Headlines

​ಜಲಜೀವನ್ ಮಿಷನ್ ಕಾಮಗಾರಿ ವಿಳಂಬ: ಗುತ್ತಿಗೆದಾರ ಬಿ.ಆರ್. ರಾಮಚಂದ್ರರವರನ್ನು ಕಪ್ಪು ಪಟ್ಟಿಗೆ ಸೇರಿಸಲು ಬೂದನೂರು ಗ್ರಾಮಸ್ಥರ ಆಗ್ರಹ!

ಮಂಡ್ಯ: ಬೂದನೂರು ಗ್ರಾಮ ಪಂಚಾಯತಿಯ ಮಂಗಯ್ಯ ನಗರದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಟೆಂಡರ್ ಪಡೆದು ಕೆಲಸ ಮಾಡದ ಗುತ್ತಿಗೆದಾರ ಬಿ. ಆರ್. ರಾಮಚಂದ್ರ ಎಂಬುವವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಬೂದನೂರು ಗ್ರಾಮಸ್ಥರು ಆಗ್ರಹಿಸಿದರು.

ಬೂದನೂರು ಗ್ರಾಮ ಪಂಚಾಯಿತಿಯ 2021-26ನೇ ಸಾಲಿನ ಆಡಳಿತ ಮಂಡಳಿಗೆ ಸಂಬಂಧಿಸಿದಂತೆ ವಿವಿಧ ಅಕ್ರಮ ಹಾಗೂ ಹಣಕಾಸು ಅವ್ಯವಹಾರಗಳ ಕುರಿತು ದೂರು ನೀಡಲಾಗಿದ್ದು, ಈ ಬಗ್ಗೆ ತನಿಖೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ರೈತ ಸಂಘ, ಸ್ವಂತಮನೆ ನಮ್ಮ ಹಕ್ಕು ಹಾಗೂ ಬೂದನೂರು ನಾಗರಿಕರ ಬಳಗದ ವತಿಯಿಂದ ಮಂಡ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ತಾಪಂ ಇಒ ಲೋಕೇಶ್ ಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯಿತಿಯ ಅಂದಿನ ಆಡಳಿತ ಮಂಡಳಿ, ಪಿಡಿಒ ಹಾಗೂ ಸಿಬ್ಬಂದಿಗೆ ಸಂಬಂಧಿಸಿದಂತೆ ಹಲವು ಅಕ್ರಮಗಳ ಕುರಿತು ಈ ಹಿಂದೆ ದೂರು ಸಲ್ಲಿಸಲಾಗಿದ್ದು, ಅವುಗಳ ಬಗ್ಗೆ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಮನವಿಯಲ್ಲಿ ತಿಳಿಸಿದ್ದಾರೆ. ದೂರುಗಳಲ್ಲಿ ಉಲ್ಲೇಖಿಸಿರುವ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರಿ ಅನುದಾನ ಹಾಗೂ ಸಾರ್ವಜನಿಕ ಹಣದ ಬಳಕೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಬೇಕು. ಅಂದಿನ ಅಧ್ಯಕ್ಷರು, ಸದಸ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪಾತ್ರದ ಬಗ್ಗೆಯೂ ತನಿಖೆ ನಡೆಸಿ, ತಪ್ಪು ಅಥವಾ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿದ್ಯುತ್ ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರೂ.15,59,724 ಮೊತ್ತ ಪಾವತಿಸಲಾಗಿದೆ ಎಂದು ಪ್ರತಿಭಟನಾಕಾರರು ಉಲ್ಲೇಖಿಸಿದ್ದು, ಈ ಪಾವತಿಯ ಮೂಲ, ಕಾರಣ ಹಾಗೂ ನಿಯಮಾನುಸಾರ ನಡೆದಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಿದರು.

ಕಳೆದ ಐದು ವರ್ಷಗಳಲ್ಲಿ ನಡೆದಿರುವ ಸಾಮಗ್ರಿ ಖರೀದಿಗಳಲ್ಲಿ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸಂಬಂಧಪಟ್ಟ ಖರೀದಿ ದಾಖಲೆಗಳು ಹಾಗೂ ಬಿಲ್‌ಗಳ ಆಧಾರದ ಮೇಲೆ ಜಿಎಸ್‌ಟಿ ಮತ್ತು ಸಿಜಿಎಸ್‌ಟಿ ಸೇರಿದಂತೆ ತೆರಿಗೆ ಪಾವತಿ ನಡೆದಿದೆಯೇ ಎಂಬುದನ್ನು ಸಂಬಂಧಪಟ್ಟ ಇಲಾಖೆಯಿಂದ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಕೆಲವು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಜಿಪಿಎಸ್ ಆಧಾರಿತ ಛಾಯಾಚಿತ್ರಗಳಿಲ್ಲದೆ ಹಣ ಪಾವತಿಸಲಾಗಿದೆ ಎಂಬ ದೂರಿನ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ತಿಳಿಸಿದರು. ಕಾಮಗಾರಿಗಳ ದಾಖಲೆ, ಸ್ಥಳ ಪರಿಶೀಲನೆ ಹಾಗೂ ಪಾವತಿ ವಿವರಗಳನ್ನು ಪರಿಶೀಲಿಸಿ, ಯಾವುದೇ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗ್ರಾಮದ ಚರಂಡಿಗಳಿಂದ ಕೆರೆ ಹಾಗೂ ಕಾಲುವೆಗಳಿಗೆ ತ್ಯಾಜ್ಯ ನೀರು ಸೇರುತ್ತಿರುವ ಕುರಿತು ಸ್ಥಳೀಯವಾಗಿ ದೂರುಗಳಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಘನತ್ಯಾಜ್ಯ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಬ್ಯಾಂಕ್ ಕಾಲೋನಿ ರಸ್ತೆಗೆ ಸಂಬಂಧಿಸಿದ ವಹಿವಾಟಿನ ಕುರಿತು ಸಹ ದೂರುಗಳಿದ್ದು, ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ವಾಸ್ತವಾಂಶ ಬಹಿರಂಗಪಡಿಸಬೇಕು. ಯಾವುದೇ ಅಕ್ರಮ ಅಥವಾ ನಿಯಮ ಉಲ್ಲಂಘನೆ ದೃಢಪಟ್ಟಲ್ಲಿ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಸಲ್ಲಿಸಿರುವ ದೂರುಗಳ ವಿಚಾರಣೆಯನ್ನು ಅನಗತ್ಯವಾಗಿ ವಿಳಂಬ ಮಾಡದೆ, ಸಾಧ್ಯವಾದಷ್ಟು ಶೀಘ್ರವಾಗಿ ಪೂರ್ಣಗೊಳಿಸಿ ವರದಿ ನೀಡಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು. ಕೆಲವು ಪ್ರಕರಣಗಳ ವಿಚಾರಣೆಯನ್ನು 15 ದಿನಗಳೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ನಿವೇಶನ ರಹಿತರಿಗೆ ಸಂಬಂಧಿಸಿದ ಸರ್ಕಾರಿ ಭೂಮಿಯ ವಿಚಾರದಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳು ಇರುವುದಾಗಿ ತಿಳಿಸಿರುವ ಪ್ರತಿಭಟನಾಕಾರರು, ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ಕಾನೂನುಬದ್ಧವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾಯ್ದೆಯಡಿ ಇರುವ ಅಧಿಕಾರ ವ್ಯಾಪ್ತಿಯಲ್ಲಿ ದೂರುಗಳನ್ನು ಪರಿಶೀಲಿಸಿ, ವಾಸ್ತವಾಂಶ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ, ಸತೀಶ್ (ಬೂಸ), ಮುಖಂಡರಾದ ಜವರಪ್ಪ, ತನು, ಮೊಹಮ್ಮದ್ ಹನೀಫ್, ಕೀಲಾರ ನಾಗರಾಜು, ಜಯಕಾಂತ, ವೇಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!