋಪ ಮಾಡಿರುವ ಪ್ರತಿಪಕ್ಷಗಳ ಒಕ್ಕೂಟದ ಸಂಸದರು ಲೋಕಸಭೆಯ ವಿ.ಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಸತ್ ಭವನದಿಂದ ಚುನಾವಣಾ ಆಯೋಗದ ಮುಖ್ಯ ಕಚೇರಿವರೆಗೆ ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆಯನ್ನು ದೆಹಲಿ ಪೊಲೀಸರು ತಡೆದಿದ್ದಾರೆ.
ಬಿಹಾರದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಹಾಗೂ ಮತ ಕಳುವಿನ ಆರೋಪದ ಹಿನ್ನೆಲೆ ಈ ಪ್ರತಿಭಟನೆ ನಡೆದಿದೆ.
ಸಂಸತ್ ಭವನದಿಂದ ಇಂದು ಸೋಮವಾರ ಬೆಳಗ್ಗೆ 11.30ಕ್ಕೆ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಇಲ್ಲಿಂದ ಒಂದು ಕಿ.ಮೀ ದೂರದ ಚುನಾವಣಾ ಆಯೋಗದ ಮುಖ್ಯ ಕಚೇರಿವರೆಗೆ ಸಾಗುತ್ತಿತ್ತು. ಈ ನಡುವೆ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಸಂಸದರ ಈ ಪ್ರತಿಭಟನೆಯನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ತಮ್ಮ ಪ್ರತಿಭಟನಾ ಮೆರವಣಿಗೆಯನ್ನು ತಡೆದ ಹಿನ್ನೆಲೆ ಲೋಕಸಭಾ ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್, ರಸ್ತೆಗೆ ಅಡ್ಡಲಾಗಿ ಇರಿಸಲಾಗಿದ್ದ ಬ್ಯಾರಿಕೇಡ್ ಹತ್ತುವ ಪ್ರಯತ್ನ ನಡೆಸಿದರು. ಈ ವೇಳೆ ಪೊಲೀಸರು ಅವರನ್ನು ತಡೆದಿದ್ದು, ಅವರು ಬ್ಯಾರಿಕೇಡ್ ಎದುರಿನಲ್ಲೇ ಪ್ರತಿಭಟನೆಗೆ ಕುಳಿತರು.
ರಾಹುಲ್ ಗಾಂಧಿ ಸೇರಿದಂತೆ ಹಲವರು ವಶಕ್ಕೆ: ಪೊಲೀಸ್ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ್ದರಿಂದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಶಿವಸೇನೆಯ ಸಂಜಯ್ ರಾವತ್ ಮತ್ತು ಟಿಎಂಸಿಯ ಸಾಗರಿಕಾ ಘೋಸ್ ಸೇರಿದಂತೆ ಅನೇಕ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ಅವರು ಮಾತನಾಡಲು ಸಾಧ್ಯವಿಲ್ಲ ಎಂಬುದು ನಿಜಾಂಶವಾಗಿದೆ. ದೇಶದ ಮುಂದೆ ಸತ್ಯಾಂಶವಿದೆ. ಇದು ರಾಜಕೀಯ ಹೋರಾಟವಲ್ಲ. ಇದು ಸಂವಿಧಾನ ಉಳಿಸಲು ನಡೆದಿರುವ ಹೋರಾಟ. ಈ ಹೋರಾಟವು ಒಬ್ಬ ವ್ಯಕ್ತಿಗೆ ಒಂದು ಮತಕ್ಕಾಗಿ. ನಮಗೆ ಶುದ್ದ ಮತ್ತು ಸ್ಪಷ್ಟ ಮತಪಟ್ಟಿ ಬೇಕು” ಎಂದು ಆಗ್ರಹಿಸಿದರು.
ಪೊಲೀಸರ ಅನುಮತಿ ಇಲ್ಲದೆ ಪ್ರತಿಭಟನೆ:ಇಂಡಿಯಾ ಒಕ್ಕೂಟ ಸಂಸದರ ಪ್ರತಿಭಟನಾ ಮೆರವಣಿಗೆ ತಡೆದ ಕ್ರಮದ ಕುರಿತು ಮಾತನಾಡಿರುವ ದೆಹಲಿ ಪೊಲೀಸರು, ಈ ಪ್ರತಿಭಟನೆ ನಡೆಸುವ ಸಂಬಂಧ ಯಾವುದೇ ಅನುಮತಿಯನ್ನು ಪೊಲೀಸರಿಂದ ಪಡೆದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಪ್ರತಿಭಟನಾ ಮೆರವಣಿಗೆ ಹಿನ್ನೆಲೆ ದೆಹಲಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಅನೇಕ ಪ್ರಮುಖ ಮಾರ್ಗಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚುನಾವಣಾ ಆಯೋಗ ಕಚೇರಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚುವರಿ ಭದ್ರತಾ ವಾಹನ ಮತ್ತು ತ್ವರಿತ ಕಾರ್ಯಚರಣೆಯ ತಂಡಗಳನ್ನು ನಿಯೋಜಿಸಲಾಗಿದೆ. ಸುತ್ತಮುತ್ತಲಿನ ಸ್ಥಳದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಕಾರ್ಯ ನಿರ್ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

