ಮಂಡ್ಯ: ಸರ್ಕಾರಿ ಕಚೇರಿಗಳ ಅಂಗಳದಲ್ಲಿ ಆರೋಪಗಳ ಸರಮಾಲೆ ಹೆಚ್ಚಾದಂತೆ ಪ್ರಶಸ್ತಿಗಳ ಗರಿಯೂ ಏರುತ್ತದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಮಂಡ್ಯ ಜಿಲ್ಲಾ ಪಂಚಾಯತ್ನಲ್ಲಿ ಪ್ರಭಾರ ಉಪ ಕಾರ್ಯದರ್ಶಿಯಾಗಿ (DS) ಕೂತಿರುವ ಡಾ. ಶಿವಲಿಂಗಯ್ಯ ಅವರ ಸುತ್ತ ಈಗ ಹಳೆಯ ಕಬ್ಬಿಣ ವಿಲೇವಾರಿ ಹಗರಣದ ಬೆನ್ನಲ್ಲೇ, ಶ್ರೀರಂಗಪಟ್ಟಣ ತಾಲ್ಲೂಕಿನ ಕಿರಂಗೂರು ಗ್ರಾಮದ ಅಕ್ರಮ ಲೇಔಟ್ ವಿನ್ಯಾಸ ನಕ್ಷೆ ಅನುಮೋದನೆ ಪ್ರಕರಣದ ಕಡತಗಳು ಭಾರಿ ಸದ್ದು ಮಾಡುತ್ತಿವೆ. ಕಬ್ಬಿಣ ಕಳ್ಳತನದ ಆರೋಪ ಕೇಳಿಬಂದಾಗ ‘ಸರ್ವೋತ್ತಮ ಸೇವಾ ಪ್ರಶಸ್ತಿ’ ಲಭಿಸಿತ್ತು; ಈಗ ಅಕ್ರಮ ಲೇಔಟ್ ವಿನ್ಯಾಸ ನೀಡಿರುವ ಆರೋಪ ಕೇಳಿಬಂದಿರುವ ಡಾ. ಶಿವಲಿಂಗಯ್ಯ ಅವರಿಗೆ ಇನ್ನ್ಯಾವ ಸೇವಾ ಪ್ರಶಸ್ತಿ ನೀಡುತ್ತಾರೆಂದು ಮಂಡ್ಯ ಜನತೆ ವ್ಯಂಗ್ಯವಾಡುತ್ತಿದ್ದಾರೆ!
ಜಿಲ್ಲಾ ಪಂಚಾಯಿತಿಯ ಅಕ್ರಮ ಕಬ್ಬಿಣ ವಿಲೇವಾರಿ ಪ್ರಕರಣದಲ್ಲಿ ಕಬ್ಬಿಣ “ತುಂಬಿದವನು ನಾನೆ ನಾನು ಅದಕ್ಕೆ ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ಅದಕ್ಕೆ ಹಣ ಕಟ್ಟಿ ಚಲನ್ ತೋರಿಸ್ತೀನಿ… ಬೇಕಾದ್ರೆ ಈಗಲೇ ಅಷ್ಟೊಂದು ದುಡ್ಡನ್ನ ಕಲೆಕ್ಟ್ ಮಾಡಿ ತೋರಿಸ್ತೀನಿ ನಿಮಗೆ… ದಯವಿಟ್ಟು ಇನ್ನೊಂದು ವಾರ-ಹದಿನೈದು ದಿನದೊಳಗೆ ನಾನು ಫುಲ್ ಕಟ್ಟಿಸಿಬಿಟ್ಟು ನಿಮಗೆ ಚಲನೂ ಕೊಡ್ತೀನಿ, ಪ್ಲೀಸ್” ಎಂದು ಮಾತನಾಡಿರುವ ಸ್ಪಷ್ಟ ಆಡಿಯೋ ಸಾಕ್ಷಿಗಳಿದ್ದರೂ ಮತ್ತು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ, ಪೊಲೀಸರ ಮೇಲೆ ತಮ್ಮ ಅಧಿಕಾರದ ಒತ್ತಡ ಹೇರಿ ಎಫ್ಐಆರ್ (FIR) ದಾಖಲಾಗದಂತೆ ಸಿಇಓ ಅವರು ನೋಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಡಾ. ಶಿವಲಿಂಗಯ್ಯ ಅವರನ್ನು ಉಳಿಸಲು ಜಿಲ್ಲಾ ಪಂಚಾಯತ್ನ ವಲಯದಲ್ಲಿ ನಾನಾ ತರದ ಕಸರತ್ತು ನಡೆಸಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಯಿತು ಎಂಬ ಆಕ್ಷೇಪ ವ್ಯಕ್ತವಾಗಿದ್ದು, ಇದರ ಬೆನ್ನಲ್ಲೇ ಈ ವಿಚಾರವಾಗಿ ಲೋಕಾಯುಕ್ತ ಹಾಗೂ ಪೊಲೀಸ್ ದೂರು ಪ್ರಾಧಿಕಾರಕ್ಕೂ ದೂರು ಸಲ್ಲಿಕೆಯಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
(ಡಾ. ಶಿವಲಿಂಗಯ್ಯ ನವರ ಫೋನ್ ಸಂಭಾಷಣೆಯ ಆಡಿಯೋ)
ಇದರ ನಡುವೆ, ಶ್ರೀರಂಗಪಟ್ಟಣ ತಾಲ್ಲೂಕು ಕೆ. ಶೆಟ್ಟಹಳ್ಳಿ ಹೋಬಳಿಯ ಕಿರಂಗೂರು ಗ್ರಾಮದಲ್ಲಿ ಒಟ್ಟು 2 ಎಕರೆ 33 ಗುಂಟೆ ವಾಣಿಜ್ಯ ಉದ್ದೇಶಕ್ಕೆ ಭೂ-ಪರಿವರ್ತನೆಯಾದ (ಅನ್ಯಕ್ರಾಂತ) ಜಮೀನುಗಳಲ್ಲಿ ವಸತಿ ಬಡಾವಣೆ ನಿರ್ಮಿಸಲು ನಕಲಿ ಹಾಗೂ ಬಹು ವಿನ್ಯಾಸ ನಕ್ಷೆ ಸಿದ್ಧಪಡಿಸಿ ಅಕ್ರಮವಾಗಿ ಇ-ಸ್ವತ್ತು ನೀಡಲಾಗಿದೆ ಎಂಬ ಗಂಭೀರ ದೂರು ಸರ್ಕಾರದ ಜನಸ್ಪಂದನಾ ಪೋರ್ಟಲ್ ಹಾಗೂ ಉಪಲೋಕಾಯುಕ್ತರಿಗೆ ಸಲ್ಲಿಕೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಂಗೂರು ಗ್ರಾಮ ಪಂಚಾಯತ್ ಸಲ್ಲಿಸಿರುವ ಅಧಿಕೃತ ವರದಿಯಲ್ಲಿ, ವಾಣಿಜ್ಯ ಉದ್ದೇಶದ ಜಮೀನುಗಳಿಗೆ ಬಹು ನಿವೇಶನ ವಸತಿ ಉದ್ದೇಶಕ್ಕಾಗಿ ವಿನ್ಯಾಸ ನಕ್ಷೆ ಅನುಮೋದನೆ ನೀಡಿರುವ ಅಧಿಕಾರಿಗಳ ಪಟ್ಟಿಯಲ್ಲಿ ಸರ್ವೆ ನಂ. 1079/1 (20 ಗುಂಟೆ) ಮತ್ತು ಸರ್ವೆ ನಂ. 1080/1 (16 ಗುಂಟೆ) ಸಂಬಂಧಿಸಿದಂತೆ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯ ಸಾಲಿನಲ್ಲಿ ಡಾ. ಶಿವಲಿಂಗಯ್ಯ ಅವರ ಹೆಸರು ಸ್ಪಷ್ಟವಾಗಿ ನಮೂದಾಗಿದೆ.

ಎರಡು ಬಹು ವಿನ್ಯಾಸ ನಕ್ಷೆಗಳನ್ನಾಗಿ ಮಾಡಿ ಇ-ಸ್ವತ್ತು ವಿತರಿಸಿರುವುದು ಕಂಡುಬಂದಿದ್ದು, ಈ ಪ್ರಕರಣದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ. 2022ರಲ್ಲಿ ಕೇವಲ 15 ದಿನಗಳ ಕಾಲ ಮಾತ್ರ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡಿದ್ದ ಅವಧಿಯಲ್ಲೇ ಇಷ್ಟೆಲ್ಲಾ ಅಕ್ರಮಗಳಿಗೆ ಸಂಬಂಧಿಸಿದ ಕಡತಗಳಲ್ಲಿ ಹೆಸರು ತಳಕು ಹಾಕಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಅಕ್ರಮ ಲೇಔಟ್ ಅನುಮೋದನೆಯ ಕುರಿತು ಶ್ರೀರಂಗಪಟ್ಟಣದ ಪ್ರಸ್ತುತ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರೂ ಕೂಡ, ಇನ್ನೂ ಅದೇ ಹುದ್ದೆಯಲ್ಲಿ (ಉಪ ಕಾರ್ಯದರ್ಶಿ) ಶಿವಲಿಂಗಯ್ಯ ಅವರನ್ನು ಮುಂದುವರಿಸುತ್ತಿರುವ ಸಿಇಓ ನಂದಿನಿ ರವರ ಈ ನಡೆ ನಾನಾ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಈಗಾಗಲೇ ಉಪಲೋಕಾಯುಕ್ತರ ಆದೇಶದ ಮೇರೆಗೆ ಮಂಡ್ಯ ಲೋಕಾಯುಕ್ತ ಪೊಲೀಸರು ‘ಸರ್ಚ್ ವಾರಂಟ್’ ಪಡೆದು ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯತ್ ಇಒ ಕಚೇರಿಯಲ್ಲಿ ಶೋಧ ನಡೆಸಿದ್ದು, ಕಿರಂಗೂರು ಗ್ರಾಮ ಪಂಚಾಯತ್ ಕಡತಗಳ ಪ್ರತಿಯನ್ನು ಪಡೆದು ಪ್ರಾಥಮಿಕ ವರದಿಯನ್ನು ಲೋಕಾಯುಕ್ತಕ್ಕೆ ಸಲ್ಲಿಸಿದ್ದಾರೆ. ಲೋಕಾಯುಕ್ತ ಮತ್ತು ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಪರಿಶೀಲನೆ ಪ್ರಗತಿಯಲ್ಲಿದ್ದು, ಅಂತಿಮ ವರದಿಯ ಬಳಿಕ ಮೇಲಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಭಾರೀ ಕುತೂಹಲ ಹುಟ್ಟುಹಾಕಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ತನ್ನ ಗೌರವವನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ದಿಟ್ಟ ಹೆಜ್ಜೆ ಇಡಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಹಳೆಯ ವರದಿ: ಈ ಹಿಂದೆ ಡಾ ಶಿವಲಿಂಗಯ್ಯ ರವರ ಬಗ್ಗೆ ಪ್ರಕಟವಾದ ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ
