Headlines

ಬಿಎಂಟಿಸಿಯಲ್ಲಿ ಸ್ಪೇರ್ ಪಾರ್ಟ್ಸ್ ಹಗರಣ: 21 ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲು!

ಬೆಂಗಳೂರು: ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾಗಿರುವ ಬಿಎಂಟಿಸಿಯಲ್ಲೇ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಪೇರ್ ಪಾರ್ಟ್ಸ್ ಹಗರಣ ನಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. ಬಸ್‌ಗಳಿಗೆ ಅಗತ್ಯವಾದ ಬಿಡಿಭಾಗಗಳಿಲ್ಲದೆ ರಸ್ತೆಯ ಮಧ್ಯದಲ್ಲೇ ಬಿಎಂಟಿಸಿ ಬಸ್ಸುಗಳು ಕೆಟ್ಟು ನಿಲ್ಲುತ್ತಿದ್ದರೆ, ಇತ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಬಿಡಿಭಾಗಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ಲೂಟಿ ಮಾಡಿರುವ ಆರೋಪ ಇದೀಗ ಬಯಲಾಗಿದೆ.

ಹೌದು, ಬಿಎಂಟಿಸಿಗೆ ಸ್ಪೇರ್ ಪಾರ್ಟ್ಸ್ ಪೂರೈಕೆ ಮಾಡದಿದ್ದರೂ ಪೂರೈಕೆ ಮಾಡಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಬಿಡುಗಡೆ ಮಾಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಬರೋಬ್ಬರಿ ಐದು ಸ್ಪೇರ್ ಪಾರ್ಟ್ಸ್ ಕಂಪನಿಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, 2,820 ಬಿಡಿಭಾಗಗಳನ್ನು ಪೂರೈಕೆ ಮಾಡಿರುವುದಾಗಿ ತೋರಿಸಲಾಗಿದೆ ಎನ್ನಲಾಗಿದೆ.

2021ರಿಂದ 2026ರವರೆಗೆ ನಡೆದಿರುವ ಈ ಅಕ್ರಮದಿಂದ ಬಿಎಂಟಿಸಿಗೆ ಸುಮಾರು 3 ಕೋಟಿ 97 ಲಕ್ಷದ 83 ಸಾವಿರದ 142 ರೂಪಾಯಿ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಸಿಯ ಭದ್ರತಾ ಮತ್ತು ಜಾಗೃತ ದಳದ ಅಧಿಕಾರಿಗಳು ನಡೆಸಿದ ಆಂತರಿಕ ತನಿಖೆಯಲ್ಲಿ 21 ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪಾತ್ರದ ಬಗ್ಗೆ ಅಕ್ರಮ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಸೆಕ್ಯುರಿಟಿ ಆಫೀಸರ್ ಪರಿಮಳ ನಾಯ್ಕ್ ಅವರು ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ 21 ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಆದರೆ ಇಲ್ಲಿ ಮತ್ತೊಂದು ಗಂಭೀರ ಪ್ರಶ್ನೆ ಎದುರಾಗಿದೆ. ಆಂತರಿಕ ತನಿಖೆಯಲ್ಲೇ ಅಕ್ರಮ ಬಯಲಾಗಿದ್ದರೂ, ಆರೋಪ ಎದುರಿಸುತ್ತಿರುವ 21 ಮಂದಿ ವಿರುದ್ಧ ಈವರೆಗೂ ಸೂಕ್ತ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲ, ಆರೋಪಿತರು ಈಗಲೂ ಬಿಎಂಟಿಸಿಯಲ್ಲೇ ಕೆಲಸ ಮುಂದುವರಿಸುತ್ತಿದ್ದಾರೆ ಎಂಬ ಮಾಹಿತಿ ಚರ್ಚೆಗೆ ಗ್ರಾಸವಾಗಿದೆ.

ಒಂದೆಡೆ ಬಸ್ಸುಗಳಿಗೆ ಬಿಡಿಭಾಗಗಳಿಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಬಿಡಿಭಾಗಗಳ ಪೂರೈಕೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿರುವ ಆರೋಪ ಬಿಎಂಟಿಸಿ ಆಡಳಿತದ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತಾಗಿದೆ.

ಹಾಗಾದರೆ ಈ ಕೋಟ್ಯಂತರ ರೂಪಾಯಿ ಹಗರಣದ ಹಿಂದೆ ಇನ್ನೂ ಯಾರಿದ್ದಾರೆ? ನಕಲಿ ದಾಖಲೆಗಳ ಆಧಾರದ ಮೇಲೆ ಹಣ ಬಿಡುಗಡೆ ಮಾಡಿದ ಅಧಿಕಾರಿಗಳು ಯಾರು? ತನಿಖೆಯಲ್ಲಿ ಹೆಸರು ಕೇಳಿಬಂದಿರುವ 21 ಮಂದಿಯ ವಿರುದ್ಧ ಯಾವಾಗ ಕ್ರಮ ಕೈಗೊಳ್ಳಲಾಗುತ್ತದೆ? ಸಾರ್ವಜನಿಕರ ತೆರಿಗೆ ಹಣಕ್ಕೆ ಹೊಣೆ ಯಾರು?

ಈ ಎಲ್ಲಾ ಪ್ರಶ್ನೆಗಳಿಗೆ ಬಿಎಂಟಿಸಿ ಆಡಳಿತ ಮಂಡಳಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಉತ್ತರ ನೀಡಬೇಕಿದೆ.

Leave a Reply

Your email address will not be published. Required fields are marked *

error: Content is protected !!