Headlines

​ಡಿಸೆಂಬರ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ: ಸಚಿವ ರಾಯರೆಡ್ಡಿ ಮಹತ್ವದ ಸುಳಿವು!

ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಕೊನೆಗೂ ಮುಹೂರ್ತ ಸನ್ನಿಹಿತವಾಗಿದ್ದು, ಮುಂಬರುವ ಡಿಸೆಂಬರ್ 15ರ ವೇಳೆಗೆ ಮತದಾನ ನಡೆಯುವ ಸಾಧ್ಯತೆ ದಟ್ಟವಾಗಿದೆ. ಕೊಪ್ಪಳದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಮುಂಬರುವ ಒಂದೆರಡು ದಿನಗಳಲ್ಲಿ ಅಧಿಕೃತ ಮೀಸಲಾತಿ ಪಟ್ಟಿ ಬಿಡುಗಡೆಯಾಗಲಿದೆ ಎಂದು ಸುಳಿವು ನೀಡಿದ್ದು, ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಕಾರ್ಯಕರ್ತರು ಈಗಿನಿಂದಲೇ ಸನ್ನದ್ಧರಾಗುವಂತೆ ಕರೆ ನೀಡಿದ್ದಾರೆ.


​ಚುನಾವಣಾ ಪ್ರಕ್ರಿಯೆ ಮತ್ತು ಮೀಸಲಾತಿ ಪಟ್ಟಿಯ ಕುರಿತು ಕಳೆದ ತಿಂಗಳು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ಶಾಸಕರು ನೀಡಿದ್ದ ಪ್ರಮುಖ ಸಲಹೆಗಳನ್ನು ಅಳವಡಿಸಿಕೊಳ್ಳಲಾಗಿದೆ.

ಮಂಗಳವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದ್ದು, ಸರ್ಕಾರದ ಹಸಿರು ನಿಶಾನೆ ಸಿಗುತ್ತಿದ್ದಂತೆ ರಾಜ್ಯ ಚುನಾವಣಾ ಆಯೋಗವು ಅಧಿಕೃತ ಅಧಿಸೂಚನೆ ಹೊರಡಿಸಲಿದೆ.


​ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ (EVM) ಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕವೇ ಮತದಾನ ನಡೆಯಲಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಂಪುಟ ಸಭೆಯಲ್ಲಿ ಮತಪೆಟ್ಟಿಗೆಗಳ ಖರೀದಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲು ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ. ಸ್ಥಳೀಯ ಮಟ್ಟದಲ್ಲಿ ತಮ್ಮ ಪಕ್ಷದ ಬಲಾಬಲ ನಿರೂಪಿಸಲು ಈ ಚುನಾವಣೆಗಳು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಪ್ರತಿಷ್ಠೆಯ ಅಖಾಡವಾಗಿದ್ದು, ಟಿಕೆಟ್‌ಗಾಗಿ ಆಕಾಂಕ್ಷಿಗಳು ತೀವ್ರ ಲಾಬಿ ಆರಂಭಿಸಿದ್ದಾರೆ.


​ಇದೇ ವೇಳೆ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸಚಿವ ಬಸವರಾಜ ರಾಯರೆಡ್ಡಿ, ಚುನಾವಣಾ ಆಯೋಗದ ಅಧಿಕಾರಿಗಳನ್ನು ಬಳಸಿಕೊಂಡು ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಎಸ್‌ಸಿ ಸಮುದಾಯದ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!