ಬೆಂಗಳೂರು, ಜುಲೈ 18: ನಗರದ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಮಾಹಿತಿ ಬಂದಿರುವುದನ್ನು ಲಘುವಾಗಿ ಪರಿಗಣಿಸುವುದಿಲ್ಲ. ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಶಾಲೆಗಳಿಗೆ ಬೆದರಿಕೆ ಕರೆ ಬಂದಿದ್ದು, ಬಾಂಬ್ ಬೆದರಿಕೆಯ ಅನೇಕ ಇ-ಮೇಲ್ಗಳೂ ಬಂದಿವೆ. ಇವುಗಳನ್ನು ಮೊದಲು ಪರಿಶೀಲನೆ ಮಾಡುತ್ತೇವೆ. ಯಾವುದನ್ನೂ ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಏಕೆ ಈ ರೀತಿ ಮಾಹಿತಿ ಬರುತ್ತದೆ ಎಂಬುದನ್ನು ಪರಿಶೀಲಿಸುತ್ತೇವೆ. ಆನಂತರ ವಾಸ್ತವ ಏನೆಂಬುದು ಗೊತ್ತಾಗಲಿದೆ ಎಂದರು.
ಪ್ರತಿ ಮನೆಗೂ ಭೇಟಿ ಕೊಟ್ಟು ಪೊಲೀಸರು ಸಮಸ್ಯೆಯನ್ನು ಆಲಿಸುತ್ತಾರೆ. ಏನಾದರೂ ಬೇರೆ ರೀತಿಯ ಸಮಸ್ಯೆ ಇದ್ದರೆ ಅದನ್ನು ಸಂಗ್ರಹಿಸುತ್ತಾರೆ. ಯಾವ ಬೀದಿಯಲ್ಲಿ ಯಾರಿದ್ದಾರೆ? ಏನು ನಡೆದಿದೆ? ಎಂಬ ಸೂಕ್ತ ಮಾಹಿತಿ ಪಡೆಯಲು ಪೊಲೀಸ್ ಇಲಾಖೆಯಿಂದ ಹೊಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಆರ್ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಮೈಕಲ್ ಕುನ್ಹಾ ಅವರ ನೇತೃತ್ವದ ವಿಚಾರಣಾ ಆಯೋಗ ನೀಡಿರುವ ವರದಿಯನ್ನು ಸಂಪುಟ ಸಭೆಯ ಮುಂದೆ ಮಂಡಿಸಲಾಗಿದೆ. ಅದರ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಮುಂದಿನ ಸಂಪುಟ ಸಭೆಯಲ್ಲಿ ಆ ವಿಚಾರದ ಚರ್ಚೆಯಾಗಲಿದೆ ಎಂದು ಗೃಹ ಸಚಿವರು ತಿಳಿಸಿದರು.

