Headlines

​ಮಂಡ್ಯದಲ್ಲಿ ವಿಶ್ವ ರೈತರ ದಿನಾಚರಣೆ: ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ವಿರುದ್ಧ ಕೆ.ಟಿ. ಶ್ರೀಕಂಠೇಗೌಡ ಆಕ್ರೋಶ

ಮಂಡ್ಯ: ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನ ಆವರಣದಲ್ಲಿ ವಿಶ್ವ ರೈತರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ರೈತಪರ ಹೋರಾಟಗಾರರ ಸಂಘದ ವತಿಯಿಂದ ಬೃಹತ್‌ ಸಮಾವೇಶ ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು ಮಾತನಾಡಿ, ರೈತರು ಕಷ್ಟ ಪಡದೇ ಹೊಲ ಗದ್ದೆಗಳಲ್ಲಿ ದುಡಿಯದೇ ಹೋದರೆ ನಾವು ಜೀವಿಸಲು ಸಾಧ್ಯವಿಲ್ಲ, ದೇಶದ ಅಭಿವೃದ್ದಿಯಲ್ಲಿ ರೈತರ ಪಾತ್ರ ಹೆಚ್ಚಿರುತ್ತದೆ ಎನ್ನುವುದನ್ನು ಮರೆಯಬಾರದು. ರೈತರ ಕಷ್ಟಗಳನ್ನು ಆಳುವ ಸರ್ಕಾರಗಳು ಕೇಳುತ್ತಿಲ್ಲ, ಅವರ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿದೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿದ್ದರೂ ಅವರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‌ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತಪರ ಹೋರಾಟಗಾರರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್ ಅವರು, ಈ ದೇಶದ ಬೆನ್ನಲಬು ರೈತರಾಗಿದ್ದಾರೆ, ರೈತ ಸಂಘವು ಯಾವಾಗಲೂ ರೈತರ ಜೊತೆ ಇರುತ್ತದೆ. ಏಕೆಂದರೆ ಶ್ರಮ ಜೀವಿಯಾಗಿರುವ ರೈತರಿಗೆ ಶಕ್ತಿ ತುಂಬುವ ಕೆಲಸವನ್ನು ನಾವು ಮಾಡಿಕೊಂಡು ಬರುತ್ತಿದ್ದೇವೆ. ರೈತರು ತಾವು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಕ್ಕಿಲ್ಲ ಎಂದು ವಿಷಾದಿಸಿದರು.

ಇದೇ ಸಂದರ್ಭದಲ್ಲಿ ಉತ್ತಮ ರೈತರಿಗೆ ಸನ್ಮಾನ ಮಾಡಲಾಯಿತು. ಹಾಗೂ ಉತ್ತಮ ತಳಿಯ ಹಳ್ಳಿಕಾರ್ ಎತ್ತುಗಳಿಗೆ ನಗದು ಬಹುಮಾನ ನೀಡುವ ಮೂಲಕ ರೈತರನ್ನು ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತಪರ ಹೋರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ರಮೇಶ್ ಕಾಳೇನಹಳ್ಳಿ, ರಾಜ್ಯ ಗೌರವಾಧ್ಯಕ್ಷರಾದ ಪಿ.ಎಂ.ರವಿಗೌಡ, ಯುವ ರಾಜ್ಯಧ್ಯಕ್ಷರಾದ ಎಂ.ಎಸ್.ರಾಜುಗೌಡ, ರಾಜ್ಯ ಉಪಾಧ್ಯಕ್ಷರಾದ ಹೆಬ್ಬರಿ ಮುನಿಯಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದರಾಜು ಅರಕೆರೆ, ಕಾನೂನು ಸಲಹೆಗಾರರಾದ ಅರುಣ್, ಮುದ್ದುಕೃಷ್ಣ, ಅಂಬಿಕ, ಬಾಲಚಂದ್ರ, ಒಕ್ಕಲಿಗ ಸಂಘದ ಜಿಲ್ಲಾಧ್ಯಕ್ಷರಾದ ತಿಮ್ಮೇಗೌಡ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ವೇಣು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!