Headlines

ಸಿಸಿಟಿವಿ ಫೂಟೇಜ್ ನೀಡದ PSIಗಳ ವಿರುದ್ಧ ಕಠಿಣ ಶಿಸ್ತುಕ್ರಮಕ್ಕೆ ಆಯೋಗ ಆದೇಶ

ಮಾಹಿತಿ ಹಕ್ಕು ಕಾಯ್ದೆಯಡಿ (RTI) ಕೋರಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸಲು ವಿಫಲವಾದ ಹಾಗೂ ಅವುಗಳನ್ನು ಸಂರಕ್ಷಿಸಿಡದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳ (PSI) ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಕರ್ನಾಟಕ ಮಾಹಿತಿ ಆಯೋಗವು ಶಿಫಾರಸು ಮಾಡಿದೆ.


​ಪೊಲೀಸ್ ಠಾಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಅಥವಾ ಕಿರುಕುಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರೊಬ್ಬರು ಸಿಸಿಟಿವಿ ಫೂಟೇಜ್‌ ನೀಡುವಂತೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರು. ಆದರೆ, “ಸಿಸ್ಟಮ್‌ನಲ್ಲಿ ಡಾಟಾ ಆಟೋ-ಡಿಲೀಟ್ ಆಗಿದೆ”, “ವಿದ್ಯುತ್ ವ್ಯತ್ಯಯದಿಂದ ಧ್ವಂಸಗೊಂಡಿದೆ” ಅಥವಾ “ಸ್ಟೋರೇಜ್ ಸಮಸ್ಯೆಯಿಂದ ದೃಶ್ಯಾವಳಿ ಲಭ್ಯವಿಲ್ಲ” ಎಂಬಿತ್ಯಾದಿ ತಾಂತ್ರಿಕ ಕಾರಣಗಳನ್ನು ನೀಡಿ ಮಾಹಿತಿ ನೀಡಲು ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಮಾಹಿತಿ ಆಯೋಗದ ಬಾಗಿಲು ತಟ್ಟಿದ್ದರು.
​ಈ ಬೇಜವಾಬ್ದಾರಿ ನಡವಳಿಕೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಾಹಿತಿ ಆಯೋಗ, ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದರ ಮೂಲ ಉದ್ದೇಶವೇ ಸಾರ್ವಜನಿಕ ಪಾರದರ್ಶಕತೆ ಕಾಯ್ದುಕೊಳ್ಳುವುದು. ತಾಂತ್ರಿಕ ನೆಪಗಳನ್ನು ಹೇಳಿ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗ, ನಿರ್ಲಕ್ಷ್ಯ ವಹಿಸಿದ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ತಕ್ಷಣವೇ ಇಲಾಖಾ ವಿಚಾರಣೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಮೇಲಧಿಕಾರಿಗಳಿಗೆ ಆದೇಶಿಸಿದೆ.

Leave a Reply

Your email address will not be published. Required fields are marked *

error: Content is protected !!