ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಯಾವುದೇ ಅನುಮೋದನೆ ಪಡೆಯದೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೋಳ ಹೋಬಳಿಯ ಹುಲಿಕರೆ ಗ್ರಾಮದಲ್ಲಿ ಅನಧಿಕೃತವಾಗಿ ಬಡಾವಣೆ ನಿರ್ಮಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ನಿಯಮ ಉಲ್ಲಂಘಿಸಿರುವ ಭೂಮಾಲೀಕರು ಹಾಗೂ ಇದಕ್ಕೆ ಸಾಥ್ ನೀಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಕ್ರಿಯೆ ಆರಂಭವಾಗಿದೆ.
ಹುಲಿಕರೆ ಗ್ರಾಮದ ಸರ್ವೆ ನಂಬರ್ 15/3ರಲ್ಲಿ 20 ಗುಂಟೆ ಹಾಗೂ ಸರ್ವೆ ನಂಬರ್ 19/2ರಲ್ಲಿ 1 ಎಕರೆ 4 ಗುಂಟೆ ಜಮೀನಿಗೆ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಿಂದ ವಸತಿ ಬಡಾವಣೆಗಾಗಿ ಭೂ ಪರಿವರ್ತನೆ (NA) ಪಡೆಯಲಾಗಿತ್ತು.
ಈ ಜಮೀನುಗಳು ಮೂಡಾ ಮಹಾಯೋಜನೆಗೆ ಒಳಪಡುವುದರಿಂದ, ಭೂ ಪರಿವರ್ತನೆ ಬಳಿಕ ಮೂಡಾದಿಂದ ಕಡ್ಡಾಯವಾಗಿ ವಿನ್ಯಾಸ ನಕ್ಷೆ (Layout Plan) ಹಾಗೂ ಅನುಮತಿ ಪಡೆಯಬೇಕಿತ್ತು. ಆದರೆ, ಯಾವುದೇ ಅನುಮೋದನೆ ಪಡೆಯದೆ ಅನಧಿಕೃತವಾಗಿ ಬಡಾವಣೆ ನಿರ್ಮಿಸಿ ‘ಇ’ ಖಾತೆಗಳನ್ನು ಮಾಡಲಾಗಿದೆ.
ಮೂಡಾದಿಂದ ನಕ್ಷೆ ಪಡೆದಿರುವ ಬಗ್ಗೆ ಸ್ಪಷ್ಟನೆ ಕೋರಿ ಹಾಗೂ ಅಗತ್ಯವಿದ್ದರೆ ಭೂ ಪರಿವರ್ತನೆ ಆದೇಶವನ್ನು ರದ್ದುಪಡಿಸುವಂತೆ ಶ್ರೀರಂಗಪಟ್ಟಣ ತಹಸೀಲ್ದಾರ್ ಅವರು ಮಂಡ್ಯ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಮೂಡ ಆಯುಕ್ತರಿಗೆ ಕೋರಲಾಗಿದೆ.
ತಾಲ್ಲೂಕು ಪಂಚಾಯತ್ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಸೂಚನೆ
ಮೂಡಾ ವ್ಯಾಪ್ತಿಯಲ್ಲಿದ್ದರೂ, ಕೆ.ಟಿ.ಸಿ.ಪಿ ಕಾಯ್ದೆ ಹಾಗೂ ಸರ್ಕಾರದ ಸುತ್ತೋಲೆಗಳನ್ನು ಉಲ್ಲಂಘಿಸಿ ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಾಕ ಅಧಿಕಾರಿಗಳು (EO) ಅನಧಿಕೃತವಾಗಿ ನಕ್ಷೆ ಅನುಮೋದನೆ ನೀಡಿರುವುದು ಮೂಡಾ ಆಯುಕ್ತರ ಪರಿಶೀಲನೆಯಲ್ಲಿ ದೃಢಪಟ್ಟಿದೆ.
ಈ ಗಂಭೀರ ಲೋಪದ ಕುರಿತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (CEO) ಅಧಿಕೃತ ಪತ್ರ ಬರೆದು, ನಿಯಮ ಮೀರಿ ಅನುಮೋದನೆ ನೀಡಿರುವ ತಾ.ಪಂ. ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತ ಬಡಾವಣೆಗಳಿಗೆ ಮತ್ತು ಅಕ್ರಮಗಳಿಗೆ ಕುಮ್ಮಕ್ಕು ನೀಡಿರುವ ಅಧಿಕಾರಿಗಳ ವಿರುದ್ಧ ಜಿ.ಪಂ. ಮಟ್ಟದಲ್ಲಿ ಯಾವ ರೀತಿಯ ಕ್ರಮ ಜರುಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

