Headlines

ಬೂದನೂರು ಗ್ರಾ.ಪಂ. ಅಕ್ರಮ: ಧರಣಿಗೆ ಮಣಿದು ₹9,841 ರಿಕವರಿ; ಅಧ್ಯಕ್ಷರು, ಸದಸ್ಯರ ವಿರುದ್ಧ ಕ್ರಿಮಿನಲ್ ಕೇಸ್‌ಗೆ 15 ದಿನಗಳ ಗಡುವು!

ಮಂಡ್ಯ: ತಾಲೂಕಿನ ಬೂದನೂರು ಗ್ರಾಮ ಪಂಚಾಯಿತಿಯಲ್ಲಿ 2021-26ನೇ ಸಾಲಿನಲ್ಲಿ ನಡೆದಿದೆ ಎನ್ನಲಾದ ಅಕ್ರಮ, ಹಣ ದುರ್ಬಳಕೆ ಹಾಗೂ ಆಡಳಿತಾತ್ಮಕ ಲೋಪಗಳ ವಿರುದ್ಧ ನಡೆಯುತ್ತಿದ್ದ ಅಹೋರಾತ್ರಿ ಧರಣಿಗೆ ಅಧಿಕಾರಿಗಳು ಸ್ಪಂದಿಸಿದ್ದು, ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಹೆಸರಿನಲ್ಲಿದ್ದ ವಿದ್ಯುತ್ ಸಾಮಗ್ರಿಗಳ ಖರೀದಿ ಬಿಲ್ ಬೂದನೂರು ಗ್ರಾ.ಪಂ.ನಲ್ಲಿ ಪಾವತಿಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ₹9,841 ಮೊತ್ತವನ್ನು ಆಡಿಟ್ ರಿಕವರಿ ರೂಪದಲ್ಲಿ ವಸೂಲಿ ಮಾಡಲಾಗಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.

ಮೂರು ದಿನಗಳ ಕಾಲ ನಡೆದ ಧರಣಿಯ ಬಳಿಕ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಸ್ಥಳಕ್ಕೆ ಸ್ಪಂದಿಸಿ ಕ್ರಮ ಕೈಗೊಂಡಿರುವುದನ್ನು ಹೋರಾಟ ಸಮಿತಿ ಸ್ವಾಗತಿಸಿದೆ. ಆದರೆ, ಕೇವಲ ಹಣ ವಸೂಲಿ ಮಾಡುವುದರಿಂದ ಪ್ರಕರಣ ಮುಕ್ತಾಯಗೊಳ್ಳಬಾರದು. ಆಡಳಿತಾತ್ಮಕ ಹೊಣೆಗಾರಿಕೆ ನಿಗದಿಪಡಿಸಿ, ನಿಯಮ ಉಲ್ಲಂಘನೆ ನಡೆದಿದೆಯೇ ಎಂಬುದನ್ನು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.

ಬೂದನೂರು ಗ್ರಾಮ ಪಂಚಾಯಿತಿಯ ವಿವಿಧ ಆಡಳಿತಾವಧಿಗಳಲ್ಲಿ ಅಧ್ಯಕ್ಷರಾಗಿದ್ದ ರವಿ, ಅರುಣ ಹಾಗೂ ಮಾನಸ ಸೇರಿದಂತೆ 15 ಸದಸ್ಯರ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಆರೋಪಗಳು ತನಿಖೆಯಲ್ಲಿ ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು 15 ದಿನಗಳ ಗಡುವು ನೀಡಲಾಗಿದೆ.

ಇದರ ಜೊತೆಗೆ, ವಿದ್ಯುತ್ ಕಳ್ಳತನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಣದಿಂದ ₹15,59,724 ಪಾವತಿಯಾಗಿರುವುದಾಗಿ ದಾಖಲೆಗಳಲ್ಲಿ ಕಂಡುಬಂದಿದ್ದರೆ, ಆ ಮೊತ್ತದ ಹೊಣೆಗಾರಿಕೆಯನ್ನು ನಿಗದಿಪಡಿಸಿ ಸಂಬಂಧಪಟ್ಟವರಿಂದ ವಸೂಲಿ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಈ ಕುರಿತು ಇಲಾಖಾ ಮಟ್ಟದಲ್ಲಿ ಕ್ರಮ ಕೈಗೊಳ್ಳದಿದ್ದರೆ ಕಾನೂನುಬದ್ಧವಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿ ಹೋರಾಟಗಾರರು ಎಚ್ಚರಿಸಿದ್ದಾರೆ.

ಬೂದನೂರು ಗ್ರಾ.ಪಂ.ಗೆ ಸಂಬಂಧಿಸಿದ ಆರೋಪಗಳ ಕುರಿತು 15 ದಿನಗಳೊಳಗೆ ಇಲಾಖಾ ವಿಚಾರಣೆ ಪೂರ್ಣಗೊಳಿಸಿ, ದಾಖಲೆಗಳ ಆಧಾರದ ಮೇಲೆ ತಪ್ಪು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ಹಂತದಲ್ಲಿ ಕಾನೂನುಬದ್ಧ ಹೋರಾಟ ತೀವ್ರಗೊಳಿಸುವುದಾಗಿ ಹೋರಾಟಗಾರರು ಎಚ್ಚರಿಸಿದ್ದಾರೆ.

ಇದೀಗ ₹9,841 ರಿಕವರಿ ನಡೆದಿರುವುದು ಹೋರಾಟಗಾರರಿಗೆ ಒಂದು ಹಂತದ ಫಲಿತಾಂಶವಾದರೂ, ₹15.59 ಲಕ್ಷದ ವಿದ್ಯುತ್ ಪಾವತಿ ಸೇರಿದಂತೆ ಉಳಿದ ಆರೋಪಗಳ ಕುರಿತು ಅಧಿಕಾರಿಗಳು ಯಾವ ರೀತಿಯ ತನಿಖೆ ಮತ್ತು ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!